ಡಿ7: ಯಡಿಯೂರಪ್ಪ ವಾಪಸಾತಿಗೆ ಮಹೂರ್ತ ಫಿಕ್ಸ್?
ಬೆಳಗಾವಿ, ಡಿ.3: ಯಡಿಯೂರಪ್ಪ ಬಿಜೆಪಿಗೆ ಮರಳುವ ವಿಚಾರ ಅಂತಿಮ ಚರಣ ತಲುಪಿದ್ದು, ಸದ್ದಿಲ್ಲದೇ ಅಂತಿಮ ವಿಧಿವಿಧಾನಗಳು ನೆರವೇರುತ್ತಿವೆ ಎಂದು ಮೂಲಗಳು ತಿಳಿಸಿವೆ.
ಇತ್ತ ಚಳಿಗಾಲದ ಅಧಿವೇಶನ ಮುಗಿದು, ಅತ್ತ ನಾಳೆಗೆ (ಡಿ. 4) ದೆಹಲಿ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದ ಮರುಘಳಿಗೆಯೇ ಯಡಿಯೂರಪ್ಪ ವಾಪಸಾತಿಗೆ ಮಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ.
ಗಮನಾರ್ಹವೆಂದರೆ ನಿನ್ನೆ-ಮೊನ್ನೆಯವರೆಗೂ ' ಬಿಜೆಪಿಗೆ ವಾಪಸ್ಸಾ? ನೋ ಛಾನ್ಸ್! ' ಎನ್ನುತ್ತಿದ್ದ ಕೆಜೆಪಿ ನಾಯಕ ಯಡಿಯೂರಪ್ಪ ಅವರಿಗೂ 'ಈ ಬಾರಿ ಮಹೂರ್ತ ಕೂಡಿಬಂದಿದೆ' ಅನ್ನಿಸಿದ್ದು, 'ಡಿ 7ಕ್ಕೆ ಬಿಜೆಪಿಗೆ ಹೋಗುವುದು ನಿಕ್ಕಿಯಾಗಿದೆಯಂತೆ?' ಎಂದು ಕೇಳಿದ್ದಕ್ಕೆ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ನಕ್ಕು ಸುಮ್ಮನಾಗಿದ್ದಾರೆ.

ಅನಂತ ವಿರೋಧದ ನಡುವೆಯೂ
ಯಡಿಯೂರಪ್ಪ ಮರುಸೇರ್ಪಡೆ ಕುರಿತು ಒಂದೆರಡು ದಿನಗಳಿಂದ ಚಿಂತನ-ಮಂಥನ ಕ್ಷಿಪ್ರಗತಿಯಲ್ಲಿದ್ದು, ಬಿಜೆಪಿ-ಕೆಜೆಪಿ ಪಕ್ಷ ಮಟ್ಟದಲ್ಲಿ ಚಚರ್ಚೆಗಳು ಅಂತಿಮ ಹಂತಕ್ಕೆ ಬಂದುನಿಂತಿವೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ. ಕುತೂಹಲದ ಸಂಗತಿಯೆಂದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ವಿರೋಧದ ನಡುವೆಯೂ ಯಡಿಯೂರಪ್ಪ ಅವರನ್ನು ಬೇಷರತ್ ಪಕ್ಷಕ್ಕೆ ಸೇರಿಸಿಕೊಳ್ಳಲು ಹಸಿರು ನಿಶಾನೆ ದೊರೆತಿದೆ ಎಂದು ವಿಜಯವಾಣಿ ದಿನಪತ್ರಿಕೆ ವರದಿ ಮಾಡಿದೆ.

ಬಿಜೆಪಿಯಲ್ಲಿ ಕೇಡರ್ ಉಂಟು ಲೀಡರ್ ಇಲ್ಲ:
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಿಜೆಪಿಯ ಪರವಾದ ವಾತಾವರಣವನ್ನು ಸೃಷ್ಟಿಸಬಹುದು. ಆದರೆ ಮತ ತರಬೇಕಾದರೆ ಯಡಿಯೂರಪ್ಪ ಬೇಕೇ ಬೇಕು ಎಂಬುದು ರಾಜ್ಯ ಬಿಜೆಪಿ ಮುಖಂಡರ ಅಭಿಪ್ರಾಯವಾಗಿದೆ.
ರಾಜ್ಯ ಬಿಜೆಪಿಯಲ್ಲಿ ಕೇಡರ್ ಇದೆ. ಆದರೆ ಲೀಡರ್ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದು ಸಾಬೀತಾಗಿರುವುದ ಹೈಕಮಾಂಡಿಗೂ ಮನದಟ್ಟಾಗಿದೆ. ತತ್ಫಲವಾಗಿ ಯಡಿಯೂರಪ್ಪ ವಾಪಸಾತಿಗೆ ಬಿಜೆಪಿ ಮುಂದಾಗಿದೆ.

ಯಡಿಯೂರಪ್ಪ ಸಧ್ಯದಲ್ಲೇ ದಿಲ್ಲಿಗೆ ದೌಡು
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ನಾಯಕರಾದ ಅರುಣ್ ಜೇಟ್ಲಿ ಮತ್ತು ನಿತಿನ್ ಗಡ್ಕರಿ ಅವರುಗಳು ಡಿ. 4 ಅಥವಾ 5ರಂದು ಯಡಿಯೂರಪ್ಪ ಜತೆ ಚರ್ಚಿಸಲಿದ್ದಾರೆ. ಹಾಗಾಗಿ ತಕ್ಷಣ ದಿಲ್ಲಿಗೆ ಬರುವಂತೆ ಯಡಿಯೂರಪ್ಪಗೆ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ.

ಸಂಕ್ರಮಣ ಕಾಲದಲ್ಲಿ ಬಿಜೆಪಿ- ಕೆಜೆಪಿ
ಪಂಚ ರಾಜ್ಯಗಳ ಚುನಾವಣೆ ಮೇಲೆ ವರಿಷ್ಠರಿ ನಿಗಾವಹಿಸಿದ್ದರಿಂದ ಯಡಿಯೂರಪ್ಪ ವಾಪಸಾತಿ ಹಿನ್ನಡೆ ಕಂಡಿತ್ತು. ಇದೀಗ ಚುನಾವಣೆಗಳು ನಾಳೆಗೆ ಮುಗಿಯಲಿದ್ದು, ಫಲಿತಾಂಶಕ್ಕೂ ಮುನ್ನ ಡಿ. 7ರಂದು ಯಡಿಯೂರಪ್ಪ ವಾಪಸಾತಿ ನವದೆಹಲಿಯಲ್ಲಿಯೇ ಘೋಷಣೆಯಾಗಲಿದ್ದು, ಸಂಕ್ರಾಂತಿ ವೇಳೆಗೆ ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಕೆಜೆಪಿಯನ್ನು ವಿಲೀನ ಮಾಡಲಿದ್ದಾರೆ ಎಂದು ಯಡಿಯೂರಪ್ಪ ಆಪ್ತಮೂಲಗಳು ತಿಳಿಸಿವೆ.












Click it and Unblock the Notifications