Bhagyalakshmi Scheme: ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಬಿಜೆಪಿ ಒತ್ತಾಯ
ಬೆಂಗಳೂರು, ನವೆಂಬರ್ 04: ರಾಜ್ಯದಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಲು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 'ಭಾಗ್ಯಲಕ್ಷ್ಮೀ' ಯೋಜನೆಯನ್ನು ಜಾರಿಗೆ ತಂದರು. ಅಂದಿನಿಂದ ಇಂದಿನವರೆಗೂ 'ಭಾಗ್ಯಲಕ್ಷ್ಮೀ' ಯೋಜನೆಯನ್ನು ಮಾಡಲಾಗುತ್ತಿದೆ. ಆದರೆ ಬಾಂಡ್‌ಗಳ ಅವಧಿ ಮುಗಿದ್ದರೂ ತಾಂತ್ರಿಕ ಅಡಚಣೆಯಿಂದಾಗಿ ಲಕ್ಷಾಂತರ ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಇನ್ನೂ ಹಣ ವರ್ಗಾವಣೆಯಾಗಿಲ್ಲ.
2024ರ ಏಪ್ರಿಲ್‌ನಿಂದಲೇ ಮೊದಲ ವರ್ಷ ಭಾಗ್ಯಲಕ್ಷ್ಮೀ ಯೋಜನೆ ಮಾಡಿದವರ ಬಾಂಡ್‌ಗಳು ಮೆಚ್ಯೂರಿಟಿಯಾಗಲು ಆರಂಭವಾಗಿದ್ದು, ಕೆಲವು ತಾಂತ್ರಿಕ ದೋಷದಿಂದ ಯಾವ ಫಲಾನುಭವಿಯ ಖಾತೆಗೂ ಇನ್ನೂ ಹಣ ಜಮೆಯಾಗಿಲ್ಲ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ದೂರುಗಳು ಹೆಚ್ಚಾಗಿದ್ದು, ಅಧಿಕಾರಿಗಳು ತಾಂತ್ರಿಕ ದೋಷದ ಕಾರಣ ನೀಡುತ್ತಿದ್ದಾರೆ. ಇದರಿಂದ ಅಗತ್ಯ ಇರುವವರಿಗೂ ಕೂಡ ಯೋಜನೆಯ ಹಣ ಸಿಗದಂತಾಗಿದೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ಹೆಣ್ಣು ಮಕ್ಕಳ ಭವಿಷ್ಯ ಬೆಳಗಲೆಂದೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಆರಂಭಿಕ ವರ್ಷದಲ್ಲಿ ಹೆಸರು ನೋಂದಾಯಿಸಿದ್ದ ಸುಮಾರು 2.30 ಲಕ್ಷ ಫಲಾನುಭವಿಗಳಿಗೆ 2024 ರ ಏಪ್ರಿಲ್, ಮೇ ತಿಂಗಳಲ್ಲೇ ಮೆಚುರಿಟಿ ಹಣ ಫಲಾನುಭವಿ ಹೆಣ್ಣುಮಕ್ಕಳ ಮನೆಗಳನ್ನು ತಲುಪಬೇಕಿತ್ತು.
ಆದರೆ ಸಾಲು ಸಾಲು ಹಗರಣಗಳು, ಭ್ರಷ್ಟಾಚಾರದಲ್ಲಿ ಮುಳುಗಿ, ಬೊಕ್ಕಸ ಬರಿದಾಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ತುಕ್ಕು ಹಿಡಿದಿರುವ ಆಡಳಿತ ಯತ್ರದ ತಾತ್ಸಾರ ಧೋರಣೆಯಿಂದ ದಾಖಲೆ ಒದಗಿಸಿರುವ ಫಲಾನುಭವಿಗಳಿಗೂ ಹಣ ಬಿಡುಗಡೆ ಮಾಡದೇ ತಾಂತ್ರಿಕ ತೊಂದರೆಯ ನೆಪವೊಡ್ಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಗುಡುಗಿದ್ದಾರೆ.

ಇನ್ನು ನಾಡಿನ ಲಕ್ಷಾಂತರ ಹೆಣ್ಣು ಹೆತ್ತ ಕುಟುಂಬಗಳ ಶಾಪಕ್ಕೆ ಗುರಿಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಅರ್ಹ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಒತ್ತಾಯಿಸಿದ್ದಾರೆ.
ಭಾಗ್ಯಲಕ್ಷಿ ಯೋಜನೆ ಹಣದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ
ಇನ್ನು ಈ ಹಿಂದೆ ಭಾಗ್ಯಲಕ್ಷಿ ಯೋಜನೆ ಹಣ ಜನರ ಕೈ ಸೇರದ ಆರೋಪದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದರು. 'ಮುಂಚೆ ಅವರು ಭಾಗ್ಯಲಕ್ಷೀ ಅಂತಾ ಘೋಷಣೆ ಮಾಡಿದ್ದರು. ಅದು ಈಗ ಸುಕನ್ಯ ಸಮೃದ್ಧಿ ಯೋಜನೆ ಅಂತಾ ಬದಲಾಗಿದೆ.
ಆ ಹೆಸರು ಬದಲಾಗಿದೆ. ಮೊದಲು ಎಲ್ಐಸಿ ಅವರು ಇದನ್ನು ಮಾಡುತ್ತಿದ್ದರು. ಭಾಗ್ಯಲಕ್ಷೀ ಬಾಂಡ್ ಅಂತಾ ಎಲ್ಐಸಿ ಅವರು ಕೊಡುತ್ತಿದ್ದರು. ಆದರೆ ಈಗ ನಾವು ಪೋಸ್ಟ್ ಆಫೀಸ್‌ನಲ್ಲಿ ಒಂದು ಹೆಣ್ಣು ಮಗು ಜನಿಸಿದ ದಿನದಿಂದ ಹದಿನೆಂಟು ವರ್ಷದ ವರೆಗೆ ವರ್ಷಕ್ಕೆ ಇಂತಿಷ್ಟು ಅಂತಾ ಹಣ ಹಾಕುತ್ತೇವೆ' ಎಂದು ಹೇಳಿದ್ದರು.












Click it and Unblock the Notifications