ಮೆಟ್ರೋ ರೈಲು ಯೋಜನೆ ಹಂತ-2ರ ಕಾಮಗಾರಿ 2024ರೊಳಗೆ ಪೂರ್ಣಗೊಳಿಸಲು ಗಡುವು: ಬಸವರಾಜ ಬೊಮ್ಮಾಯಿ
ಬೆಳಗಾವಿ,ಡಿಸೆಂಬರ್ 29: ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ರ ಕಾಮಗಾರಿಯನ್ನು 2024ರೊಳಗೆ ಪೂರ್ಣಗೊಳಿಸಲು ಗಡುವು ನೀಡಿ ಕ್ರಮವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಗುರುವಾರ ಪರಿಷತ್ತಿನಲ್ಲಿ ಇಂದು ಸದಸ್ಯ ಡಾ.ಕೆ.ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಮೆಟ್ರೋ ರೈಲು ಮಾರ್ಗವನ್ನು ವಿಮಾನನಿಲ್ದಾಣಕ್ಕೆ ಜೋಡಿಸುವ ಕಾರ್ಯವನ್ನು ವರ್ಷದೊಳಗೆ ಮಾಡಲು ಸೂಚಿಸಲಾಗಿದೆ. ಇನ್ನುಳಿದ ಕಾಮಗಾರಿಯನ್ನು ಸಹ ನಿಗದಿತ ಅವಧಿಯೊಳಗಡೆ ನಡೆಸಲು ಮತ್ತು ಸುವ್ಯವಸ್ಥಿತವಾಗಿ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಲಾಕಡೌನ್ ಮತ್ತು ಇನ್ನೀತರ ಕೆಲವಿಷಯಗಳಿಂದಾಗಿ ಮೆಟ್ರೋ ಕಾಮಗಾರಿ ವಿಳಂಬವಾಗಿತ್ತು. ಪ್ರಸ್ತುತ 6 ಮಾರ್ಗಗಳಲ್ಲಿ 2 ಮಾರ್ಗಗಳನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಹಾಗೂ 3 ಮಾರ್ಗಗಳನ್ನು 2023ರಲ್ಲಿ ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ. ಮತ್ತು ಬಾಕಿ ಉಳಿದ ಇನ್ನೊಂದು ಮಾರ್ಗವನ್ನು ಮಾರ್ಚ್-2025ರಲ್ಲಿ ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಬಾಕಿ ಅನುದಾನ ನೀಡುತ್ತೇವೆ: ದಾವಣಗೆರೆ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಬಾಕಿ ಹಣ ಒದಗಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ಅಲ್ಪಸಂಖ್ಯಾತರ ಇಲಾಖೆಯ ಸಚಿವರು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೆಚ್ಚುವರಿಯಾಗಿ ಮತ್ತೊಂದು ಮೌಲಾನಾ ಆಜಾದ್ ಶಾಲೆಯನ್ನು ಮಂಜೂರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು, ಸದಸ್ಯರಾದ ಕೆ.ಅಬ್ದುಲ್ ಜಬ್ಬರ್ ಅವರ ಪ್ರಶ್ನೆಗೆ ಉತ್ತರಿಸಿದರು.
ತೊಡಕುಗಳ ಕಡಿವಾಣಕ್ಕೆ ಕ್ರಮ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಪ್ರಕ್ರಿಯೆಯು ಸುಗಮವಾಗಿ ನಡೆಯುವಂತೆ ಮತ್ತು ತೊಡಕುಗಳಿಗೆ ಕಡಿವಾಣ ಹಾಕಲು ಕೆಲವು ನಿಯಮಗಳನ್ನು ಮಾಡಿದ್ದೇವೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾದ ಕೆಲವು ಪ್ರಕರಣಗಳನ್ನು ಸಮರ್ಥವಾಗಿ ಎದುರಿಸುತ್ತೇವೆ. ಭೂಸ್ವಾಧೀನ ಪ್ರಕ್ರಿಯೆಯ ವಿಳಂಬಾತಿಗೆ ಕಾರಣ ಯಾರು ಎಂಬುದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸುವುದಾಗಿ ಸದಸ್ಯರಾದ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.
8001 ಕೋಟಿ ರೂ.ಗಳ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಪ್ರಸ್ತಾವನೆಗೆ ವಿಧಾನಸಭೆಯಲ್ಲಿ ಅನುಮೋದನೆ

2022-23 ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ 8001.13 ಕೋಟಿ ರೂ.ಗಳ ಬೇಡಿಕೆಗಳ ಪ್ರಸ್ತಾವನೆಗೆ ವಿಧಾನಸಭೆಯಲ್ಲಿ ಇಂದು ಅನುಮೋದನೆ ದೊರೆಯಿತು.ಇದು ಪ್ರಸಕ್ತ ಸಾಲಿನ ಆಯವ್ಯಯ ಗಾತ್ರದ ಶೇ.8.38 ರಷ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯ ಕಲಾಪದಲ್ಲಿ ಗುರುವಾರ ಅವರು ಪ್ರಸ್ತಾವ ಮಂಡಿಸಿ, ಸದನದ ಅನುಮೋದನೆ ಕೋರಿ ಮಾತನಾಡಿದರು, ಪ್ರಸಕ್ತ ಸಾಲಿನ ಸುಮಾರು 2 ಲಕ್ಷ 71 ಸಾವಿರ ಕೋಟಿ ರೂ.ಗಳ ಬಜೆಟ್ ಗಾತ್ರದ ಶೇ.8.38 ರಷ್ಟಿರುವ ಎರಡನೇ ಕಂತಿನ ಪೂರಕ ಅಂದಾಜುಗಳ ಬೇಡಿಕೆಗಳ ಪ್ರಸ್ತಾವದಲ್ಲಿ ಸುಮಾರು 1396 ಕೋಟಿ ರೂ.ಗಳನ್ನು ರಾಜ್ಯ ವಿಪತ್ತು ನಿರ್ವಹಣೆಗೆ ,ಸುಮಾರು 780 ಕೋಟಿ ರೂ.ಕೇಂದ್ರದ ಪಾಲು,ವಿದ್ಯುತ್ ವಲಯಕ್ಕೆ 500 ಕೋಟಿ ರೂ.,ಜಲಧಾರೆಗೆ 200 ಕೋಟಿ ರೂ. ದೀನ್‍ದಯಾಳ ಉಪಾಧ್ಯಾಯ ಸೌಹಾರ್ದ ಹಾಸ್ಟೇಲುಗಳ ಸ್ಥಾಪನೆಗೆ 200 ಕೋಟಿ ರೂ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 200 ಕೋಟಿ ರೂ.ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ 300 ಕೋಟಿ ರೂ.ವೆಚ್ಚವೂ ಸೇರಿ ಒಟ್ಟು 8001 ಕೋಟಿ ರೂ.ಗಳ ಪೂರಕ ಅಂದಾಜಿನ ವಿವಿಧ ಬಾಬತ್ತುಗಳನ್ನು ವಿವರಿಸಿದರು.
ಕೇಂದ್ರ ಸರ್ಕಾರದಿಂದ 10550 ಕೋಟಿ ರೂ. ಜಿಎಸ್‍ಟಿ ಪಾಲು ಬಿಡುಗಡೆಯಾಗಿದೆ.3399 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಉದ್ದೇಶಿಸಲಾಗಿದ್ದು 1700 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ರಾಜ್ಯವು ಜಿಎಸ್‍ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.ತೆರಿಗೆ ಸಂಗ್ರಹ ಸಾಮಥ್ರ್ಯವೂ ಹೆಚ್ಚಳವಾಗಿದೆ.ವಾಣಿಜ್ಯ ತೆರಿಗೆ ಮೂಲಕ 79010 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿಗಳು ಸದನಕ್ಕೆ ವಿವರಿಸಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಕೃಷ್ಣ ಭೈರೇಗೌಡ ಅವರು ಪೂರಕ ಅಂದಾಜುಗಳ ಪ್ರಸ್ತಾವದ ಮೇಲೆ ಮಾತನಾಡಿದರು.












Click it and Unblock the Notifications