ಯಾರು ಶಿಕ್ಷಣ ಸಚಿವ ಎಂಬುದೇ ಗೊತ್ತಾಗುತ್ತಿಲ್ಲ: ಸರ್ಕಾರದ ವಿರುದ್ದ ಬಿ ಸಿ ನಾಗೇಶ್ ಕಿಡಿ
ಬೆಂಗಳೂರು, ಆಗಸ್ಟ್ 18: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಅವರಲ್ಲಿ ಯಾರು ಶಿಕ್ಷಣ ಸಚಿವರು. ಸರಕಾರದ ಹಿಂದಿರುವ ಬುದ್ಧಿಜೀವಿಗಳು ಶಿಕ್ಷಣ ಸಚಿವರೇ ಎಂದು ಮಾಜಿ ಸಚಿವ ಬಿ ಸಿ ನಾಗೇಶ್ ಪ್ರಶ್ನಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ತಕ್ಷಣ ನೂತನ ಶಿಕ್ಷಣ ನೀತಿ (ಎನ್‍ಇಪಿ) ಬದಲಿಸುವ ಮಾತನಾಡಿದ್ದಾರೆ. ಅದರಲ್ಲಿರುವ ಲೋಪ ದೋಷ, ಅವುಗಳನ್ನು ಬದಲಿಸುವ ಮಾತನಾಡಿಲ್ಲ. ಇವತ್ತಿನ ರಾಜ್ಯ ಸರಕಾರದಲ್ಲಿ ಯಾರು ಶಿಕ್ಷಣ ಸಚಿವ ಎಂಬುದೇ ಗೊತ್ತಾಗುತ್ತಿಲ್ಲ. ಅವರು ತಂದಿದ್ದನ್ನು ನಾವ್ಯಾಕೆ ಮಾಡಬೇಕ್ರಿ ಎಂಬ ಹಾರಿಕೆಯ ಉತ್ತರ ಸರಿಯಲ್ಲ ಎಂದು ಅವರು ಟೀಕಿಸಿದರು.

ಭಾತೀಯ ಯೋಚನೆಗೆ ಅನುಗುಣವಾಗಿ ಶಿಕ್ಷಣ ಪದ್ಧತಿ ಇರಬೇಕೆಂದು ಡಾ.ಅಂಬೇಡ್ಕರ್, ನೇತಾಜಿ ಅವರು ಅನೇಕ ಬಾರಿ ಮಾತನಾಡಿದ್ದಾರೆ. ಸ್ವದೇಶಿ ಯೋಚನೆಗಳನ್ನು ತರಬೇಕೆಂದು ಮಹಾತ್ಮ ಗಾಂಧೀಜಿ ನುಡಿದಿದ್ದರು ಎಂದು ಹೇಳಿದರು. ಶಿಕ್ಷಣ ತಜ್ಞರ ಸಮಿತಿ ಮಾಡಿ ಪಠ್ಯಕ್ರಮ, ಪಾಠದಲ್ಲಿ ಬದಲಾವಣೆ ಮಾಡಲಾಗುತ್ತಿತ್ತು. ಇದೀಗ ಕಾಂಗ್ರೆಸ್ ರಿಸರ್ಚ್ ಟೀಮಿನಿಂದ ಬಂದ ಸಲಹೆಗಳನ್ನು ಮತ್ತು ಪಾಠಗಳನ್ನು ಸೇರಿಸಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಣ ಇಲಾಖೆಯನ್ನು ರಾಜಕೀಯಕರಣಗೊಳಿಸುತ್ತಿರುವ ರಾಜ್ಯ ಸರಕಾರವಿದು ಎಂದು ಟೀಕಿಸಿದ ಅವರು, ಎನ್‍ಇಪಿಯನ್ನು ಮೊದಲು ಓದಬೇಕು. ಅಲ್ಲಿನ ಲೋಪದೋಷಗಳನ್ನು ತಿಳಿಸಿ ಎಂದು ಆಗ್ರಹಿಸಿದರು. ಮೋದಿಜಿ ಅವರ ಸರಕಾರವು ಶ್ರೇಷ್ಠ ವಿಜ್ಞಾನಿ ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು 6 ವರ್ಷಗಳ ಕಾಲ ಅಧ್ಯಯನ ನಡೆಸಿ ಶಿಫಾರಸು ನೀಡಿತ್ತು. ಈ ಶಿಫಾರಸುಗಳನ್ನು ಜನರ ಮುಂದಿಡಲಾಗಿತ್ತು ಎಂದು ತಿಳಿಸಿದರು. 2 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳನ್ನೂ ಸೇರಿಸುವ ಪ್ರಯತ್ನ ಮಾಡಿದ್ದರು ಎಂದರು. ಗ್ರಾಮಸಭೆಗಳಲ್ಲೂ ಇದನ್ನು ಇಡಲಾಗಿತ್ತು ಎಂದರು.
ರಾಜಕೀಯ ದೃಷ್ಟಿ ಮತ್ತು ವಿರೋಧಕ್ಕಾಗಿಯೇ ವಿರೋಧ ಮಾಡುತ್ತಿದ್ದಾರೆ. ಕರ್ನಾಟಕದ ಭವಿಷ್ಯ, ಇಲ್ಲಿನ ಯುವಜನರ ದೃಷ್ಟಿಯಿಂದ ಇದು ಕೆಟ್ಟ ನಿರ್ಣಯವಾಗಲಿದೆ. ಸ್ಪರ್ಧೆಯ ದೃಷ್ಟಿಯಿಂದಲೂ ಇದು ಸರಿಯಲ್ಲ ಎಂದು ಅವರು ನುಡಿದರು. ಸಿದ್ದರಾಮಯ್ಯನವರ ಮೊಮ್ಮಗನನ್ನು ಇಂಟರ್‍ನ್ಯಾಶನಲ್ ಸ್ಕೂಲಿನಲ್ಲಿ ಓದುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ಸಿಬಿಎಸ್‍ಇ, ಐಸಿಎಸ್‍ಇ ಶಿಕ್ಷಣದಲ್ಲಿ ಓದಿಸುತ್ತಿದ್ದಾರೆ ಎಂದು ಅವರು ವಿವರಿಸಿದರು. ನಮ್ಮ ಬಡ ಮಕ್ಕಳು ಮೆಕಾಲೆಯ ಗುಲಾಮಿ ಶಿಕ್ಷಣ ಪದ್ಧತಿಯಡಿ ಓದಬೇಕೆಂಬ ಆಶಯ ಇವರದು ಎಂದು ಟೀಕಿಸಿದರು.
ಕರ್ನಾಟಕದ ಶೇ 50ರಿಂದ 60ರಷ್ಟು ಖಾಸಗಿ ಶಾಲೆಗಳ ಮಾಲೀಕರು ರಾಜಕಾರಣಿಗಳು. ಸರಕಾರಿ ಶಾಲೆಗಳನ್ನು ಮುಚ್ಚಿಸುವ ಹಿಡನ್ ಅಜೆಂಡ ಅವರದಿರಬಹುದು ಎಂದ ಅವರು, ಎನ್.ಇ.ಪಿ. ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಕೊಡುತ್ತದೆ. ಖಾಸಗಿ ಶಾಲೆಗಳಿಗೆ ಮುಂದಿನ ದಿನಗಳಲ್ಲಿ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿರಬಹುದು.
ಯಾರ ಅಭಿಪ್ರಾಯವನ್ನೂ ಪಡೆಯದೆ, ದೇಶದ ಭವಿಷ್ಯವನ್ನು ನಿರ್ಣಯಿಸುವ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮಾಡುತ್ತಿರುವುದು ದೇಶದ ದೃಷ್ಟಿಯಿಂದ ಮತ್ತು ಸಮಾಜದ ದೃಷ್ಟಿಯಿಂದ ಆಘಾತಕಾರಿ ವಿಚಾರ ಎಂದ ಅವರು, ಈ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಅನೇಕ ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. 1968ರಲ್ಲಿ ಮೊದಲನೇ ಶಿಕ್ಷಣ ನೀತಿ, 1986ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಶಿಕ್ಷಣ ನೀತಿಯನ್ನು ತರಲಾಯಿತು ಎಂದು ಹೇಳಿದರು.












Click it and Unblock the Notifications