ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BBMP ಮಾನವನ್ನು ಹರಾಜು ಹಾಕಿದ BSNL!

By Srinath
|
Google Oneindia Kannada News

Bangalore BBMP finacial position pathetic fails to honour just Rs 1000 cheque
ಬೆಂಗಳೂರು, ಜ.7- ಕರ್ನಾಟಕ ರಾಜಧಾನಿಯ ಬೃಹತ್ ಮಹಾನಗರ ಪಾಲಿಕೆಯ ಮಾನವನ್ನು BSNL ಸಂಸ್ಥೆ ಕಾರ್ಪೊರೇಶನ್ ಸರ್ಕಲ್ಲಿನಲ್ಲಿ ಸಾರ್ವಜನಿಕವಾಗಿ ಹರಾಜು ಹಾಕಿದೆ. BBMPಯ ಅಧಿಪತ್ಯ ಹೊತ್ತಿರುವ ಆಯುಕ್ತ ಲಕ್ಷ್ಮೀನಾರಾಯಣರ ಬಾಬತ್ತಿನಲ್ಲೇ ಸರಕಾರಿ ಸವಾಲು ಕೂಗಿದೆ. ಸಾಹೇಬರು ತಮ್ಮ ಮನೆಯ ದೂರವಾಣಿ ಬಿಲ್ ಪಾವತಿಸಲು ನೀಡಿದ್ದ ಯಃಕಶ್ಚಿತ್ ಸಾವಿರ ರೂಪಾಯಿಯ ಚೆಕ್ಕು ಬೌನ್ಸ್ ಆಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾನ ಮಣ್ಣುಮುಕ್ಕಿದೆ.

ಇದು ಅತಿಶಯೋಕ್ತಿಯಲ್ಲ. ಕಟುವಾಸ್ತವ! ಗಮನಿಸಿ, ಪಾಲಿಕೆಯ ಸಾಲದ (ದುಃ)ಸ್ಥಿತಿ ಹೆಂಗಿದೆ ಎಂದು ಪ್ರಶ್ನಿಸಿದ್ದಕ್ಕೆ ಪಾಲಿಕೆಯ ಇದೇ ಆಯುಕ್ತ ಮಹಾನುಭಾವರು ಮೊನ್ನೆ ಮಾಧ್ಯಮಗಳ ಮುಂದೆ ಏನೆಂದು ಉಲಿದಿದ್ದಾರೆ... ಒಮ್ಮೆ ಕೇಳಿಸಿಕೊಳ್ಳಿ.

ಯಾರ್ರೀ ಹೇಳಿದ್ದು, BBMP ಸಾಲ ಮಾಡುತ್ತಿದೆ ಅಂತ. BBMP ಏನೂ ಬೆಂಗಳೂರಿನಲ್ಲಿರುವ ಕಟ್ಟಡಗಳನ್ನೆಲ್ಲಾ ಅಡ ಇಟ್ಟಿಲ್ಲ. ಇಟ್ಟರೂ ಅದೆಲ್ಲಾ ಬುಕ್ಕಿಶ್ ಕಣ್ರೀ. ಅಂದರೆ ಬ್ಯಾಂಕುಗಳು ಮತ್ತು ಪಾಲಿಕೆ ಮಧ್ಯೆ ನಡೆಯುವ ಪುಸ್ತಕ ವ್ಯವಹಾರ ಅದು. ಸುಮ್ಮನೆ ಬ್ಯಾಂಕಿನವರು ತಮ್ಮ ಪುಸ್ತಕಗಳಲ್ಲಿ ಪಾಲಿಕೆಗೆ ಇಷ್ಟಿಷ್ಟು ಸಾಲವನ್ನು ನೀಡಿದ್ದೇವೆ ಎಂದು ಬರೆದಿಟ್ಟುಕೊಂಡಿರುತ್ತಾರೆ. ಅದರ ಜತೆಗೆ ಇರಲಿ ಅಂತ ಒಂದು ಕಟ್ಟಡವನ್ನು ಸುಮ್ಮನೆ ಇಟ್ಟುಕೊಂಡಿರುತ್ತಾರೆ.

ಹಾಗೆಂದ ಮಾತ್ರಕ್ಕೆ ನಾಳೆ ನಾವು ಸಾಲ ಕಟ್ಟಲಿಲ್ಲ ಅಂದರೆ ಆ ಕಟ್ಟಡಗಳನ್ನು ಅವರ ಕಬ್ಜಾಗೆ ತೆಗೆದುಕೊಂಡುಬಿಡುವಿದಿಲ್ಲ. ಅದೆಲ್ಲಾ bookish adjustment ಅಷ್ಟೇ ಕಣ್ರೀ ಎಂದು ಗಿಣಿಶಾಸ್ತ್ರ ಹೇಳುತ್ತಿದ್ದರು.

ಸ್ವಾಮಿ ಆಯುಕ್ತ ಸಾಹೇಬರೇ ಸರಿಯಾಗಿ ಕೇಳಿಸಿಕೊಳ್ಳಿ. ಯಾವ ಧೈರ್ಯದ ಮೇಲೆ ಈ ಮಾತು ಹೇಳುತ್ತಿದ್ದೀರಿ. ಅದೂ ಒಬ್ಬ ಹಿರಿಯ ಐಎಎಸ್ಸಾಗಿ? ಬ್ಯಾಂಕಿನ ಸಾಮಾನ್ಯ ಗ್ರಾಹಕರೂ ತಮ್ಮ ಮಿತಿಯಲ್ಲೇ ಇಂತಹ ಸಾಲ ಪಡೆಯುತ್ತಾರೆ. ಗೃಹಸಾಲ ಅಂತಿಟ್ಟುಕೊಳ್ಳಿ. ಸ್ವಾಮಿ ಸಾಹೇಬ್ರೇ ತಿಳ್ಕೊಳ್ಳಿ... ಇಡೀ ಜೀವಮಾನದಲ್ಲಿ ಕೂಡಿಟ್ಟ ಕಾಸಿಂದ ಒಂದು ಚಿಕ್ಕ ಮನೆ ಮಾಡಲು ಗೃಹಸಾಲಕ್ಕೆ ಮುಂದಾಗುತ್ತಾರೆ.

ಆದರೆ ಇಂದಿನ ತುಟ್ಟಿ ದಿನಗಳಲ್ಲಿ ಆ ಮೊತ್ತ ಪಾಯ ಹಾಕುವುದಕ್ಕೂ ಸಾಕಾಗುವುದಿಲ್ಲ. ಆಗ ಬ್ಯಾಂಕಿನತ್ತ ಆಸೆಗಣ್ಣಿನಿಂದ ಹೆಜ್ಜೆ ಹಾಕುತ್ತಾರೆ. ಬ್ಯಾಂಕೂ ಒಂದಷ್ಟು ಸಾಲ ನೀಡುತ್ತದೆ. ಹಿರಿಹಿರಿ ಹಿಗ್ಗಿದ ಮನೆಯ ಯಜಮಾನ ನಿವೇಶನದ ದಾಖಲೆಗಳನ್ನೇ ಅಡಮಾನವಿಟ್ಟು ಸಾಲ ಹೊತ್ತು ತರುತ್ತಾರೆ.

ಆದರೆ ಮುಂದೆ ಸಾಲದ ಮೊತ್ತ ಚಕ್ರಬಡ್ಡಿ ಸಮೇತ ಮನೆಗಿಂತ ಎತ್ತರವಾಗಿ ಬೆಳೆದುಬಿಡುತ್ತದೆ. ಮಾಲೀಕ ತನ್ನ ಜೀವನದ ಸಂಧ್ಯಾಕಾಲದಲ್ಲಿ ಸಾಲ ವಾಪಸು ಮಾಡಲಾಗದೆ ಪರಿತಪಿಸುತ್ತಾನೆ. ಆಗ ಎಂಟ್ರಿ ಕೊಡುತ್ತದೆ ಬ್ಯಾಂಕು. ಮನೆ ಯಜಮಾನನ ಮಾನವನ್ನು ಅಕ್ಷರಶಃ ಹರಾಜಿಗಿಡುತ್ತದೆ. ಕೊನೆಗೆ one fine day ಮನೆಯನ್ನ ಹರಾಜಿಗಿಟ್ಟುಬಿಡುತ್ತದೆ. ಅದೂ ಹೇಗೆ ಅಂತ ಕೇಳಿ ಆಯುಕ್ತ ಲಕ್ಷೀನಾರಾಯಣರೇ...

ದಿನಪತ್ರಿಕೆಗಳಲ್ಲಿ ಆತನ ಹೆಸರು, ಕುಲಗೋತ್ರ, ಮನೆಯ ವಿಸ್ತೀರ್ಣ, ಸಾಲದ ಮೊತ್ತದ ಸಮೇತ ಪ್ರಿಂಟ್ ಮಾಡಿ ಹರಾಜಿಗೆ ಕೂಗುತ್ತದೆ. ಕೊನೆಗೆ ಯಾರೋ ದುಡ್ಡಿದ್ದವನು ಆ ಮನೆಯನ್ನು ಖರೀದಿಸಿ ಬಿಡುತ್ತಾನೆ. ಇತ್ತ ಬ್ಯಾಂಕು ತನ್ನ ಸಾಲ ಜಮೆಯಾಯಿತು ಎಂದು ಬೀಗುತ್ತಾ, ಸಾಮಾಜಿಕ ಜವಾಬ್ದಾರಿ ಎಂಬುದನ್ನು ಅದೇ ಬೀದಿಯ ಚರಂಡಿಯಲ್ಲಿ ಬಿಸಾಕಿ ಅಲ್ಲಿಂದ ಕಾಲ್ಕೀಳುತ್ತದೆ. ಯಜಮಾನನ ಅವಸಾನ ಅಲ್ಲಿಂದಲೇ ಶುರುವಾಗುತ್ತದೆ.

ಇಲ್ಲಿ ಪ್ರಶ್ನೆ ಸರಳವಾಗಿದೆ. ಅದೇನೋ ಬುಕ್ಕಿಶ್ಸು ಅಂತ ಬಾಲಿಶವಾಗಿ ಮಾಧ್ಯಮ ಮಂದಿಯ ಮೂಲಕ ರಾಜಧಾನಿಯ ಪ್ರಜೆಗಳ ಕಿವಿಯ ಮೇಲೆ ತಾವು ನಾಜೂಕಾಗಿ ಹೂವಿಟ್ಟರಲ್ಲಾ ಹಾಗೆ, ಈ ಬಡ ಯಜಮಾನ ಪಡೆದಿದ್ದ ಲಕ್ಷೋಪಾದಿಯ ಸಾಲವನ್ನು ಬುಕ್ಕಿಶ್ಶು ಅಂತ ಯಾಕೆ ಬ್ಯಾಂಕು ಹೊಡೆದುಹಾಕುವುದಿಲ್ಲ.

ಕೋಟ್ಯಂತರ ಪಟ್ಟು ಹೆಚ್ಚು ಸಾಲ ಮಾಡಿದರೆ ಅದು ಬುಕ್ಕಿಶ್ಶು ಆಗಿ ಲೆಕ್ಕ ಪರಿಸಮಾಪ್ತಿಯಾಗುತ್ತದೆ. ಇಲ್ಲದಿದ್ದರೆ ಬಡ ಯಜಮಾನನ ಹಾಗೆ ಜೀವನದ ಲೆಕ್ಕವೇ ಚುಕ್ತಾ ಆಗಿಬಿಡುತ್ತದೆ, ಅಲ್ವಾ?

ಇಲ್ಲಿ ಮತ್ತೂ ಒಂದು ಪ್ರಶ್ನೆ ಉದ್ಭವವಾಗುತ್ತಿದೆ. ನಿಮ್ಮ ಬುಕ್ಕಿಶ್ ಹೇಳಿಕೆಗೆ ಬ್ಯಾಂಕುಗಳು ಯಾಕೆ ಪ್ರತಿಕ್ರಿಯಿಸಿಲ್ಲ? ನೂರಾರು ಕೋಟಿ ರೂ ಸಾಲ ವಾಪಸಾತಿ ಮಾಡದೆ, ಅದನ್ನು ಬುಕ್ಕಿಶ್ಶು ಅಂತ ಹೇಳಿದ ನಿಮ್ಮಂಥಹವರ ಬೇಜವಾಬ್ದಾರಿ ಹೇಳಿಕೆಯನ್ನು ಯಾಕೆ ಬ್ಯಾಂಕುಗಳು ಗಂಭೀರವಾಗಿ ಪರಿಗಣಿಸುವುದೇ ಇಲ್ಲ, ಹೇಳಿ ಆಯುಕ್ತರೆ? ನಿಮಗೆ (ಅಂದರೆ ನಿಮ್ಮ ವೈಯಕ್ತಿಕ ಖಾತಗೆ ಅಲ್ಲ ಅದು ಬಿಬಿಎಂಪಿಯದ್ದೇ ಆಗಿರಬಹುದು) ಸಾಲ ಕೊಟ್ಟ ಯಾವುದೇ ಬ್ಯಾಂಕೂ ನಿಮ್ಮ ಹೇಳಿಕೆಯನ್ನು ಕೇಳಿಸಿಕೊಂಡಿಲ್ಲವೇ? ಇದು ಬ್ಯಾಂಕುಗಳ ಹೊಣೆಗೇಡಿತನವೋ ಅಥವಾ ಬ್ಯಾಂಕುಗಳೂ ಇದರಲ್ಲಿ ಶಾಮೀಲಾಗಿವೆಯೋ?

ಮತ್ತೂ ಒಂದು ವಿಷಯವನ್ನು ಕೇಳಿಸಿಕೊಂಡು ನನ್ನದೆ ಧಸಕ್ಕೆಂದಿದೆ. BBMP ದಿನಕ್ಕೆ ಒಂದು ಕೋಟಿ ರೂ ಬಡ್ಡಿಯನ್ನು ಕಟ್ಟುತ್ತಿದೆಯಂತೆ! ಅಂದರೆ ತಿಂಗಳಿಗೆ ಬರೀ ಬಡ್ಡಿಗೆಂದೆ ಸುಮಾರು 30 ಕೋಟಿ ರೂ ಪಾವತಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಯಾವ ಕಾಲಕ್ಕೆ BBMP ಸಾಲ ಮುಕ್ತವಾಗುವುದು? ಯಾವ ಆಧಾರದ ಮೇಲೆ/ ಯಾರ ಭರವಸೆಯ ಮೇಲೆ ಸಾಲಚುಕ್ತಾ ಮಾಡುತ್ತೀರಿ, ಆಯುಕ್ತರೇ!?

English summary
Bangalore BBMP finacial position pathetic- It fails to honour just Rs 1000 cheque. According to sources BBMP is paying an interest amount of Rs 1 crore every day to the Banks. But still the BBMP Commissioner Lakshminarayana says that it is just bookish and BBMP need not to worry about spiralling loan amounts!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X