ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪು ನಿಜಕನಸುಗಳು ಪುಸ್ತಕ ಮಾರಾಟ, ವಿತರಣೆಗೆ ತಡೆ
ಬೆಂಗಳೂರು, ನ. 23: ಟಿಪ್ಪು ಸುಲ್ತಾನ್ ಅವರ ಕುರಿತು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಬರೆದಿರುವ 'ಟಿಪ್ಪು ನಿಜಕನಸುಗಳು' ಪುಸ್ತಕದ ವಿತರಣೆ ಮತ್ತು ಮಾರಾಟಕ್ಕೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪುಸ್ತಕದಲ್ಲಿ ಹಿಂದಿನ ಮೈಸೂರು ಸಾಮ್ರಾಜ್ಯದ ಆಡಳಿತದ ಬಗ್ಗೆ ತಪ್ಪು ಮಾಹಿತಿ ಇದೆ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಒಳಗೊಂಡಿದೆ ಎಂದು ಬೆಂಗಳೂರು ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಟಿಪ್ಪು ನಿಜ ಕನಸುಗಳು ಪುಸ್ತಕವನ್ನು ಡಿಸೆಂಬರ್ 3ರ ವರೆಗೆ ಮಾರಾಟ ಮಾಡದಂತೆ ಲೇಖಕ, ಪ್ರಕಾಶಕರಾದ ಅಯೋಧ್ಯೆ ಪ್ರಕಾಶನ ಮತ್ತು ರಾಷ್ಟ್ರೋತ್ಥಾನ ಮುದ್ರಾನಾಲಯಕ್ಕೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿದೆ.
ಈ ಪುಸ್ತಕದಲ್ಲಿ ಇತಿಹಾಸವನ್ನು ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಸಮುದಾಯದ ಧಾರ್ಮಿಕ ಆಚರಣೆಯಾದ ಆಜಾನ್ ಅನ್ನು ತಪ್ಪಾಗಿ ಬಳಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ವಕ್ಫ್ ಬೋರ್ಡ್ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎಸ್.ರಫೀವುಲ್ಲಾ ಮೊಕದ್ದಮೆ ಸಲ್ಲಿಸಿದ್ದರು.

ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ತಡೆ
ಅರ್ಜಿ ವಿಚಾರಣೆ ನಡೆಸಿರುವ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಆರ್. ಮೆಂಡೋನ್ಕಾ ತಡೆಯಾಜ್ಞೆ ನೀಡಿ ಆದೇಶ ನೀಡಿದ್ದಾರೆ.
"ಮೂವರು ಪ್ರತಿವಾದಿಗಳು ಮತ್ತು ಅವರ ಮೂಲಕ ಕ್ಲೈಮ್ ಮಾಡುವ ವ್ಯಕ್ತಿಗಳು ಮತ್ತು ಏಜೆಂಟ್‌ಗಳು ಕನ್ನಡ ಭಾಷೆಯಲ್ಲಿ ಬರೆದಿರುವ "ಟಿಪ್ಪು ನಿಜ ಕನಸುಗಳು" ಪುಸ್ತಕವನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್ ಸೇರಿದಂತೆ ಯಾವ ವಿಧದಲ್ಲೂ ವಿತರಿಸದಂತೆ ಮತ್ತು ಮಾರಾಟ ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆಯ ಮೂಲಕ ನಿರ್ಬಂಧಿಸಲಾಗಿದೆ" ಎಂದು ಆದೇಶದಲ್ಲಿ ಹೇಳಲಾಗಿದೆ.

ಮುಸ್ಲಿಮರಿಗೆ ಅವಮಾನ ಮಾಡಲು ತುರುಕರು ಪದ ಬಳಕೆ
ಇತಿಹಾಸದ ಯಾವುದೇ ಸಮರ್ಥನೆ ಇಲ್ಲದೆ ಪುಸ್ತಕದಲ್ಲಿ ಟಿಪ್ಪುವಿನ ಬಗ್ಗೆ ತಪ್ಪು ಮಾಹಿತಿ ಇದೆ ಎಂದು ಆರೋಪಿಸಿ ಜಿಲ್ಲಾ ವಕ್ಫ್ ಬೋರ್ಡ್ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎಸ್.ರಫೀವುಲ್ಲಾ ಅವರು ದಾವೆ ಹೂಡಿದ್ದರು.
ಪುಸ್ತಕದಲ್ಲಿ ಬಳಸಲಾಗಿರುವ ತುರುಕರು ಎಂಬ ಪದವು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಯಾಗಿದೆ ಎಂದು ಅವರು ಆರೋಪಿಸಿದ್ದರು. ಪುಸ್ತಕದ ಪ್ರಕಟಣೆಯು ಅಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತದೆ. ಸಾರ್ವಜನಿಕ ಶಾಂತಿಗೆ ಭಂಗ ತರುತ್ತದೆ ಎಂದು ಬಿ.ಎಸ್.ರಫೀವುಲ್ಲಾ ಹೇಳಿದ್ದಾರೆ.

ವಿವಾದಾತ್ಮಕ ಪುಸ್ತಕಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತವೆ
ಬಿ.ಎಸ್.ರಫೀವುಲ್ಲಾ ಅವರ ವಾದವನ್ನು ಅಂಗೀಕರಿಸಿದ ನ್ಯಾಯಾಲಯ, "ನಾಟಕದ ವಿಷಯಗಳು ಸುಳ್ಳಾಗಿದ್ದು, ಅದರಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಸುಳ್ಳು ಮಾಹಿತಿ ಇದ್ದರೆ ಮತ್ತು ಅದನ್ನು ವಿತರಿಸಿದರೆ ಅದರಿಂದ ಸರಿಪಡಿಸಲಾಗದ ನಷ್ಟ ಉಂಟಾಗುತ್ತದೆ. ಜೊತೆಗೆ ಕೋಮು ಶಾಂತಿಗೆ ಭಂಗವುಂಟಾಗುವ ಸಾಧ್ಯತೆಗಳಿವೆ. ಸಾಮರಸ್ಯ ಮತ್ತು ಸಾರ್ವಜನಿಕ ಶಾಂತಿಗೆ ಅಪಾಯವಿದೆ. ವಿವಾದಾತ್ಮಕ ಪುಸ್ತಕಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ" ಎಂದಿದೆ

ಪುಸ್ತಕದ ವಿರುದ್ಧ ಪ್ರತಿಭಟನೆ ನಡೆಸಿದ್ದ ಮುಸ್ಲಿಂ ಸಂಘಟನೆಗಳು
ನ್ಯಾಯಾಲಯವು ಲೇಖಕ, ಪ್ರಕಾಶಕರ ಸೇರಿ ಮೂವರು ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿದೆ.
ಅಡ್ಡಂಡ ಕಾರ್ಯಪ್ಪ ಅವರು ಬರೆದಿರುವ ಪುಸ್ತಕದ ವಿರುದ್ಧ ಈ ಹಿಂದೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಇನ್ನು, ಇತ್ತಿಚೆಗೆ ಟಿಪ್ಪುವನ್ನು ಕೊಂದವರು ಕನ್ನಡಿಗರು ಎಂದು ಹೇಳಿ ಒಂದು ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಬಳಿಕ ಇದು ವಾಟ್ಸಾಪ್ ವಿವಿಯ ಪರಿಣಾಮ ಎಂದು ಹಲವರು ವ್ಯಂಗ್ಯವಾಡಿದ್ದರು.












Click it and Unblock the Notifications