ಇಸ್ರೋ ವಿಜ್ಞಾನಿಗಳ ಸಾಧನೆ ಕಂಡು ಮೋದಿ ಭಾವುಕ; ಆಗಸ್ಟ್ 23 ಇನ್ನು ಬಾಹ್ಯಾಕಾಶ ದಿನ: ಮೋದಿ ಘೋಷಣೆ
ಬೆಂಗಳೂರು, ಆಗಸ್ಟ್ 26: ದೇಶನ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾದ ದಿನ, ಅಂದರೆ ಆಗಸ್ಟ್ 23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಮೋದಿ ಘೋಷಣೆ ಮಾಡಿದರು.
ಚಂದ್ರಯಾನ-3 ಯಶಸ್ಸಿನ ಕುರಿತು ಇಸ್ರೋ ವಿಜ್ಞಾನಿಗಳ ಅಭಿನಂದಿಸಲು ಬೆಂಗಳೂರಿನ ಇಸ್ರೋ ಕಚೇರಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಅಭಿನಂದಿಸಿದರು. ಈ ವೇಳೆ ಇಸ್ರೋ ವಿಜ್ಞಾನಿಗಳ ಕುರಿತು ಪ್ರಧಾನಿ ಮೋದಿ ಮಾತನಾಡಿ, ಇಸ್ರೋ ಯಶಸ್ಸಿಗೆ ನಾನು ಸಂಪೂರ್ಣ ಖುಷಿಯಾಗಿದ್ದೇನೆ ಎಂದು ಪ್ರಧಾನಿ ಮೋದಿ ಮಾತು ಆರಂಭಿಸಿದ್ದು, ಇಸ್ರೋ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಚಂದ್ರಯಾನ 3 ಯಶಸ್ಸು ಅತ್ಯಂತ ಮಹತ್ವದ ಸಾಧನೆಯಾಗಿದ್ದು, ನಿಮ್ಮನ್ನ ಭೇಟಿಯಾಗಿದ್ದು ನನಗೆ ಸಂತೋಷ ತಂದಿದೆ ಎಂದು ಮೋದಿ ಹೇಳಿದರು.

ಇನ್ನೂ ಇಸ್ರೋ ವಿಜ್ಞಾನಿಗಳ ಸಾಧನೆ ಕಂಡು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ಯಾವ ದೇಶವು ಮಾಡದ ಸಾಧನೆಯನ್ನ ನಾವು ಮಾಡಿದ್ದೇವೆ ಎಂದು ವಿಜ್ಞಾನಿಗಳನ್ನ ಅಭಿನಂದಿಸಿದರು. ಪ್ರತಿಯೊಬ್ಬ ವಿಜ್ಞಾನಿಗೂ ನನ್ನಿಂದ ಸೆಲ್ಯೂಟ್ ಹೇಳುತ್ತೇನೆ. ಯಾವ ದೇಶವೂ ಮಾಡಿರದ ಸಾಧನೆಯನ್ನ ನಾವು ಮಾಡಿದ್ದೇವೆ. ಸದ್ಯ ಭಾರತ ಚಂದ್ರನ ಮೇಲಿದೆ. ನನ್ನ ತನು-ಮನ ತುಂಬಿ ತುಳುಕುತ್ತಿದೆ. ನಮ್ಮ ದೇಶದ ಘನತೆಯನ್ನ ಉನ್ನತ ಮಟ್ಟಕ್ಕೆ ತೆಗೆದುಕೊಂಡೊಯ್ದಿದ್ದೀರಿ ನಿಮ್ಮೆಲ್ಲರಿಗೂ ನನ್ನದೊಂದು ದೊಡ್ಡ ಸೆಲ್ಯೂಟ್ ಎಂದು ಮೋದಿ ಹೇಳಿದರು.
ನಿಮ್ಮ ಸಾಧನೆಯನ್ನು ಎಷ್ಟೇ ಕೊಂಡಾಡಿದರೂ ಅದು ಕಡಿಮೆಯೇ. ಚಂದ್ರನ ಮೇಲೆ ಪ್ರಜ್ಞಾನ್ ಪರಾಕ್ರಮ ಕಂಡು ಖುಷಿಯಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ. ನಿಮ್ಮೆಲ್ಲರ ಈ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ. ನಾನು ವಿದೇಶದಲ್ಲಿದ್ದೆ, ಆದರೆ ನನ್ನ ಹೃದಯವು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ನಿಮ್ಮೊಂದಿಗೆ ಇತ್ತು ಎಂದು ಮೋದಿ ಹೇಳಿದರು.
ಇನ್ನೂ ಈ ವೇಳೆ ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು 'ಶಿವಶಕ್ತಿ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಮಕರಣ ಮಾಡಿದರು. ದೇಶಕ್ಕೆ ನಾರಿಶಕ್ತಿ ಅನ್ನೋದು ಮುಖ್ಯ. ಚಂದ್ರಯಾನ-3 ಯಶಸ್ಸಿಗೆ ಮಹಿಳಾ ವಿಜ್ಞಾನಿಗಳ ಕೊಡುಗೆಯೂ ಇದೆ ಎಂದು ಮಹಿಳಾ ವಿಜ್ಞಾನಿಗಳನ್ನು ಕೊಂಡಾಡಿದರು.
ಚಂದ್ರನ ಮೇಲೂ ತಿರಂಗ ರಾರಾಜಿಸುತ್ತಿದೆ ಎಂದ ಮೋದಿ, ಚಂದ್ರಯಾನ-2 ಪತನ ಸ್ಥಳಕ್ಕೆ ತಿರಂಗ ಪಾಯಿಂಟ್ ಎಂದು ಹೆಸರಿಟ್ಟರು. ಈ ತಿರಂಗ ಪಾಯಿಂಟ್ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು. ಮೇಕ್ ಇನ್ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ ಎಂದು ಮೋದಿ ಹೇಳಿದರು.












Click it and Unblock the Notifications