ಮುಂಗಾರು ಅಧಿವೇಶನ : ಸೋಮವಾರದ ಕಲಾಪದ ಮುಖ್ಯಾಂಶಗಳು
ಬೆಂಗಳೂರು, ಜುಲೈ 13 : ರಕ್ಷಿತಾರಣ್ಯದ ವ್ಯಾಪ್ತಿಗೆ ಬರುವ ಪ್ರವಾಸಿ ತಾಣಗಳಿಗೆ ಹೋಗಲು ಅರಣ್ಯ ಇಲಾಖೆ ನಿಗದಿಪಡಿಸಿರುವ ಶುಲ್ಕವನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸಲಾಗುತ್ತದೆ ಎಂದು ಅರಣ್ಯ ಸಚಿವ ರಮಾನಾಥ ರೈ ವಿಧಾನಸಭೆಯಲ್ಲಿ ಹೇಳಿದ್ದಾರೆ. ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆಗೆ ಜಾಗ ಮುಂತಾದ ಸೌಲಭ್ಯ ಕಲ್ಪಿಸಲಾಗಿದೆ. ಅದಕ್ಕಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.
ನಮ್ಮ ಹೊಲ, ನಮ್ಮ ದಾರಿ ಯೋಜನೆ : ರೈತರು ತಮ್ಮ ಜಮೀನಿಗೆ ಟ್ರ್ಯಾಕ್ಟರ್, ಟಿಲ್ಲರ್ ಮೂಲಕ ಹೋಗಲು ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ 'ನಮ್ಮ ಹೊಲ ನಮ್ಮ ದಾರಿ' ನಿರ್ಮಿಸಿಕೊಡಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ವಿಧಾನಸಭೆಯಲ್ಲಿ ಹೇಳಿದರು. ಈ ಯೋಜನೆಗೆ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
27 ಅಣೆಕಟ್ಟುಗಳ ಅಭಿವದ್ಧಿ : ವಿಶ್ವ ಬ್ಯಾಂಕ್ ನೆರವಿನಿಂದ ರಾಜ್ಯದಲ್ಲಿರುವ 27 ಅಣೆಕಟ್ಟುಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಗೆ ತಿಳಿಸಿದ್ದಾರೆ. 27 ಬೃಹತ್ ಮತ್ತು ಮಧ್ಯಮ ಅಣೆಕಟ್ಟುಗಳ ಅಭಿವೃದ್ಧಿಗಾಗಿ 276.75 ಕೋಟಿ ಸಾಲ ಪಡೆಯಲಾಗುತ್ತದೆ. ಆಲಮಟ್ಟಿ, ಹೇಮಾವತಿ, ತುಂಗಾಭದ್ರ, ನಾರಾಯಣಪುರ, ಕೆಆರ್‌ಎಸ್, ಹಾರಂಗಿ, ಕಬಿನಿ ಮುಂತಾದ ಅಣೆಕಟ್ಟುಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ಸೋಮವಾರದ ಕಲಾಪ ಆರಂಭ : ಮುಂಗಾರು ಅಧಿವೇಶನದ ಕಲಾಪಗಳು ಬೆಂಗಳೂರಿನ ವಿಧಾನಸೌಧದಲ್ಲಿ ಆರಂಭವಾಗಿವೆ. 10 ದಿನಗಳ ಕಾಲ ಬೆಳಗಾವಿಯಲ್ಲಿ ಅಧಿವೇಶನ ನಡೆದಿದ್ದು, ಸೋಮವಾರ ವಿಧಾನಸೌಧದಲ್ಲಿ ಮೊದಲ ದಿನದ ಕಲಾಪ 11 ಗಂಟೆಗೆ ಆರಂಭವಾಯಿತು. ಬಿಜೆಪಿ ಶಾಸಕರ ಸಭಾತ್ಯಾಗ ಹಿನ್ನಲೆಯಲ್ಲಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಸೋಮವಾರದ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿನ ರೈತರ ಸರಣಿ ಆತ್ಮಹತ್ಯೆ ಕುರಿತು ಚರ್ಚೆ ನಡೆಸಲು ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು. ಆದರೆ, ಚರ್ಚೆಗೆ ಅವಕಾಶ ನೀಡಲು ಸ್ಪೀಕರ್ ಕಾಗೋಡು ತಿಮ್ಮಪ್ಪ ನಿರಾಕರಿಸಿದರು. [ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೇಳಿದ ಜೆಡಿಎಸ್]

ರೈತರ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ನಿಲುವಳಿ ಸೂಚನೆಯಡಿ ರೈತರ ಆತ್ಮಹತ್ಯೆ ಪ್ರಕರಣದ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಹೇಳಿದ್ದರಿಂದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. [ರೈತರ ಮನೆಗೆ ಭೇಟಿ ನೀಡುವೆ : ಸಿದ್ದರಾಮಯ್ಯ]
ಸಿದ್ದರಾಮಯ್ಯ ಉತ್ತರ : ಬಿಜೆಪಿ ಪ್ರತಿಭಟನೆ ನಡುವೆಯೇ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲಾ ಸರ್ಕಾರದ ಅವಧಿಯಲ್ಲಿಯೂ ರೈತ ಆತ್ಮಹತ್ಯೆಗಳಾಗಿವೆ. ಚರ್ಚೆಗೆ ಅವಕಾಶ ನೀಡಿದರೆ ವಿವರವಾಗಿ ಚರ್ಚೆ ನಡೆಸೋಣ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಈ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು.












Click it and Unblock the Notifications