Railway New Lines: ಕರ್ನಾಟಕ ರೈಲ್ವೆ ಯೋಜನೆಗಳ, ಹೊಸ ಮಾರ್ಗ, ಕಾಮಗಾರಿ ಅಪ್ಡೇಟ್: ಎಂಬಿ ಪಾಟೀಲ

ಬೆಂಗಳೂರು, ಏಪ್ರಿಲ್ 16: ರಾಜಧಾನಿ ಬೆಂಗಳೂರು ಮತ್ತು ವಿಜಯಪುರ ನಡುವಿನ ರೈಲು ಪ್ರಯಾಣದ ದೀರ್ಘ ಅವಧಿ ಇಳಿಸಲು ಕ್ರಮ ವಹಿಸಲಾಗುತ್ತದೆ. ಬುಧವಾರ ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ ಅವರು ಧಾರವಾಡ-ಕಿತ್ತೂರು-ಬೆಳಗಾವಿ ಮಾರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗ ಸೇರಿ ರೈಲ್ವೆ ಯೋಜನೆ ಪರಿಶೀಲಿಸಿ ಮಹತ್ವದ ಅಪ್ಡೇಟ್ ನೀಡಿದ್ದಾರೆ.

ರಾಜಧಾನಿ ಬೆಂಗಳೂರು ಮತ್ತು ವಿಜಯಪುರ ನಡುವಿನ ರೈಲು ಪ್ರಯಾಣದ ಅವಧಿಯನ್ನು ಈಗಿರುವ 14-15 ಗಂಟೆಗಳಿಂದ ಕನಿಷ್ಠ 10 ಗಂಟೆಗಳಿಗೆ ಇಳಿಸಬೇಕಿದೆ. ಈ ಸಂಬಂಧ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಸಚಿವರು ಮಹತ್ವದ ಸಭೆ ನಡೆಸಿದರು. ಸಂಬಂಧಿಸಿದ ಇಲಾಖೆಗಳು ಮತ್ತು ನೈರುತ್ಯ ರೈಲ್ವೆಯ ಉನ್ನತಾಧಿಕಾರಿಗಳ ಜತೆ ರಾಜ್ಯದ ಎಲ್ಲ ರೈಲ್ವೇ ಯೋಜನೆಗಳ ಪ್ರಗತಿ ಪರಿಶೀಲಿಸಿದರು. ಇಂದು ನೀಡಿದ ಸೂಚನೆ ಕುರಿತು ಮತ್ತೊಂದು ಸಭೆ ನಡೆಸುವುದಾಗಿ ಅಧಿಕಾರಿಗಳನ್ನು ಎಚ್ಚರಿಸಿದರು.

Bengaluru-Vijayapura Train Will Takes 10 Hours Updates of Tumkur-Davanagere Hubballi-Ankola line

ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಸೇವೆ

ಬೆಂಗಳೂರು- ವಿಜಯಪುರ ನಡುವೆ ಸಂಚರಿಸುವ ಕೆಲವೊಂದಿಷ್ಟು ರೈಲುಗಳನ್ನಾದರೂ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗದ ಮೂಲಕ ಸಂಚರಿಸುವಂತೆ ಮಾಡಿದರೆ ಆ ಭಾಗದ ಜನರಿಗೆ ಹೆಚ್ಚಿನ‌ ಅನುಕೂಲ ಆಗುತ್ತದೆ ಎನ್ನುವುದನ್ನು ಸಚಿವರು ಅಂಕಿ ಸಂಖ್ಯೆ ಸಮೇತ ರೈಲ್ವೆ ಅಧಿಕಾರಿಗಳಿಗೆ ವಿವರಿಸಿದರು.

'ಬೆಂಗಳೂರು-ವಿಜಯಪುರ ನಡುವೆ 712 ಕಿ.ಮೀ. (ರೈಲ್ವೆ ದೂರ) ಅಂತರವಿದೆ. ಕೆಲವೊಮ್ಮೆ ಪ್ರಯಾಣಕ್ಕೆ 15-16 ಗಂಟೆ ಹಿಡಿಯುತ್ತಿದ್ದು, ಇದು ತ್ರಾಸದಾಯಕವಾಗಿದೆ. ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆ ಕಡೆಗೆ ಹೋಗುವ ರೈಲುಗಳು ಈಗ ಹುಬ್ಬಳ್ಳಿ ಮುಖ್ಯ ರೈಲು ನಿಲ್ದಾಣಕ್ಕೆ ಹೋಗಿ, ಎಂಜಿನ್ ಬದಲಿಸಿಕೊಂಡು ಹೋಗಬೇಕಾಗಿವೆ. ಜತೆಗೆ ಗದಗದಲ್ಲಿ ಕೂಡ ಎಂಜಿನ್ ಬದಲಾವಣೆಗೆ ನಿಲ್ಲಬೇಕಾಗಿದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ, ರೈಲುಗಳು ಹುಬ್ಬಳ್ಳಿ ದಕ್ಷಿಣ ರೈಲು ನಿಲ್ದಾಣದಲ್ಲೇ (ಹುಬ್ಭಳ್ಳಿ ಬೈಪಾಸ್) ಗದಗದ ಕಡೆಗೆ ತಿರುವು ಪಡೆದುಕೊಂಡು ಸಂಚರಿಸಬೇಕು ಎಂದು ಹೇಳಿದರು.

Bengaluru-Vijayapura Train Will Takes 10 Hours Updates of Tumkur-Davanagere Hubballi-Ankola line

ಹುಬ್ಬಳ್ಳಿ ಬೈಪಾಸ್ ಮೂಲಕ ರೈಲು ಸಂಚರಿಸಲಿ..

ಹುಬ್ಬಳ್ಳಿ ಬೈಪಾಸ್ ಮೂಲಕ ಈಗಾಗಲೇ ಗೂಡ್ಸ್ ರೈಲುಗಳು ಸಾಗುತ್ತಿವೆ. ಪ್ರಯಾಣಿಕರ ರೈಲುಗಳು ಈ ಮಾರ್ಗದಲ್ಲಿ ಸಂಚಾರ ಆರಂಭಿಸಬೇಕು. ಇದರಿಂದ ಬೆಂಗಳೂರಿನಿಂದ ಹುಬ್ಬಳ್ಳಿಗೆ ಈ ರೈಲುಗಳನ್ನು ಏರುವವರ ಸಂಖ್ಯೆ ಕಡಿಮೆಯಾಗಲಿದೆ. ಮುಂದೆ ಗದಗದಲ್ಲೂ ಬೈಪಾಸ್ ಇದ್ದು, ಅಲ್ಲಿಂದಲೇ ವಿಜಯಪುರದ ಕಡೆಗೆ ರೈಲು ಸಾಗುವಂತೆ ಮಾಡಬೇಕು.

ಹೀಗೆ ಮಾಡುವುದರಿಂದ ಹುಬ್ಬಳ್ಳಿ ಮತ್ತು ಗದಗನಲ್ಲಿ ಎಂಜಿನ್ ಬದಲಾವಣೆಗೆ ಸಮಯ ವ್ಯರ್ಥವಾಗುವುದು ತಪ್ಪಲಿದೆ. ಇದೊಂದು ಸಣ್ಣ ಉಪಕ್ರಮದಿಂದ ಬೆಂಗಳೂರು-ವಿಜಯಪುರ ನಡುವಿನ ಪ್ರಯಾಣದಲ್ಲಿ ಕನಿಷ್ಠ 2 ಗಂಟೆಗಳಷ್ಟು ಸಮಯ ಉಳಿಸಬಹುದು ಎಂದು ಅವರು ಹೇಳಿದ್ದಾರೆ. ಸಚಿವರ ಈ ಚಿಂತನೆಯನ್ನು ರೈಲ್ವೆ ಅಧಿಕಾರಿಗಳು ಮೆಚ್ಚಿಕೊಂಡಿದ್ದು, ನೈರುತ್ಯ ರೈಲ್ವೆ ಉನ್ನತಾಧಿಕಾರಿಗಳ ಜತೆ ಮಾತುಕತೆ ನಡೆಸುವ ಭರವಸೆ ನೀಡಿದರು.

Bengaluru-Vijayapura Train Will Takes 10 Hours Updates of Tumkur-Davanagere Hubballi-Ankola line

ಗದಗ ಭಾಗದಲ್ಲಿ ಜೋಡಿ ಹಳಿ ರೈಲು ಕಾರ್ಯ..

ಸದ್ಯಕ್ಕೆ ಗದಗ-ವಿಜಯಪುರ ನಡುವೆ ಜೋಡಿಹಳಿ ಹಾಕುವ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದ್ದು, ಬಾಗಲಕೋಟೆ ಸಮೀಪ ಮಾತ್ರ ಸ್ವಲ್ಪ ಕಾಮಗಾರಿ ಬಾಕಿ ಇದೆ. ಈಗ ನಡೆಯುತ್ತಿರುವ ರೈಲ್ವೆ ವಿದ್ಯುದೀಕರಣವನ್ನು ಆದಷ್ಟು ಬೇಗನೆ ಮುಗಿಸಿದರೆ, ಈ ಮಾರ್ಗದಲ್ಲಿ ವಂದೇಭಾರತ್ ರೈಲು ಸಂಚಾರ ಆರಂಭಕ್ಕೆ ಕ್ರಮ ಕೈಗೊಳ್ಳಬಹುದು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ಧಾರವಾಡ-ಕಿತ್ತೂರು-ಬೆಳಗಾವಿ ಮಾರ್ಗ ಯೋಜನೆ

ಕಿತ್ತೂರು ಕರ್ನಾಟಕ ಭಾಗದಲ್ಲಿ ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ಮಾರ್ಗಕ್ಕೆ ಮಂಜೂರಾತಿ ಸಿಕ್ಕಿದೆ. ಆದರೆ, ಮಮ್ಮಿಗಟ್ಟಿ ಬಳಿ ಮಾರ್ಗ ಬದಲಾವಣೆಗೆ ಒತ್ತಡ ಬರುತ್ತಿದೆ. ಹೀಗಾಗಿ ಭೂಸ್ವಾಧೀನ ತಡವಾಗುತ್ತಿದೆ. ಈ ಕುರಿತು ಸದ್ಯದಲ್ಲೇ ಸ್ಥಳೀಯರೊಂದಿಗೆ ಸಭೆ ನಡೆಸಲಾಗುವುದು ಎಂದು ಪಾಟೀಲ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವತ ಜತೆ ದೂರವಾಣಿಯಲ್ಲಿ ಮಾತನಾಡಿ, ಅಡಚಣೆ ನಿವಾರಿಸುವಂತೆ ಸಲಹೆ‌ ನೀಡಿದರು.

Take a Poll

ಹೆಚ್ಚಿನ ಪರಿಹಾರ ಕೇಳುತ್ತಿರುವ ರೈತರು

ಬಾಗಲಕೋಟೆ-ಕುಡಚಿ ಯೋಜನೆಯಲ್ಲೂ ಖಜ್ಜಿದೋಣಿ-ಲೋಕಾಪುರ ನಡುವೆ ಜಮೀನು ಕಳೆದುಕೊಂಡಿರುವ ರೈತರು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಕೆಲಸ ಮಾಡಲು ಬಿಡುತ್ತಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ಜತೆ ದೂರವಾಣಿ ಮೂಲಕ ಮಾತನಾಡಿ, ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಯಾದವಾಡ ಸಮೀಪ ಕೂಡ 7 ಎಕರೆ ಸ್ವಾಧೀನವು ಒಂದು ವರ್ಷದಿಂದ ಹಾಗೆಯೇ ಇದೆ. ಈ ಸಂಬಂಧ ಚಿಕ್ಕೋಡಿ ಉಪವಿಭಾಗಾಧಿಕಾರಿ ಜತೆ ಸಚಿವರು ಮಾತನಾಡಿ ಶೀಘ್ರ ಹಸ್ತಾಂತರ ಮಾಡುವಂತೆ ಇದೇ ವೇಳೆ ನಿರ್ದೇಶಿಸಿದರು.

ಗದಗ- ಕುಡಚಿ ನಡುವೆ ಅಗತ್ಯವಿರುವ 148 ಎಕರೆ ಜಮೀನನನ್ನು 3 ತಿಂಗಳಲ್ಲಿ ಕೊಡಲಾಗುವುದು. ಇದರ ಜತೆಗೆ ಈ ಯೋಜನೆಗೆ ಇನ್ನೂ 100 ಎಕರೆ ಅಗತ್ಯವಿದೆ. ಈ ಜಮೀನಿಗೆ ಈಗಾಗಲೇ ಪರಿಹಾರ ಕೊಡಲಾಗಿದೆ. ಆದರೂ ಕೆಲವರು ಕೋರ್ಟಿಗೆ ಹೋಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕುಷ್ಟಗಿ-ಜಿಮಲಾಪುರ ಯೋಜನೆಗೆ ಬೇಕಿರುವ 47 ಎಕರೆಯನ್ನು ಆದಷ್ಟು ಬೇಗ ಒದಗಿಸಲಾಗುವುದು. ಈ ಭಾಗದಲ್ಲಿ ಲಿಂಗನಬಂಡ-ಕುಷ್ಟಗಿ ನಡುವೆ ರೈಲು ಓಡಿಸಲು ಕ್ರಮ ವಹಿಸಬೇಕು ಎಂದು ಪಾಟೀಲ ಸೂಚಿಸಿದರು.

ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗದ ಅಪ್ಡೇಟ್

ಬಹುನಿರೀಕ್ಷಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗಕ್ಕೆ ಬೇಕಾದ ಭೂಸ್ವಾಧೀನ ಬಹುತೇಕ ಮುಗಿದಿದೆ. ಇನ್ನು 95 ಎಕರೆ ಜಮೀನು ಅಗತ್ಯವಿದೆ. ಈ ಪೈಕಿ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ 37 ಎಕರೆ ಮತ್ತು ತುಮಕೂರು ಜಿಲ್ಲೆಯ ಸರಹದ್ದಿನಲ್ಲಿ 58.3 ಎಕರೆ ಭೂಮಿ ಸ್ವಾಧೀನ ಬಾಕಿ ಇದೆ. ಇದಕ್ಕೆ ಹಣಕಾಸು ಇಲಾಖೆಯ ಮುಂದೆ 45 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ. ಈ ಪ್ರಕ್ರಿಯೆ 3-4 ತಿಂಗಳಲ್ಲಿ ಮುಗಿಯಬೇಕು. ಹಾಗೆಯೇ, ತುಮಕೂರು-ರಾಯದುರ್ಗ ಯೋಜನೆಗೆ ಭೂಸ್ವಾಧೀನ ಬಹುತೇಕ ಮುಗಿದಿದ್ದು, ಇನ್ನು 17 ಎಕರೆ ಮಾತ್ರ ಬಾಕಿ ಇದೆ. ಇನ್ನೊಂದು ತಿಂಗಳಲ್ಲಿ ಜಮೀನು ಹಸ್ತಾಂತರ ಆಗಬೇಕು ಎಂದರು.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ..

ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಮೊದಲ ಹಂತದ ಅನುಮೋದನೆ ಸಿಕ್ಕಿದೆ. ಮತ್ತೊಂದು ಒಪ್ಪಿಗೆ ಇನ್ನೊಂದು ತಿಂಗಳಲ್ಲಿ ಸಿಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಜಂಟಿಯಾಗಿ ಜಾಗ ಸ್ವಾಧೀನ ಮಾಡಿಕೊಂಡು, ಯೋಜನೆ ಜಾರಿ ಮಾಡಬೇಕು. ಇದ ಆದಲ್ಲಿ ಉಪಯುಕ್ತವೆಂಬ ಚಿಂತನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಸಚಿವ ಪಾಟೀಲ ಅವರಿಗೆ ಈ ಸಂದರ್ಭದಲ್ಲಿ ಮಾಹಿತಿ‌ ನೀಡಿದರು. ಆದಷ್ಟು ಬೇಗ ಈ ಮಾರ್ಗ ನಿರ್ಮಾಣ ಮಾಡಬೇಕೆಂದು ಹೇಳಿದರು.

ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ

ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಸಕಲೇಶಪುರ- ಸುಬ್ರಹ್ಮಣ್ಯ ನಡುವೆ ರೈಲ್ವೆ ಮಾರ್ಗ ಇಕ್ಕಟ್ಟನ್ನು ಎದುರಿಸುತ್ತಿದೆ. ಇದಕ್ಕೆ ಪರಿಹಾರವಾಗಿ ಪರ್ಯಾಯ ಮಾರ್ಗ ಅಭಿವೃದ್ಧಿಪಡಿಸಬೇಕೇ ಅಥವಾ ಈಗಿರುವ ಮಾರ್ಗದ ಪಕ್ಕದಲ್ಲೇ ಜೋಡಿಹಳಿ ಮಾಡಬೇಕೇ ಅಥವಾ ಎತ್ತರಿಸಿದ ಮಾರ್ಗ ಮಾಡಬೇಕೇ ಎಂಬುದು ಚಿಂತಿಸಲಾಗುತ್ತಿದೆ. ಈ ಬಗ್ಗೆ ಸಮೀಕ್ಷೆ ನಡೆಸಲು ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ಕೊಟ್ಟರು.

ಸಭೆ ಬಾರದವರಿಗೆ ಸಚಿವರ ಖಡಕ್ ಎಚ್ಚರಿಕೆ

ಭೂಸ್ವಾಧೀನಕ್ಕೆ ಇರುವ ತಾಂತ್ರಿಕ ತೊಡಕುಗಳ ನಿವಾರಣೆ ಸಲುವಾಗಿ ಕರೆದಿರುವ ಮಹತ್ತ್ವದ ಸಭೆಗಳಿಗೆ ಕೆಲವು ಹಿರಿಯ ಅಧಿಕಾರಿಗಳು ಕೋರ್ಟ್ ಕಲಾಪ ಇತ್ಯಾದಿ ನೆಪ ಹೇಳಿಕೊಂಡು, ಕಿರಿಯ ಅಧಿಕಾರಿಗಳನ್ನು ಕಳಿಸುತ್ತಿರುವುದು ಸರಿಯಲ್ಲ. ಹಿಂದಿನ ಸಭೆಗಳಲ್ಲೇ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಮುಂದಿನ ಬಾರಿಯಿಂದ ಸಂಬಂಧಿಸಿದ ನಿರ್ದಿಷ್ಟ ಅಧಿಕಾರಿಗಳೇ ಖುದ್ದಾಗಿ ಬರಬೇಕು. ಇಲ್ಲದೆ ಹೋದರೆ, ಅಮಾನತು ಮಾಡಲು ಶಿಫಾರಸು ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+