ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಬಗ್ಗೆ ಯತ್ನಾಳ್ ಮಹತ್ವದ ಮಾಹಿತಿ
ಕರ್ನಾಟಕದ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರದಿಂದ ಕಮಲದ ಮನೆಯಲ್ಲಿ ಒಡಕು ಮೂಡಿದೆ. ಹಾಲಿ ಅಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಡುವೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಇದೇ ವಿಚಾರವಾಗಿ ಯತ್ನಾಳ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಮಾತ್ರವಲ್ಲ, ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ನನಗೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಈ ಮೂಲಕ ಯತ್ನಾಳ್ ಅವರು ಮುಂದೆ ಬಿಜೆಪಿಯಿಂದ ಸಿಎಂ ಆಗುವ ಕನಸನ್ನು ಬಹಿರಂಗಪಡಿಸಿದ್ದಾರೆ.

ಕರ್ನಾಟಕವನ್ನ ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲದೆ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಇದೇ ವಿಚಾರವಾಗಿ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಅಲ್ಲದೆ ಯತ್ನಾಳ್ ಅವರು ಮತ್ತೆ ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ ಅವರ ಗೃಹಪ್ರವೇಶ ಇರುವ ಕಾರಣ ಮತ್ತೆ ದೆಹಲಿಗೆ ಹೋಗುತ್ತಿದ್ದೇವೆ. ಆಗ ಪಕ್ಷದ ವರಿಷ್ಠರನ್ನು ಕೂಡ ಭೇಟಿ ಮಾಡುತ್ತೇವೆ. ಆದರೆ ಹೈಕಮಾಂಡ್ ನಾಯಕರು ಸಿಗುತ್ತಾರೋ ಇಲ್ಲವೋ ಎಂಬುದನ್ನು ನಿಮಗೆ ಏಕೆ ಹೇಳಬೇಕು? ಎಂದು ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ. ಪಕ್ಷದಲ್ಲಿ ಮೂಡಿರುವ ಒಡಕನ್ನು ಸರಿಮಾಡಬೇಕಿದೆ. ಇನ್ನು ಶ್ರೀರಾಮುಲು ಅವರ ಯಾತ್ರೆ ನಿರ್ಧಾರ ಸ್ವಾಗತಾರ್ಹ ಎಂದೂ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಯತ್ನಾಳ್ ಬಣ ಇತ್ತೀಚೆಗೆ ದೆಹಲಿಗೆ ತೆರಳಿತ್ತು. ಅಲ್ಲಿ ಈಗಾಗಲೇ ಹಲವು ನಾಯಕರನ್ನು ಭೇಟಿಯಾಗಿ ಚರ್ಚೆಯೂ ನಡೆಸಿರುವುದಾಗಿ ತಿಳಿದುಬಂದಿದೆ. ಆದರೆ ಈ ಪ್ರಯತ್ನ ಸಫಲವಾಗಿಲ್ಲ ಎಂದು ಹೇಳಲಾಗುತ್ತಿದ್ದು, ಈಗ ಮತ್ತೊಮ್ಮೆ ದೆಹಲಿಗೆ ಹಾರಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಯತ್ನಾಳ್ ಅವರು ನಮಗೆ ಏನೂ ಅವಮಾನ ಆಗಿಲ್ಲ, ನಾವು ಇನ್ನೂ ಗಟ್ಟಿಯಾಗಿದ್ದೇವೆ ನಾವು ವಿಜಯದ ಸಂಕೇತ ಇಟ್ಟುಕೊಂಡು ಬಂದಿದ್ದು, ವರಿಷ್ಠರು ಏನು ಹೇಳಬೇಕೋ ಹೇಳಿದ್ದಾರೆ ಎಂದು ಗುಟ್ಟು ಕಾಯ್ದುಕೊಂಡಿದ್ದಾರೆ. ಕೇಂದ್ರ ಬಿಜೆಪಿ ನಾಯಕರು ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ನಾವು ಅಲ್ಲಿ ಯಾರನ್ನು ಭೇಟಿಯಾದೆವು ಎಂಬುದನ್ನು ಸೀಕ್ರೇಟ್ ಆಗಿಡುವಂತೆ ಹೇಳಿದ್ದಾರೆ ಎಂದು ಯತ್ನಾಳ್ ತಿಳಿಸಿದ್ದಾರೆ.
ರಾಜ್ಯದಲ್ಲಿ ವಿಜಯೇಂದ್ರ ವಿರೋಧಿ ಬಣ ಹೆಚ್ಚಾಗುತ್ತಲೇ ಇದೆ. ಬಹುತೇಕ ಎಲ್ಲರ ಮನಸ್ಸಿನಲ್ಲೂ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಬೇಡ ಎಂತಲೇ ಇದೆ. ವಿಜಯೇಂದ್ರ ಅವರ ಅಪ್ಪ ಸಿಎಂ ಆಗಿದ್ದಾಗ ಭಾರಿ ವಸೂಲಿ ಮಾಡಿದ್ದಾರೆ ಎಂದು ಗುಡುಗಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಈಗಾಗಲೇ ಯತ್ನಾಳ್ ಬಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದಾದರೆ, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಮುಂದುವರಿಸುವುದು ಅನುಮಾನ ಎಂದೇ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಈಗ ಮತ್ತೊಮ್ಮೆ ದೆಹಲಿ ಕಡೆ ಮುಖ ಮಾಡಿರುವ ಯತ್ನಾಳ್ ಬಣವು ಈ ಬಾರಿ ತಮ್ಮ ಪ್ರಯತ್ನದಲ್ಲಿ ಗೆದ್ದು ಬರುವ ಹುರುಪಿನಲ್ಲಿದೆ. ಮತ್ತೊಂದೆಡೆ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಹಲವರು ಕಣ್ಣಿಟ್ಟಿದ್ದು, ದಿನಕ್ಕೊಬ್ಬರು ಈ ಬಗ್ಗೆ ಆಸೆ ಬಿಚ್ಚಿಡುತ್ತಿದ್ದಾರೆ. ಈ ಕುರ್ಚಿ ಆಟದಲ್ಲಿ ಗೆಲ್ಲೋದು ಯಾರು ಎಂದು ಹೈಕಮಾಂಡ್ ಮಾತ್ರವೇ ನಿರ್ಧರಿಸಲಿದೆ.












Click it and Unblock the Notifications