ಮಂಡ್ಯದಿಂದ ಭವಾನಿ ರೇವಣ್ಣ ಸ್ಪರ್ಧೆ ಇಲ್ಲ : ಎಚ್ಡಿಕೆ
ಮಂಡ್ಯ, ಡಿ. 30 : ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಸೇರಿದಂತೆ ತಮ್ಮ ಕುಟುಂಬದ ಯಾರೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಟಿ ರಕ್ಷಿತಾ ಸ್ಪರ್ಧೆ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಭಾನುವಾರ ಮಂಡ್ಯ ಜಿಲ್ಲೆಯ ಸಾತನೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ತಮ್ಮ ಕುಟುಂಬದ ಯಾವೊಬ್ಬ ಸದಸ್ಯರು ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ. ಭವಾನಿ ರೇವಣ್ಣ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಕೇವಲ ಊಹಾಪೋಹ ಎಂದು ಸ್ಪಷ್ಟಪಡಿಸಿದರು.

ಭವಾನಿ ರೇವಣ್ಣ ಅವರನ್ನು ಚುನಾವಣೆ ಕಣಕ್ಕೆ ಇಳಿಸುವ ಕುರಿತು ನಮ್ಮ ಕುಟುಂಬದೊಳಗೆ ಮತ್ತು ಪಕ್ಷದ ವೇದಿಕೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನಮ್ಮ ಕುಟುಂಬದವ ಯಾವ ಸದಸ್ಯರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನಟಿ ರಕ್ಷಿತಾ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಸಕ್ತಿ ಹೊಂದಿದ್ದಾರೆ. ರಕ್ಷಿತಾ ಅವರ ಜೊತೆಗೆ ಜೆಡಿಎಸ್‌ನಿಂದ ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಜಿಲ್ಲಾ ಮುಖಂಡರೊಂದಿಗೆ ಚರ್ಚೆ ನಡೆಸಿದ ಬಳಿಕ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.
ಮಂಡ್ಯ ನಮ್ಮದೆ : ಲೋಕಸಭೆ ಉಪ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಸೋಲು ಅನುಭವಿಸಿರಬಹುದು. ಆದರೆ, ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯಾಗಿ ಉಳಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ಪಕ್ಷ ಸಿದ್ಧತೆ ಆರಂಭಿಸಿದ್ದು, ಶೀಘ್ರವೇ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗುವುದು ಎಂದು ಹೇಳಿದರು.












Click it and Unblock the Notifications