ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಕುಂಬ್ಳೆ-ಜಾವಗಲ್‌ ತಂಡಕ್ಕೆ ಗರ್ವ ಭಂಗವಾಯ್ತು

By Srinath
|
Google Oneindia Kannada News

bangalore-ksca-resuls-team-kumble-srinath-face-worst-defeat-and-why
ಬೆಂಗಳೂರು, ಡಿ. 2- ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ ಮತ್ತು ಜಾವಗಲ್‌ ಶ್ರೀನಾಥ್‌ ಅವರು ಭಾರಿ ಸೋಲನ್ನುಂಡಿದ್ದಾರೆ. ಬಹುಶಃ ಕ್ರಿಕೆಟ್ ಮೈದಾನಲ್ಲಿಯೂ ಅವರು ಈ ಪರಿ ಸೋತಿರಲಿಕ್ಕಿಲ್ಲ. ವೈಯುಕ್ತಿಕ ನೆಲೆಯಲ್ಲಿಯೂ ಕುಂಬ್ಳೆ-ಜಾವಗಲ್‌ ಜೋಡಿಗೆ ಭಾರಿ ಮುಖಂಭಂಗವಾಗಿದ್ದು, ಹೀನಾಯ ಅಪಜಯ ಅನುಭವಿಸಿದ್ದಾರೆ.

ಗಮನಾರ್ಹವೆಂದರೆ ಇದು ನಿರೀಕ್ಷಿತವೆ. ಅಂದರೆ ನಾಡು ಕಂಡ ಅದ್ಭುತ ಆಟಗಾರರಾದ ಕುಂಬ್ಳೆ-ಜಾವಗಲ್‌ ಸೋಲಲಿ ಎಂದು ಯಾರೂ ಬಯಸಿರಲಿಲ್ಲ. ಆದರೆ ಕೆಎಸ್‌ಸಿಎ ಚುಕ್ಕಾಣಿ ಹಿಡಿದ ನಂತರ ಈ ಜೋಡಿ ತೋರಿದ ದರ್ಪ ನೋಡಿದ ಅಪ್ಪಟ ಕ್ರಿಕೆಟ್ ಪ್ರೇಮಿಗಳು ಟೀಂ ಕುಂಬ್ಳೆ-ಜಾವಗಲ್‌ ಹೀಗೇಕೆ ಆಡುತ್ತಿದ್ದಾರೆ? ಎಂದು ಅಸಹ್ಯಪಟ್ಟಿಕೊಂಡಿದ್ದುಂಟು.

ಯಾವ ಪುರುಷಾರ್ಥಕ್ಕಾಗಿ ಇವರಿಗೆ ಕೆಎಸ್‌ಸಿಎ ಸಾರಥ್ಯ ನೀಡಿದಿವಿ? ಎಂದು ಆತಂಕಗೊಂಡಿದ್ದು ಸಹಜ. ಮತ್ತು ಆಗಲೇ ಕನ್ನಡದ ಕ್ರಿಕೆಟ್ ಪ್ರಿಯರು ಟೀಂ ಕುಂಬ್ಳೆ-ಜಾವಗಲ್‌ ಪಟಾಲಂ ಯಾವುದೇ ಕಾರಣಕ್ಕೂ ಮುಂದಿನ ಬಾರಿ ಗೆದ್ದು ಬರುವುದು ಬೇಡ ಎಂದು ಕೆಎಸ್‌ಸಿಎ ಸದಸ್ಯರು ತೀರ್ಮಾನಿಸಿಯಾಗಿತ್ತು. ( ಕುಂಬ್ಳೆ-ಮಯ್ಯಗೆ ಮುಖಭಂಗ, ಬ್ರಿಜೇಶ್- ಒಡೆಯರ್ ಜಯಭೇರಿ )

ಟೀಂ ಕುಂಬ್ಳೆ-ಜಾವಗಲ್‌ ವಿರುದ್ಧ ಆರಂಭದಲ್ಲೇ ಅಪಸ್ವರಗಳು ಕೇಳಿಬಂದಿದ್ದವು. ಏಕೆಂದರೆ ಅಧಿಕಾರ ಹಿಡಿಯುತ್ತಿದ್ದಂತೆ ಕುಂಬ್ಳೆ-ಜಾವಗಲ್‌ ಜೋಡಿ ತಮ್ಮ ನಿಜ ಮುಖವನ್ನು ತೋರ ತೊಡಗಿದರು. ಅದು ಮುಂದೆ ಸುದೀರ್ಘ ಇನ್ನಿಂಗ್ಸ್ ಆಗಿಹೋಯಿತು. ಎದುರಿಗಿರುವ ವ್ಯಕ್ತಿಗೆ ಕನಿಷ್ಠ ಸೌಜನ್ಯದಿಂದ ಮಾತನಾಡಿಸುವ ಉಮೇದು ಇವರಿಗಿರಲಿಲ್ಲ.

ತಾವೇ ಕರ್ನಾಟಕ ಕ್ರಿಕೆಟ್ಟಿನ ಉದ್ಧಾರಕರು; ಬೇರೆಯವರೆಲ್ಲಾ ಮಜಾ ಮಾಡುವುದಕ್ಕೆ/ ಸಂಸ್ಥೆಯ ಹಣ ಲೂಟಿ ಹೊಡೆಯುವುದಕ್ಕೆ ಬಂದವರು ಎಂಬಂತೆ ವಿಚಿತ್ರ ಮನೋಭಾವ ತಾಳಿದರು. ಆದರೆ ಕುಂಬ್ಳೆ-ಜಾವಗಲ್‌ ಗರ್ವ/ದರ್ಪವನ್ನು ಪಕ್ಕಕ್ಕಿಟ್ಟು ಅವರು ನಿಜಕ್ಕೂ ಆಟ ಕ್ರಿಕೆಟ್ಟಿಗಾದರೂ ಏನಾದರೂ ಮಾಡಿದರಾ? ಅಂದರೆ ಅವರು ಕಡಿದುಕಟ್ಟೆ ಹಾಕಿದ್ದು ಏನೂ ಇಲ್ಲ.

ಹೇಳಿಕೇಳಿ ಇವರು ಆಟಗಾರರಷ್ಟೇ. ಕ್ರಿಕಟ್ಟನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದವರು. ಆದರೆ ಕ್ರಿಕೆಟ್ ಮೈದಾನದಲ್ಲಿ ತೋರಿದ ಚಾತುರ್ಯ, ಸಂಘಟನಾ ಸಾಮರ್ಥ್ಯ, ನಾಯಕತ್ವದ ಗುಣವನ್ನು Off the Field ತೋರಲು ಸಂಪೂರ್ಣ ವಿಫಲರಾದರು. ಪರಿಣಾಮ ಹೀನಾಯ ಸೋಲು. ಕ್ರಿಕೆಟ್ ಆಡುವಾಗ ಮೈದಾನದಲ್ಲಿ ತೋರಿದ ಕೆಚ್ಚೆದೆ, ಛಲ, ಶಕ್ತಿಯನ್ನು ಇಲ್ಲಿ ವ್ಯರ್ಥ ಮಾಡಿಕೊಂಡರು.

ಇನ್ನು ವಿರೋಧಿ ಪಡೆಯೋ ಘಟಾನುಘಟಿಗಳು. ಅವರಿಗೆ ಆಟವೂ ಗೊತ್ತಿತ್ತು. ಆಡಳಿತವೂ ಗೊತ್ತಿತ್ತು. ಅದಕ್ಕಿಂತ ಹೆಚ್ಚಿಗೆ ರಾಜಕೀಯ ಗೊತ್ತಿತ್ತು. ಏನೋ ಒಮ್ಮೆ ನವೋತ್ಸಾಹಿ ತಂಡ ಬಂದಾಗ ಇವರು ಎಡವಿ, ಸೋತಿದ್ದರು ಅಷ್ಟೇ. ಆದರೆ ಆಗಲೇ ಪಟೇಲ್‌ ಮತ್ತು ಒಡೆಯರ್‌ ಪಡೆಯು ಕುಂಬ್ಳೆ- ಜಾವಗಲ್ ಪಟಾಲಂಗೆ ಸೋಲುಣಿಸಬೇಕು ಎಂದು ನಿರ್ಧರಿಸಿಯಾಗಿತ್ತು.

ಮುಂದೆ ಟೀಂ ಕುಂಬ್ಳೆ- ಜಾವಗಲ್ ಒಂದೊಂದೇ ತಪ್ಪುಗಳನ್ನು ಮಾಡುತ್ತಾ, ಎಡುವುತ್ತಿದ್ದಾಗ ಮರೆಯಲ್ಲಿ ನಿಂತು ಮುಸಿನಗೆ ನಕ್ಕ ಪಟೇಲ್‌ ಮತ್ತು ಒಡೆಯರ್‌ ಪಡೆ ಇವರ ಕೈಯಲ್ಲಿ ಇದೆಲ್ಲಾ ಆಗದ-ಹೋಗದ ಕೆಲಸ. ಇವರೇನಿದ್ದರೂ ಕ್ರಿಕೆಟ್ ಆಡೋಕ್ಕೆ ಲಾಯಕ್ಕೇ ಹೊರತು ಕ್ರಿಕೆಟ್ ಆಟಗಾರರನ್ನು ಹುಟ್ಟುಹಾಕುವ ನೈಪುಣ್ಯತೆ ಇವರಲ್ಲಿಲ್ಲ. ಇವರಿನ್ನು ಬೇಡ ಎಂದು ಸೈಲೆಂಟಾಗಿ ಒಳಗೊಳಗೇ ತಂಡಕ್ಕೆ ಸುಪಾರಿ ನೀಡಿ ಖೆಡ್ಡಾದಲ್ಲಿ ಕೆಡವಿದರು. ಕುಂಬ್ಳೆ-ಜಾವಗಲ್‌ ಬೆಂಬಲಿತ ಅಭ್ಯರ್ಥಿಗಳು ಸೋತಿರುವುದನ್ನು ನೋಡಿದರೆ 'ಅಬ್ಬಾ!' ಎಂದು ಉದ್ಘರಿಸುವಂತಿದೆ.

ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಇದೀಗ ಕುಂಬ್ಳೆ-ಜಾವಗಲ್‌ ಜೋಡಿ ಸೋತಿದ್ದು ನಾವಲ್ಲ. ಅಸಲಿಗೆ ನಾವು ಚುನಾವಣೇಗೇ ನಿಂತಿರಲಿಲ್ಲ ಎಂದು ಇಂಗ್ಲೀಷ್ ಬಿಟ್ಟು ಅಚ್ಚ ಕನ್ನಡದಲ್ಲಿ ಪಲುಕಬಹುದು.

ಆದರೆ ಅವರದೇ ಇಂಗ್ಲೀಷಿನಲ್ಲಿ ಪಟೇಲ್‌ ಮತ್ತು ಒಡೆಯರ್‌ ಪಡೆ ಅದಾಗಲೇ ಕುಂಬ್ಳೆ-ಜಾವಗಲ್‌ ಜೋಡಿಗೆ ಮಣ್ಣುಮುಕ್ಕಿಸಿಯಾಗಿದೆ. ಅದೂ ಯಾವ ಪರಿಯೆಂದರೆ ಬಹುಶಃ ಮೂರು ವರ್ಷಗಳ ನಂತರವೂ ಕುಂಬ್ಳೆ-ಜಾವಗಲ್‌ ಜೋಡಿ ಚಿನ್ನಸ್ವಾಮಿ ಸ್ಟೇಡಿಯಂನತ್ತ ಹೆಜ್ಜೆಹಾಕುವ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ ಅನಿಸುತ್ತಿದೆ.

ಕುಂಬ್ಳೆ-ಜಾವಗಲ್‌ ಜೋಡಿಯ ತಪ್ಪು-ಒಪ್ಪುಗಳು ಕಣ್ಣೇದುರಿಗೇ ಇರುವಾಗ ಅವರ ಜಾಡಿನಲ್ಲೇ ಸಾಗದೆ ಕರ್ನಾಟಕದ ಕ್ರಿಕೆಟ್ಟಿಗೆ ಮತ್ತು ಕರ್ನಾಟಕ ಕ್ರಿಕೆಟ್ಟಿನ ಗತವೈಭವವನ್ನು ಮರಳಿ ತರುವ ಮಹತ್ತರ ಜವಾಬ್ದಾರಿ ಪಟೇಲ್‌ ಮತ್ತು ಒಡೆಯರ್‌ ಚತುರ್ಭುಜಗಳ ಮೇಲಿದೆ. ಇಲ್ಲವಾದಲ್ಲಿ, ಹಿಂದಿನ ಜಾಡಿನಲ್ಲೇ ಸಾಗಿದರೆ ಕರ್ನಾಟಕ ಕ್ರಿಕೆಟ್ಟನ್ನು ಆ ಭಗವಂತ ಬಂದರೂ ಉದ್ಧಾರ ಮಾಡುವುದಕ್ಕೆ ಆಗದಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾದೀತು. ಎಚ್ಚರಾ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮತ್ತು ಬ್ರಿಜೇಶ್‌ ಪಟೇಲ್‌!

English summary
Bangalore KSCA 2013 elections Results- Team Kumble- Srinath faces worst defeat and Brijesh Patel -Wodeyar team tastes landsliding victory. But why? Here is the brief analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X