ನಾಳೆ ಕೂಡ ಬಸ್ ಸಂಚಾರ ಬಂದ್?: ಸಾರಿಗೆ ಸಚಿವರು ಹೇಳಿದ್ದೇನು?
ಬೆಂಗಳೂರು, ಜನವರಿ 8: ಬಂದ್‌ನ ಪರಿಸ್ಥಿತಿ ನೋಡಿಕೊಂಡು ಮಧ್ಯಾಹ್ನ ಹಾಗೂ ಬುಧವಾರದ ಬಸ್ ಸಂಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.
ಬಸ್‌ಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿರುವುದರಿಂದ ಬಸ್ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಕಾರ್ಮಿಕ ಸಂಘಟನೆಗಳನ್ನು ಕೋರುತ್ತೇವೆ. ನೌಕರರು ಅದಕ್ಕೆ ಸ್ಪಂದಿಸಿದರೆ ಬಸ್ ಓಡಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.
ಇಡೀ ದೇಶದಲ್ಲಿನ ಕೈಗಾರಿಕೆಗಳು, ವಿವಿಧ ಇಲಾಖೆಗಳ ಕಾರ್ಮಿಕರು ಸೇರಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಬಸ್‌ಗಳ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಆಗುವುದಿಲ್ಲ. ಖಾಸಗಿ ವಾಹನ ಸೇವೆಗಳು ಬಂದ್ ಮಾಡುವುದಿಲ್ಲ ಎಂದಿದ್ದಾರೆ.

ಬಂದ್ ವೇಳೆ ಕಲ್ಲುತೂರಾಟದಂತಹ ಘಟನೆಗಳು ಸಾಮಾನ್ಯ. ಮಧ್ಯಾಹ್ನದ ನಂತರ ಬಂದ್ ಸನ್ನಿವೇಶ ಹೇಗಿರುತ್ತದೆಯೋ ಅವಲೋಕಿಸುತ್ತೇವೆ.
ನಾವು ನೌಕರರ ಪರವಾಗಿ ಇರುತ್ತೇವೆ. ಅವರ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ಹೀಗಾಗಿ ಜನಸಾಮಾನ್ಯರಿಗೆ ತೊಂದರೆ ಕೊಡಬೇಡಿ ಎಂದು ಅವರಿಗೆ ಮನವಿ ಮಾಡುತ್ತೇವೆ. ಸಾರಿಗೆ ಇಲಾಖೆ ಬಸ್ ಸಂಚಾರ ಆರಂಭಿಸುವ ಎಲ್ಲ ಕ್ರಮಗಳಿಗೂ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.
ಈ ರೀತಿ ಬಂದ್ ಮಾಡುವುದರಿಂದ ನಷ್ಟವೇ ಹೆಚ್ಚು. ರಾಜಕೀಯ ಪಕ್ಷಗಳು, ಸಂಘಟನೆಗಳು ನಡೆಸುವ ಬಂದ್ ಅನ್ನು ನಿಷೇಧಿಸುವಂತೆ ಸೂಕ್ತ ನೀತಿ ತರುವ ಅಗತ್ಯವಿದೆ ಎಂದು ತಮ್ಮಣ್ಣ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications