ಕಾಂಗ್ರೆಸ್ ಗ್ಯಾರಂಟಿಗಳ 'ಅಡ್ಡ ಪರಿಣಾಮ' ಬಿಚ್ಚಿಟ್ಟ ಕುಮಾರಸ್ವಾಮಿ!
ಬೆಂಗಳೂರು, ಸೆಪ್ಟೆಂಬರ್ 11; ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಸೋಮವಾರ ಬೆಂಗಳೂರು ನಗರ ಬಂದ್‌ಗೆ ಕರೆ ನೀಡಿದೆ. ನಗರದಲ್ಲಿ ಆಟೋ, ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಟೀಕಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಅವರು, 'ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ 'ಅಡ್ಡ ಪರಿಣಾಮ'ದ ತೀವ್ರತೆ ಜನರಿಗೆ ತಟ್ಟುತ್ತಿದೆ. ಸರಕಾರಿ ಸೌಲಭ್ಯಗಳ ಹಂಚಿಕೆಯಲ್ಲಿನ ಅಸಮಾನತೆ, ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ 'ಶಕ್ತಿ' ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ' ಎಂದು ಹೇಳಿದ್ದಾರೆ.

'ಸರಕಾರವು ಖಾಸಗಿ ಸಾರಿಗೆ ಒಕ್ಕೂಟದವರ ಬೇಡಿಕೆಗಳನ್ನು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯತೆಯಿಂದ ಪರಿಶೀಲಿಸಬೇಕು. ಅವರ ಬೇಡಿಕೆಗಳು ಈಡೇರಿಸಲಾಗದ ಅಸಾಧ್ಯ ಡಿಮ್ಯಾಂಡ್ ಗಳಲ್ಲ. ಅವರಿಗೂ ಕುಟುಂಬಗಳಿವೆ, ತಂದೆತಾಯಿ, ಮಕ್ಕಳು ಇರುತ್ತಾರೆ ಎನ್ನುವುದನ್ನು ಸರಕಾರ ಮರೆಯಬಾರದು' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
'ಕಾಟಾಚಾರಕ್ಕೆ ಕರೆದು ಮಾತನಾಡುವುದಲ್ಲ. ವಾಸ್ತವತೆಗೆ ತಕ್ಕಂತೆ ಕಷ್ಟದಲ್ಲಿರುವ ಅವರಿಗೆ ನೆರವಾಗಬೇಕು. ನುಡಿದಂತೆಯೇ ನಡೆದು, 'ಗ್ಯಾರಂಟಿ ಬಾಧಿತರ' ಬದುಕಿಗೆ ಪರಿಹಾರ ಒದಗಿಸಬೇಕು ಎನ್ನುವುದು ನನ್ನ ಆಗ್ರಹ.ತಕ್ಷಣವೇ ಬಂದ್ ನಿರತರನ್ನು ಮುಖ್ಯಮಂತ್ರಿಗಳದ ಶ್ರೀ ಸಿದ್ದರಾಮಯ್ಯ ಅವರು, ಸಾರಿಗೆ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರು ಕರೆದು ಮಾತನಾಡಬೇಕು' ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಶಕ್ತಿ ಯೋಜನೆ; ಕರ್ನಾಟಕ ಸರ್ಕಾರ ನೀಡಿದ್ದ ಗ್ಯಾರಂಟಿಗಳಲ್ಲಿ ಮೊದಲು ಬಾರಿಗೆ ಬಂದಿದ್ದು ಶಕ್ತಿ ಯೋಜನೆ. ಈ ಯೋಜನೆ ಜಾರಿ ಬಳಿಕ ಖಾಸಗಿ ಬಸ್‌ಗಳಿಗೆ ನಷ್ಟವಾಗುತ್ತಿದೆ. ಟ್ಯಾಕ್ಸಿಗಳ ಚಾಲಕರಿಗೆ ಸಂಕಷ್ಟ ಎದುರಾಗಿದೆ.
ರಾಜ್ಯ @INCKarnataka ಸರಕಾರದ ಗ್ಯಾರಂಟಿಗಳ 'ಅಡ್ಡ ಪರಿಣಾಮ'ದ ತೀವ್ರತೆ ಜನರಿಗೆ ತಟ್ಟುತ್ತಿದೆ. ಸರಕಾರಿ ಸೌಲಭ್ಯಗಳ ಹಂಚಿಕೆಯಲ್ಲಿನ ಅಸಮಾನತೆ, ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ 'ಶಕ್ತಿ' ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ.1/5#ಬದುಕಿಗೆ_ಗ್ಯಾರಂಟಿ_ಕೊಡಿ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 11, 2023
ಈ ಕುರಿತು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆಗೆ ಸಭೆ ನಡೆಸಿತ್ತು. ಚಾಲಕರ ನೆರವಿಗೆ ಬರುತ್ತೇವೆ ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಸಮಸ್ಯೆ ಬಗೆಹರಿಸದ ಹಿನ್ನಲೆಯಲ್ಲಿ ಇಂದು ಬಂದ್ ನಡೆಸಲಾಗುತ್ತಿದೆ.
ಕರ್ನಾಟಕ ಬಿಜೆಪಿಯೂ ಬೆಂಗಳೂರು ಬಂದ್ ಬಗ್ಗೆ ಟ್ವೀಟ್ ಮಾಡಿದೆ. 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಾಸ್ತವಿಕ ಶಕ್ತಿ ಯೋಜನೆಯಿಂದಾಗಿ ಖಾಸಗಿ ಸಾರಿಗೆ ವ್ಯವಸ್ಥೆ ಅಯೋಮಯವಾಗಿದೆ. ಖಾಸಗಿ ಆಟೋ, ಟ್ಯಾಕ್ಸಿ, ಬಸ್ ಚಾಲಕರ ಬದುಕನ್ನೇ ಕಿತ್ತುಕೊಂಡು ಬೀದಿ ಪಾಲು ಮಾಡಲಾಗಿದೆ. ಕಳೆದ ಮೂರು ತಿಂಗಳಿಂದ ಖಾಸಗಿ ಸಾರಿಗೆ ಸಂಘಗಳು ಸಿದ್ದರಾಮಯ್ಯ ಅವರ ಸರ್ಕಾರವನ್ನು ಎಚ್ಚರಿಸಿಕೊಂಡು ಬಂದಿದ್ದರೂ ಮೊಂಡಾಟವಾಡುವುದನ್ನು ಬಿಡಲಿಲ್ಲ. ಪರಿಣಾಮ ಇಂದು ಕರ್ನಾಟಕ ಬಂದ್‌ನಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ" ಎಂದು ಟೀಕಿಸಿದೆ.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 72 ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಣೆ ಮಾಡಿವೆ. ಆದರೆ ನಗರದ ರಸ್ತೆಗಳಲ್ಲಿ ಆಟೋ, ಟ್ಯಾಕ್ಸಿಗಳ ಸಂಚಾರವಿದೆ. ಖಾಸಗಿ ಬಸ್‌ಗಳು ಸಂಚಾರ ಸಂಪೂರ್ಣ ಸ್ಥಗಿತಗೊಂಡಿಲ್ಲ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಟ್ಯಾಕ್ಸಿಗಳು ಸಂಚಾರ ನಡೆಸುತ್ತಿವೆ.
ಬೆಂಗಳೂರು ರೈಲು ನಿಲ್ದಾಣದಿಂದ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್‌ಗೆ ಬೆಂಬಲ ನೀಡಿರುವ ಸಂಘಟನೆಗಳು ಪ್ರತಿಭಟನಾ ಜಾಥಾ ಆರಂಭಿಸಿವೆ. ಫ್ರೀಡಂ ಪಾರ್ಕ್ ತನಕ ಈ ಜಾಥಾ ನಡೆಯಲಿದೆ. ಅತ್ತಿಬೆಲೆ, ಜಾಲಹಳ್ಳಿ ಕ್ರಾಸ್ ಬಳಿ ಆಟೋ ತಡೆಯುತ್ತಿದ್ದ ಸಂಘಟನೆಗೆ ಸದಸ್ಯರಿಗೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ದೇವನಹಳ್ಳಿಯಲ್ಲಿ ಸೋಮವಾರ ಮುಂಜಾನೆ 3 ಟ್ಯಾಕ್ಸಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅತ್ತಿಬೆಲೆಯಲ್ಲಿ ಟಿಟಿಗಳನ್ನು ತಡೆಯುತ್ತಿದ್ದ ಚಾಲಕರಿಗೆ ಪೊಲೀಸರು ಎಚ್ಚರಿಕೆ ಕೊಟ್ಟರು. ಮೆಜೆಸ್ಟಿಕ್ ಸುತ್ತಮುತ್ತ ಆಟೋಗಳ ಸಂಚಾರ ಕಡಿಮೆ ಇದೆ. ಜನರು ಸಂಚಾರ ನಡೆಸಲು ನಮ್ಮ ಮೆಟ್ರೋ, ಬಿಎಂಟಿಸಿ ಬಳಕೆ ಮಾಡುವುದು ಅನಿವಾರ್ಯವಾಗಿದೆ.












Click it and Unblock the Notifications