'ಮಂತ್ರಿಯಾಗುವುದೇ ಪುಣ್ಯ, ಸರಿಯಾಗಿ ಕೆಲಸ ಮಾಡಿ'
ಬೆಂಗಳೂರು, ನವೆಂಬರ್ 19 : 'ಈ ವಯಸ್ಸಿನಲ್ಲೂ ನಾನು ಸರಿಯಾದ ಸಮಯಕ್ಕೆ ಕಲಾಪಕ್ಕೆ ಬಂದು ದಿನಪೂರ್ತಿ ಕೂರುತ್ತೇನೆ, ನಿಮಗೇನು ಸಮಸ್ಯೆ?. ಜೀವನದಲ್ಲಿ ಮಂತ್ರಿಯಾಗುವುದೇ ಪುಣ್ಯ, ಸರಿಯಾಗಿ ಕೆಲಸ ಮಾಡಿ' ಎಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಸದನದಲ್ಲಿ ನಡೆಯಿತು.
ಚಳಿಗಾಲದ ಅಧಿವೇಶನದ 4ನೇ ದಿನದ ಕಲಾಪ ಗುರುವಾರ ಆರಂಭವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಸಚಿವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಆರಂಭದಲ್ಲಿಯೇ ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು. [ಸದನದಲ್ಲಿ ಇಂದು : ಬಿಗ್ ಬಾಸ್ ರಿಯಾಲಿಟಿ ಶೋ ರದ್ದು ಮಾಡಲು ಪತ್ರ]

ಆದರೆ, ಪ್ರಶ್ನೆಗಳಿಗೆ ಉತ್ತರ ನೀಡಲು ಸಚಿವರೇ ಸದನದಲ್ಲಿ ಇರಲಿಲ್ಲ. ಬಿಜೆಪಿಯ ಶಶಿಕಲಾ ಜೊಲ್ಲೆ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುರಿತು ಪ್ರಶ್ನೆ ಕೇಳಿದರು. ಡಾ.ಅಶ್ವಥ್ ನಾರಾಯಣ್ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಕುರಿತು ಪ್ರಶ್ನೆ ಕೇಳಿದರು. ಈ ಇಲಾಖೆಗಳ ಸಚಿವರು ಯಾರೂ ಸದನದಲ್ಲಿ ಇರಲಿಲ್ಲ.
ಇದನ್ನು ಗಮನಿಸಿದ ಕಾಗೋಡು ತಿಮ್ಮಪ್ಪ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 'ನಾನು ಈ ವಯಸ್ಸಿನಲ್ಲೂ ಸರಿಯಾದ ಸಮಯಕ್ಕೆ ಬಂದು ದಿನಪೂರ್ತಿ ಕಲಾಪದಲ್ಲಿ ಕೂರುತ್ತೇನೆ, ನಿಮಗೇನು ಸಮಸ್ಯೆ?. ಜೀವನದಲ್ಲಿ ಮಂತ್ರಿಯಾಗುವುದೇ ಪುಣ್ಯ, ಅದರಲ್ಲಿ ಸರಿಯಾಗಿ ಕೆಲಸ ಮಾಡಿ' ಎಂದರು.
ಕಲಾಪದ ಮುಖ್ಯಾಂಶಗಳು
* ಪ್ರಚೋದನಕಾರಿ ಭಾಷಣದ ಮೂಲಕ ಕೋಮು ಗಲಭೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನಲ್ಲಿ ಪ್ರಚೋದನಾಕಾರಿ ಭಾಷಣಗಳಿಂದ ಕೋಮು ಗಲಭೆಯಂತಹ ಘಟನೆಗಳು ನಡೆದಿರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಇಂತಹ ಪ್ರಕರಣದ ಬಗ್ಗೆ ದಾಖಲಾಗಿರುವ 28 ಕೇಸ್‌ಗಳಲ್ಲಿ 21 ಪ್ರಕರಣಗಳು ಮಂಗಳೂರಿನಲ್ಲಿ ದಾಖಲಾಗಿವೆ ಎಂದು ಹೇಳಿದರು.












Click it and Unblock the Notifications