ಶಾಸಕ ಪ್ರೀತಂಗೌಡಗೆ ಭದ್ರತೆ ನೀಡಲು ರಮೇಶ್ ಕುಮಾರ್ ಸೂಚನೆ
ಬೆಂಗಳೂರು, ಫೆಬ್ರವರಿ 14: ವಿಧಾನಸಭೆಯ ಕಲಾಪ ಗುರುವಾರ ಬೆಳಿಗ್ಗೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ತೀವ್ರ ಗದ್ದಲ ಆರಂಭಿಸಿದರು.
ಕಲಾಪಕ್ಕೆ ಚಾಲನೆ ದೊರಕುತ್ತಿದ್ದಂತೆಯೇ ಬಿಜೆಪಿ ಶಾಸಕರು, ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ನಿವಾಸದ ಮೇಲೆ ನಡೆದ ದಾಳಿಯ ವಿಚಾರ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಸದನದ ಬಾವಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಧರಣಿ ನಡೆಸಿದರು.
ಬಿಜೆಪಿ ಸದಸ್ಯರ ಪ್ರತಿಭಟನೆ ನಡುವೆಯೇ ಬಜೆಟ್ ಅಧಿವೇಶನದ ಮೊದಲ ದಿನ ರಾಜ್ಯಪಾಲರು ಮಾಡಿದ ಭಾಷಣದ ಮೇಲೆ ವಂದನಾ ನಿರ್ಣಯ ಅಂಗೀಕರಿಸಲಾಯಿತು. ಬಳಿಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಜೆಟ್‌ನ ಧನವಿನಿಯೋಗ ವಿಧೇಯಕ ಮಂಡಿಸಿದರು. ಅದಕ್ಕೆ ಸಮ್ಮಿಶ್ರ ಸರ್ಕಾರದ ಧ್ವನಿಮತದ ಅಂಗೀಕಾರ ದೊರಕಿತು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಇಬ್ಬರು ಸದಸ್ಯರ ನಾಮನಿರ್ದೇಶನಕ್ಕೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅನುಮತಿ ಕೋರಿದರು.
ಪ್ರೀತಂ ಗೌಡ ಅವರ ಮೇಲೆ ದಾಳಿಗೆ ಪ್ರಯತ್ನಿಸಲಾಗಿದೆ. ಜೆಡಿಎಸ್ ಕಾರ್ಯಕರ್ತರೇ ಈ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದರು. ಆಗ ಸ್ಪೀಕರ್ ರಮೇಶ್ ಕುಮಾರ್, ಪ್ರೀತಂ ಗೌಡ ಅವರಿಗೆ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದರು.
ಬಳಿಕ ಕಲಾಪವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಲಾಯಿತು. ಗದ್ದಲದ ನಡುವೆಯೇ ಬಜೆಟ್ ಅಂಗೀಕಾರ ಮಾಡಿದ ಮುಖ್ಯಮಂತ್ರಿಯನ್ನು ಸಮ್ಮಿಶ್ರ ಸರ್ಕಾರದ ನಾಯಕರು ಅಭಿನಂದಿಸಿದರು. ಬಿಜೆಪಿ ನಾಯಕರು ಸಹ ಮುಖ್ಯಮಂತ್ರಿಯನ್ನು ಅಭಿನಂದಿಸಿ ಹೊರನಡೆದರು.
ವಿಧಾನಪರಿಷತ್‌ನಲ್ಲಿಯೂ ಗದ್ದಲ ಮುಂದುವರಿಯಿತು. ಅದರ ನಡುವೆಯೇ ಆದಿಚುಂಚನಗಿರಿ ವಿಶ್ವವಿದ್ಯಾಲಯ ವಿಧೇಯ, ಕರ್ನಾಟಕ ರಾಜ್ಯ ಋಣಪರಿಹಾರ ವಿಧೇಯಕ, ಆರ್‌ವಿ ವಿಶ್ವವಿದ್ಯಾಲಯ ವಿಧೇಯಕ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯ ಮುಂತಾದವುಗಳನ್ನು ಅಂಗೀಕರಿಸಲಾಯಿತು.












Click it and Unblock the Notifications