ಲೋಕಸಭೆ ಚುನಾವಣೆ : ದಕ್ಷಿಣದ ರಾಜ್ಯಗಳಿಗೆ ಬೆಂಗಳೂರಲ್ಲಿ ಅಮಿತ್ ಶಾ ಕಚೇರಿ!
Recommended Video

ಬೆಂಗಳೂರು, ಆಗಸ್ಟ್ 10 : ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ನಗರ ಹಲವು ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಲಿದೆ. ದಕ್ಷಿಣದ ರಾಜ್ಯಗಳಿಗೆ ಬಿಜೆಪಿ ಕೇಂದ್ರ ಕಚೇರಿ ನಗರದಲ್ಲಿಯೇ ಇರಲಿದ್ದು, ಅಮಿತ್ ಶಾ ಇಲ್ಲಿಂದಲೇ ಕಾರ್ಯತಂತ್ರ ರೂಪಿಸಲಿದ್ದಾರೆ.
ಹೌದು, ದಕ್ಷಿಣ ರಾಜ್ಯಗಳಲ್ಲಿ ಪಕ್ಷ ಹೆಚ್ಚು ಸೀಟುಗಳನ್ನು ಗೆಲ್ಲಬೇಕು ಎಂದು ಅಮಿತ್ ಶಾ ಈಗಾಗಲೇ ನಾಯಕರಿಗೆ ಗುರಿ ನೀಡಿದ್ದಾರೆ. ಅಮಿತ್ ಶಾ ಅವರ ತಂಡ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿರುತ್ತದೆ, ಚುನಾವಣಾ ಕಾರ್ಯತಂತ್ರ ಬದಲಾವಣೆ ಮಾಡುತ್ತಿರುತ್ತದೆ.
ದಕ್ಷಿಣದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳ ಚುನಾವಣಾ ತಂತ್ರವನ್ನು ಅಮಿತ್ ಶಾ ಕರ್ನಾಟಕದಲ್ಲೇ ಸಿದ್ಧಪಡಿಸಲಿದ್ದಾರೆ. ಬೆಂಗಳೂರಿನಲ್ಲಿಯೇ ತಮ್ಮ ಕಚೇರಿಯನ್ನು ಅವರು ಹೊಂದಿರುತ್ತಾರೆ.

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಈಗಷ್ಟೇ ಮುಗಿದಿದೆ. ಚುನಾವಣೆ ವೇಳೆ ಅಮಿತ್ ಶಾ ಅವರು ಶಿವಾನಂದ ಸರ್ಕಲ್ ಬಳಿ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆ ಮನೆಯಲ್ಲಿಯೇ ಲೋಕಸಭೆ ಚುನಾವಣೆಯ ಕಾರ್ಯತಂತ್ರಗಳು ಸಿದ್ಧವಾಗಲಿವೆ.
ಈಗಾಗಲೇ ಕಚೇರಿ ಆರಂಭಿಸಲಾಗಿದೆ. ಅಲ್ಲಿ ತಂಡ ಕೆಲಸ ಮಾಡುತ್ತಿದೆ, ಅಗತ್ಯ ಸೌಲಭ್ಯಗಳು ಇವೆ. ಯಾವುದೇ ತಾಂತ್ರಿಕ ನೆರವು ಬೆಂಗಳೂರಿನಲ್ಲಿ ಬೇಗ ಸಿಗುತ್ತದೆ. ಆದ್ದರಿಂದ, ಅಮಿತ್ ಶಾ ಬೆಂಗಳೂರನ್ನೇ ಹೆಡ್ ಕ್ವಾಟ್ರರ್ಸ್ ಮಾಡಿಕೊಂಡಿದ್ದಾರೆ.
ಮೂರು ಜನರ ತಂಡ ಬೆಂಗಳೂರಿನಲ್ಲಿ ಇರಲಿದ್ದು, ಪಕ್ಷದ ರಾಷ್ಟ್ರೀಯ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತದೆ. ದಕ್ಷಿಣದ ಯಾವ ರಾಜ್ಯದಲ್ಲಿ ಯಾವ ಕಾರ್ಯತಂತ್ರ ಅನುಸರಿಸಬೇಕು ಎಂಬ ಸೂಚನೆ ತಂಡಕ್ಕೆ ಅಲ್ಲಿಂದ ರವಾನೆ ಆಗಲಿದೆ.
ದಕ್ಷಿಣದ ರಾಜ್ಯಗಳ ಜೊತೆ ಕರ್ನಾಟಕದ 28 ಕ್ಷೇತ್ರಗಳಲ್ಲಿ 23 ಕ್ಷೇತ್ರಗಳನ್ನು ಗೆಲ್ಲಬೇಕು ಎಂಬುದು ಬಿಜೆಪಿ ಗುರಿ. ಆದ್ದರಿಂದ, ಬೆಂಗಳೂರಿನಲ್ಲಿಯೇ ಕಚೇರಿಯನ್ನು ಮುಂದುವರೆಸಲು ಅಮಿತ್ ಶಾ ನಿರ್ಧರಿಸಿದ್ದಾರೆ.












Click it and Unblock the Notifications