Bengaluru Rain: ಕೊನೆಗೂ ಬೆಂಗಳೂರಿಗೆ ಮಳೆ ಬರುವ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ; ಯಾವಾಗ ಗೊತ್ತಾ?
ಸಿಲಿಕಾನ್ ಸಿಟಿ ಬೆಂಗಳೂರು ಈ ಬಾರಿ ಬಿಸಿಲಿನ ಬೇಗೆಗೆ ನಲುಗಿಹೋಗಿದೆ. ದಾಖಲೆಯ ತಾಪಮಾನ ನಗರದ ಜನರ ಬದುಕನ್ನೇ ಹೈರಾಣಾಗಿಸಿದೆ. ಸದಾ ಕೂಲ್ ಆಗಿರುತ್ತಿದ್ದ ಬೆಂಗಳೂರು ಈಗ ಕಾದ ಕಾವಲಿಯಾಗಿದೆ.
ಹವಾಮಾನ ಇಲಾಖೆ ಈಗ ಬೆಂಗಳೂರು ಜನತೆಗೆ ಸಮಾಧಾನಕರ ಸುದ್ದಿ ನೀಡಿದೆ. ಹೌದು, ಕೊನೆಗೂ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಆದರೆ ಮಳೆಗಾಗಿ ಇನ್ನೂ ಒಂದಷ್ಟು ದಿನ ಕಾಯಬೇಕಾಗುತ್ತದೆ.

ಏಪ್ರಿಲ್ 13 ಮತ್ತು 14 ರ ಬಳಿಕ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಗಳು ಹೇಳಿದೆ. ಅಂದರೆ ಯುಗಾದಿ ಹಬ್ಬದ ಬಳಿಕ ನಗರದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
Good news for Bengaluru
— Karnataka Weather (@Bnglrweatherman) April 4, 2024
IMD ERF predicts rainfall for the city from mid April 13th/14th, post Yugadhi
So the long wait for #BengaluruRains are going to end very soon
Eagerly waiting 🤩❣️ pic.twitter.com/NcLMSz0qLD
ಮಳೆಯಾದರೆ ಸಾಕು ಎನ್ನುವ ಸ್ಥಿತಿ!
ಒಂದು ಕಡೆ ಬಿಸಿಲು ಮತ್ತೊಂದೆಡೆ ಟ್ರಾಫಿಕ್, ಕಚೇರಿಗೆ ಹೋಗುವವರ ಪಾಡಂತೂ ಹೇಳತೀರದಾಗಿದೆ. ಉತ್ತರ ಕರ್ನಾಟಕದ ಬಿಸಿಲಿನ ಝಳದ ಬಗ್ಗೆ ಕೇಳಿದ್ದವರಿಗೆ ಈಗ ಅದರ ಟ್ರೈಲರ್ ಅನ್ನು ಸ್ವತಃ ಅನುಭವಿಸುತ್ತಿದ್ದಾರೆ. ಅದರ ಜೊತೆಗೆ ನೀರಿನ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ಹದ ಮಳೆಯಾದರೂ ಸಾಕು ಜನ ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ.
ಸಮಾಧಾನಕರ ಸಂಗತಿ ಎಂದರೆ, ಬೇಸಿಗೆಯಲ್ಲೂ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವುದು. ಕೊಡಗು ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಕೂಡ ಮಳೆಯಾಗಿದೆ. ಚಿಕ್ಕಮಗಳೂರು, ಮೈಸೂರು, ಧಾರವಾಡ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಬೀದರ್ ಜಿಲ್ಲೆಗಳು ಈಗಾಗಲೇ ವರ್ಷದ ಮೊದಲ ಮಳೆಯನ್ನು ನೋಡಿವೆ.
ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಈ ಭಾಗದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ. ಅಶ್ವಿನಿ ಮಳೆ ಶುರುವಾದ ಬಳಿಕ ಮಳೆಯ ತೀವ್ರತೆ ಹೆಚ್ಚಾದರೂ ಅಚ್ಚರಿಯಿಲ್ಲ.
ಬೆಂಗಳೂರು ಜನಕ್ಕೆ ಮಾತ್ರ ಇನ್ನೂ ಮಳೆಯ ದರ್ಶನ ಆಗಿಲ್ಲ, ಇನ್ನು ಕೆಲವೇ ದಿನಗಳಲ್ಲಿ ಮಳೆಯಾಗುವುದು ಬಹುತೇಕ ಖಚಿತವಾಗಿದ್ದು, ಹವಾಮಾನ ಇಲಾಖೆ ಕೊಟ್ಟಿರುವ ಸೂಚನೆ ನಿಜವಾದರೆ ಸಾಕು ಎನ್ನುವಂತಾಗಿದೆ.
ಅಶ್ವಿನಿ ಮಳೆ ಆರಂಭ
ಏಪ್ರಿಲ್ 14ರಂದು ಅಶ್ವಿನಿ ಮಳೆ ಆರಂಭವಾಗಲಿದೆ. ಅಶ್ವಿನಿ ಮಳೆಯೇ ಬೆಂಗಳೂರಿಗೆ ವರ್ಷದ ಮೊದಲ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಏಪ್ರಿಲ್ ತಿಂಗಳ ಮಧ್ಯದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೂಡ ಸಾಧಾರಣ ಮಳೆಯನ್ನು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications