KJ George: ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಬಗ್ಗೆ ಸದನದಲ್ಲಿ ಕೆ ಜೆ ಜಾರ್ಜ್ ಸ್ಪಷ್ಟನೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ನಾಯಕರ ಹಸ್ತಕ್ಷೇತ್ರಗಳ ಕುರಿತು ಚರ್ಚೆ ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಇಂಧನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರಿಂದ ಬೇಸರಗೊಂಡು ಇಂಧನ ಸಚಿವ ಕೆಜೆ ಜಾರ್ಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲು ಮುಂದಾಗಿದ್ದರು ಎನ್ನುವ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ರಾಜೀನಾಮೆ ಕುರಿತು ವಿಧಾನಸಭೆಯಲ್ಲಿ ಕೆ ಜೆ ಜಾರ್ಜ್ ಅವರು ಸ್ಪಷ್ಟನೆ ನೀಡಿದ್ದಾರೆ.
ಇಂಧನಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರಸ್ತಾಪಿಸಿದರು. ಸುನಿಲ್ ಕುಮಾರ್ ಇದೇ ವಿಚಾರವನ್ನು ಸ್ಪೀಕರ್ ಯುಟಿ ಖಾದರ್ ಅವರ ಗಮನಕ್ಕೆ ತಂದರು. ಈ ವೇಳೆ ಸ್ಪಷ್ಟನೆ ನೀಡಿರುವ ಸಚಿವ ಕೆಜಿ ಜಾರ್ಜ್ ನಾನು ರಾಜೀನಾಮೆ ನೀಡಲು ಮುಂದಾಗಿಲ್ಲ. ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಿಲ್ಲ. ಅದು ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸಂಪೂರ್ಣವಾದ ನಂಬಿಕೆ ನಮಗೆ ಇದೆ. ನಿನ್ನೆ ಸಹ CLP ಮೀಟಿಂಗ್ ಇತ್ತು. ನನಗೆ ಗೊತ್ತಿಲ್ಲದ ವಿಚಾರ ಕೇಳಿದರೆ ನಾನು ಏನು ಹೇಳಲಿ? ರಾಜೀನಾಮೆ ವಿಚಾರ ಸತ್ಯಕ್ಕೆ ದೂರವಾದ ಮಾತು. ಮಾಧ್ಯಮಗಳು ಇಂತಹ ಸುದ್ದಿಗಳನ್ನು ಅವರೇ ಸೃಷ್ಟಿ ಮಾಡುತ್ತಿದ್ದಾರೆ. ಆವರಿಗೆ ಬೆಳಿಗ್ಗೆ ಸಾಯಂಕಾಲ ಸುದ್ದಿ ಬೇಕಾಗಿದೆ ಈ ರೀತಿ ಸೃಷ್ಟಿ ಮಾಡುತ್ತಿದ್ದಾರೆ. ನಾನು ರಾಜೀನಾಮೆ ಕೊಡೋದು ಇಲ್ಲ ಆ ಪ್ರಶ್ನೆ ಉದ್ಭವಿಸಲ್ಲ ಎಂದು ವಿಧಾನಸಭೆಯಲ್ಲಿ ಕೆ ಜೆ ಜಾರ್ಜ್ ಅವರು ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಹಿಂದೆಲ್ಲಾ ದಿನಕ್ಕೆ ಮೂರು ಬಾರಿ ನ್ಯೂಸ್ ಬರುತ್ತಿತ್ತು. ಈಗ ಗಂಟೆಗೊಂದು ಬ್ರೇಕಿಂಗ್ ನ್ಯೂಸ್ ಬರುತ್ತಿದೆ. ಅವರೇ ಸೃಷ್ಟಿ ಮಾಡುತ್ತಿದ್ದಾರೆ. ನಾನು ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಮತ್ತು ಬೆಂಬಲ ಇದೆ ಎಂದು ಸದನದಲ್ಲಿ ಕೆ ಜೆ ಜಾರ್ಜ್ ತಿಳಿಸಿದರು.
ಇನ್ನೂ ವಾರದ ಹಿಂದೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ದ ಶಿಸ್ತು ಕ್ರಮಕ್ಕೆ ಸೂಚಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಪಂಕಜ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿತ್ತು. ಈ ವೇಳೆ ಕೆ ಜೆ ಜಾರ್ಜ್ ಅವರು ರಾಜೀನಾಮೆ ಮಾತನ್ನು ಆಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಧಾನ ಮಾಡಿ ಕಳಹಿಸಿದ್ದರು ಎಂದು ಹೇಳಲಾಗಿದೆ.












Click it and Unblock the Notifications