Karnataka Weather: ರಾಜ್ಯದಲ್ಲಿ ಹೇಗಿರಲಿದೆ ಅಶ್ವಿನಿ ಮಳೆ ಅಬ್ಬರ?
ಹಿಂದೂ ಧರ್ಮದಲ್ಲಿ ಮಳೆ ನಕ್ಷತ್ರಗಳನ್ನು ಹೆಚ್ಚಾಗಿ ನಂಬಲಾಗುತ್ತದೆ. ಅಶ್ವಿನಿ ಮಳೆಯಿಂದ ಶುರುವಾಗುವ ಮಳೆ ನಕ್ಷತ್ರ ವಿಶಾಖ ನಕ್ಷತ್ರಕ್ಕೆ ಕೊನೆಯಾಗುತ್ತದೆ. ಮಳೆ ನಕ್ಷತ್ರದ ಆಧಾರದ ಮೇಲೆಯೇ ಭಾರತದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು.
ಹವಾಮಾನ ಇಲಾಖೆ ವೈಜ್ಞಾನಿಕವಾಗಿ ಮಳೆ ವರದಿ, ಮುನ್ಸೂಚನೆ ನೀಡುತ್ತಿದ್ದರೂ, ರೈತಾಪಿ ವರ್ಗದಲ್ಲಿ ಇನ್ನೂ ಮಳೆ ನಕ್ಷತ್ರಗಳನ್ನು ಬಲವಾಗಿ ನಂಬುವವರು ಇದ್ದಾರೆ. ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಪುನರ್ವಸು, ಮೃಗಶಿರ, ಆರಿದ್ರ, ಪುಷ್ಯ, ಆಶ್ಲೇಷ, ಮಾಘ, ಹುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ, ವಿಶಾಖ ಪ್ರಮುಖ ಮಳೆ ನಕ್ಷತ್ರಗಳಾಗಿವೆ.

2024ರಲ್ಲಿ ಏಪ್ರಿಲ್ 13 (ಶನಿವಾರ) ಅಶ್ವಿನಿ ಮಳೆ ನಕ್ಷತ್ರ ಆರಂಭವಾಗಿದೆ. ಆದರೆ ಅಶ್ವಿನಿ ಮಳೆ ನಕ್ಷತ್ರ ಆರಂಭಕ್ಕೂ ಮುನ್ನವೇ ಯುಗಾದಿ (ಏಪ್ರಿಲ್ 9) ದಿನದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.
ಶುಭಾರಂಭ ಮಾಡಿದ ಅಶ್ವಿನಿ ಮಳೆ
ಏಪ್ರಿಲ್ 12 ಮತ್ತು 13ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಶನಿವಾರ ಹಲವು ಜಿಲ್ಲೆಗಳು ಅಶ್ವಿನಿ ಮಳೆಯ ಮೊದಲ ದಿನವೇ ಮಳೆಯನ್ನು ಪಡೆದಿವೆ. 2024 ಮೊದಲ ಮಳೆಯನ್ನು ಕಂಡ ಹಲವು ಜಿಲ್ಲೆಯ ಜನ ಸಂಭ್ರಮಿಸಿದ್ದಾರೆ.
ಶನಿವಾರ ಶಿವಮೊಗ್ಗ 79 ಮಿ.ಮೀ, ಕಲಬುರಗಿ 67 ಮಿ.ಮೀ, ಉಡುಪಿ 64 ಮಿ.ಮೀ, ಉತ್ತರ ಕನ್ನಡ 63 ಮಿ.ಮೀ, ವಿಜಯಪುರ 57 ಮಿ.ಮೀ, ಬಳ್ಳಾರಿ 55 ಮಿ.ಮೀ, ಯಾದಗಿರಿ 55 ಮಿ.ಮೀ, ಚಿತ್ರದುರ್ಗ 54 ಮಿ.ಮೀ, ಚಿಕ್ಕಮಗಳೂರು 53 ಮಿ.ಮೀ, ಧಾರವಾಡ 53 ಮಿ.ಮೀ, ರಾಯಚೂರು 45ಮಿ.ಮೀ, ಹಾವೇರಿ 37 ಮಿ.ಮೀ, ದಾವಣಗೆರೆ 35 ಮಿ.ಮೀ, ದಕ್ಷಿಣ ಕನ್ನಡ 33 ಮಿ.ಮೀ, ಗದಗ 28 ಮಿ.ಮೀ, ಕೊಪ್ಪಳ 27 ಮಿ.ಮೀ, ಹಾಸನ 20 ಮಿ.ಮೀ, ಬಾಗಲಕೋಟೆ 19 ಮಿ.ಮೀ, ಬೆಳಗಾವಿ 18 ಮಿ.ಮೀ, ಬೀದರ್ 18 ಮಿ.ಮೀ ಮಳೆಯಾಗಿದೆ.
ಏಪ್ರಿಲ್ 26 ರವರೆಗೆ ಅಶ್ವಿನಿ ಮಳೆ ಅಬ್ಬರ
ಏಪ್ರಿಲ್ 26ರವರೆಗೆ ಅಶ್ವಿನಿ ಮಳೆ ಇರಲಿದ್ದು, ಏಪ್ರಿಲ್ 27ರಿಂದ ಭರಣಿ ಮಳೆ ಆರಂಭವಾಗಲಿದೆ. ಅಶ್ವಿನಿ ಮಳೆ ರಾಜ್ಯದಲ್ಲಿ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಕಳೆದ ವರ್ಷ ಬರ ಮತ್ತು ತಾಪಮಾನ ಹೆಚ್ಚಳದಿಂದ ಕಂಗಾಲಾಗಿರುವ ರಾಜ್ಯಕ್ಕೆ ಅಶ್ವಿನಿ ಮಳೆ ತಂಪೆರೆಯುವುದು ಬಹುತೇಕ ಪಕ್ಕಾ ಆಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಚಾಮರಾಜನಗರ ಜಿಲ್ಲೆಗಳು ಇನ್ನೂ ವರ್ಷದ ಮಳೆಯನ್ನು ಕಂಡಿಲ್ಲ, ಆದರೆ ಮುಂದಿನ ಕೆಲವು ದಿನಗಳಲ್ಲೇ ಈ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ.












Click it and Unblock the Notifications