ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಳಗಾವಿಯ ಅನುಪಮಾ ರಾಜ್ಯಕ್ಕೆ ಪ್ರಥಮ
ಬೆಂಗಳೂರು, ಮೇ 8: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಬೆಳಗಾವಿಯ ಅನುಪಮ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಸೋಮವಾರ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸವದತ್ತಿಯ ಕುಮಾರೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಪಮಾ ಶ್ರೀಶೈಲ್ ಹಿರೇಹೊಳಿ 625 ಅಂಕ ಗಳಿಸಿ ರಾಜ್ಯದ ಇತರ ಮೂವರು ವಿದ್ಯಾರ್ಥಿಗಳೊಂದಿಗೆ ಪ್ರಥಮ ರ‍್ಯಾಂಕ್ ಹಂಚಿಕೊಂಡಿದ್ದಾರೆ.

ಶೈಕ್ಷಣಿಕ ವರ್ಷದ ಆರಂಭದಿಂದಲೇ ತಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ ಎಂದು ಹರ್ಷ ವ್ಯಕ್ತಪಡಿಸಿದ ಅನುಪಮಾ, ತಾವು ಪರೀಕ್ಷೆಗಾಗಿ ಶಾಲೆಗೆ ಹೋಗುವ ಮೊದಲು ಬೆಳಿಗ್ಗೆ ಎರಡು ಗಂಟೆಗಳ ಕಾಲ ಮತ್ತು ಶಾಲೆಯಿಂದ ಹಿಂದಿರುಗಿದ ನಂತರ ಮಧ್ಯರಾತ್ರಿಯವರೆಗೆ ಓದುತ್ತಿದ್ದಾಗಿ ಹೇಳಿದರು.
ನಾನು ಟಾಪರ್ ಆಗುವ ನಿರೀಕ್ಷೆಯಲ್ಲಿದ್ದೆ ಅದರಂತೆಯೇ ಈಗ ಅಗ್ರಸ್ಥಾನ ಪಡೆದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ಅನುಪಮಾ ತಂದೆ ಶ್ರೀಶೈಲ್ ಸವದತ್ತಿಯ ರೇಣುಕಾ-ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಒಂದು ವರ್ಷದ ಹಿಂದೆ ನಿಧನರಾಗಿದ್ದಾರೆ. ತಾಯಿ ರಾಜಶ್ರೀ ಸವದತ್ತಿಯ ಎಂಎಂ ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ.

ಅನುಪಮಾ ಅವರು ತಮ್ಮ ಪ್ರಿ-ಯೂನಿವರ್ಸಿಟಿ ಶಿಕ್ಷಣಕ್ಕಾಗಿ ವಿಜ್ಞಾನ ಸ್ಟ್ರೀಮ್ ಅನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆಕೆಗೆ ಐಎಎಸ್ ಅಧಿಕಾರಿಯಾಗುವ ಆಸೆ ಇದೆ. ಸೋಮವಾರ ಪ್ರಕಟವಾದ 10ನೇ ತರಗತಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಂಗಳೂರಿನ ಬಾಲಕಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಶೇ. 100ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷದ 85.13 ಕ್ಕೆ ಹೋಲಿಸಿದರೆ ಈ ಬಾರಿ 83.89 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಲು www.karresults.nic.in ಗೆ ಭೇಟಿ ನೀಡಬಹುದು. ಭೂಮಿಕಾ ಪೈ (ಬೆಂಗಳೂರು), ಯಶಸ್ ಗೌಡ (ಚಿಕ್ಕಬಳ್ಳಾಪುರ), ಅನುಪಮಾ ಶ್ರೀಶೈಲ ಹಿರೇಹೊಳೆ (ಬೆಳಗಾವಿ) ಮತ್ತು ಭೀಮನಗೌಡ ಹನುಮಂತಗೌಡ ಬಿರಾದಾರ್ ಪಾಟೀಲ್ (ಮುದ್ದೇಬಿಹಾಳ) 625ಕ್ಕೆ 625 ಅಂಕ ಗಳಿಸಿದ್ದಾರೆ.
ಕಳೆದ ವರ್ಷ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದರು. ಈ ವರ್ಷ, ಸರ್ಕಾರವು ಜಿಲ್ಲಾವಾರು ಸಾಧನೆಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಚಿತ್ರದುರ್ಗ ಶೇಕಡಾ 96.8 ರಷ್ಟು ಉತ್ತೀರ್ಣರಾಗುವ ಮೂಲಕ ರಾಜ್ಯಕ್ಕೆ ಅಗ್ರಸ್ಥಾನದಲ್ಲಿದೆ, ನಂತರ ಮಂಡ್ಯ (ಶೇ 96.74) ಮತ್ತು ಹಾಸನ (ಶೇ 96.68) ಸ್ಥಾನ ಪಡೆದಿದೆ. ಈ ವರ್ಷವೂ ಬಾಲಕಿಯರು 80.08ರ ವಿರುದ್ಧ ಕ್ರಮವಾಗಿ 87.87ರಷ್ಟು ಉತ್ತೀರ್ಣರಾಗಿ ಬಾಲಕರಿಗಿಂತ ಮೈಲುಗೈ ಸಾಧಿಸಿದ್ದಾರೆ.












Click it and Unblock the Notifications