ರಾಜ್ಯೋತ್ಸವ ಆಚರಣೆಗೆ ಯಾವ ನಿರ್ಬಂಧವಿಲ್ಲ: ಸಿಎಂ
ಬೆಂಗಳೂರು, ಅಕ್ಟೋಬರ್, 31: ಕನ್ನಡ ರಾಜ್ಯೋತ್ಸವದ ಆಚರಣೆಗೆ ಯಾವುದೇ ಕಾಲಮಿತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಬೆಂಗಳೂರು ಪೊಲೀಸರು ವಾರದ ಅವಕಾಶ ನೀಡಿದ್ದಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿಯವರೇ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಜನರ ಹಿತಾಸಕ್ತಿಗೆ ಭಂಗ ತರಬೇಕು ಎನ್ನುವ ಉದ್ದೇಶ ಪೊಲೀಸ್ ಇಲಾಖೆಗಿಲ್ಲ. ಭದ್ರತೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈ ಗೊಳ್ಳಲಾಗಿತ್ತು. ಆದರೆ ಕನ್ನಡಿಗರ ಭಾವನೆಗೆ ಬೆಲೆ ನೀಡಿ ನಿರ್ಧಾರ ಹಿಂದಕ್ಕೆ ಪಡೆಯಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.[ರಾಜ್ಯೋತ್ಸವಕ್ಕೆ ನಿರ್ಬಂಧ : ಕನ್ನಡ ಹೋರಾಟಗಾರರು ಏನಂತಾರೆ?]

ನಾಗರಿಕರಿಗೆ ತೊಂದರೆಯಾಗದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಹಮತವಿದೆ. ದಯವಿಟ್ಟು ಪರಿಸ್ಥಿತಿ ಮನಗಂಡು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ರಸ್ತೆ ಮಧ್ಯೆ ಪೆಂಡಾಲ್ ಹಾಕುವುದನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.[2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ]
ಪೊಲೀಸರ ಈ ಕ್ರಮವನ್ನು ಕನ್ನಡ ಪರ ಸಂಘಟನೆಗಳು ಸ್ವಾಗತ ಮಾಡಿವೆ. ನಮ್ಮ ಹಬ್ಬ ಆಚರಣೆಗೆ ರಾಜ್ಯದ ರಾಜಧಾನಿಯಲ್ಲಿ ನಿರ್ಬಂಧ ಹೇರಿದ್ದು ಸರಿಯಲ್ಲ. ಗಲ್ಲ ಗಲ್ಲಿಗಳಲ್ಲೂ ಕನ್ನಡದ ಕಂಪು ಪಸರಿಸಬೇಕು ಎಂದು ಹೇಳಿವೆ. ಶುಕ್ರವಾರ ಪೊಲೀಸರು ನೀಡಿದ್ದ ಆದೇಶಕ್ಕೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.












Click it and Unblock the Notifications