Madal Virupakshappa: ಬಂಧಿತರಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಿಎಸ್‌ವೈ ಆಪ್ತ- ಇವರ ಹಿನ್ನೆಲೆ ತಿಳಿಯಿರಿ
ಬೆಂಗಳೂರು, ಮಾರ್ಚ್ 28: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ( Karnataka Lokayuta ) ಪೊಲೀಸರಿಂದ ಬಂಧಿತರಾಗಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ( Madal Virupakshappa ) ಅವರು ಮಾಜಿ ಮುಖ್ಯಮಂತ್ರಿ ಮತ್ತು ಪ್ರಬಲ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪ ( BS Yediyurappa ) ಆಪ್ತರು ಮತ್ತು ದಾವಣಗೆರೆ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರು.
ಮಾಡಾಳ್ ವಿರುಪಾಕ್ಷಪ್ಪ ಮತ್ತು ಅವರ ಮಗನ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಮನೆಯಲ್ಲಿ ದೊರೆತ ಕೋಟ್ಯಾಂತರ ಹಣಕ್ಕೆ ಯಾವುದೇ ಪುರಾವೆಗಳನ್ನು ಒದಗಿಸದ ಕಾರಣ ಚನ್ನಗಿರಿ ಶಾಸಕರ ಬಂಧನವಾಗಿದೆ.

ವಿರೂಪಾಕ್ಷಪ್ಪ ಅವರು ಕರ್ನಾಟಕ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಲೋಕಾಯುಕ್ತ ಪೊಲೀಸರು ಸೋಮವಾರ ಅವರನ್ನು ಬಂಧಿಸಿದರು.
ವಿಪರ್ಯಾಸವೆಂದರೆ, ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ, ದೇಶಭಕ್ತರ ಪಕ್ಷದಿಂದ ಮಾತ್ರ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸಾಧ್ಯ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರಿಗೆ ಕರೆ ನೀಡಿದ್ದರು.

ಮಾರ್ಚ್ 2 ರಂದು ಸಂಜೆ ವಿರೂಪಾಕ್ಷಪ್ಪ ಅವರ ಪುತ್ರ ಪ್ರಕಾಶ್ ಮಾಡಾಳ್ ಅವರು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನಿಂದ ಟೆಂಡರ್ ಪಡೆಯಲು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರಿಗೆ ನೇರವಾಗಿ ಸಿಕ್ಕಿಬಿದ್ದರು. ಪ್ರಕಾಶ್ ಅವರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (BWSSB) ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪುತ್ರ ಪ್ರಕಾಶ್ ಅವರ ಬಂಧನವಾದ ನಂತರ ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಲೆಮರೆಸಿಕೊಂಡಿದ್ದರು. ಹೈಕೋರ್ಟ್‌ನಿಂದ ಜಾಮೀನು ಸಿಕ್ಕ ನಂತರ ತಮ್ಮ ಊರಿನಲ್ಲಿ ಪ್ರತ್ಯಕ್ಷರಾಗಿದ್ದರು. ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಬೆಂಬಲಿಗರು ಕ್ಷೇತ್ರದಲ್ಲಿ ಮೆರವಣಿಗೆ ಮೂಲಕ ಕರೆದೊಯ್ದಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಯಡಿಯೂರಪ್ಪ ಆಪ್ತ ಮಾಡಾಳ್ ವಿರೂಪಾಕ್ಷಪ್ಪ
72ರ ಹರೆಯದ ವಿರೂಪಾಕ್ಷಪ್ಪ ಚನ್ನಗಿರಿಯಿಂದ ಎರಡು ಬಾರಿ ಶಾಸಕರಾಗಿದ್ದು, ಜಿಲ್ಲೆಯ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಅವರು ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರು, ಇದು ಲಿಂಗಾಯತ ಉಪಪಂಗಡವಾಗಿದೆ. ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಮೂಲಕ ಪ್ರಾರಂಭಿಸಿದರು. ಆ ನಂತರ ಬಿಜೆಪಿ ಸೇರಿದರು. 2008 ರಲ್ಲಿ ತಮ್ಮ ಮೊದಲ ಚುನಾವಣೆಯನ್ನು ಗೆದ್ದರು.
ಯಡಿಯೂರಪ್ಪ ಅವರು 2012 ರಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡು ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ) ಕಟ್ಟಿದರು. ಮಾಡಾಳ್ ವಿರೂಪಾಕ್ಷಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಸೇರಿದರು. ಹಿರಿಯ ಬಿಜೆಪಿ ನಾಯಕ ಯಡಿಯೂರಪ್ಪನವರಿಗೆ ತಮ್ಮ ನಿಷ್ಠೆಯನ್ನು ತೋರಿದರು. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದರು. ಆ ವರ್ಷದ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಡ್ನಾಳ್ ರಾಜಣ್ಣ ವಿರುದ್ಧ ಸೋತರು.
2014ರಲ್ಲಿ ಯಡಿಯೂರಪ್ಪ ಬಿಜೆಪಿಗೆ ಮರಳಿದ ನಂತರ ವಿರೂಪಾಕ್ಷಪ್ಪ ಕೂಡ ಬಿಜೆಪಿಗೆ ಬಂದರು. 2018ರಲ್ಲಿ ಚನ್ನಗಿರಿಯಿಂದ ವಿರೂಪಾಕ್ಷಪ್ಪ ಗೆದ್ದರೂ ಸಚಿವ ಸ್ಥಾನ ಸಿಗಲಿಲ್ಲ. ಎರಡು ವರ್ಷಗಳ ನಂತರ, ಯಡಿಯೂರಪ್ಪ ಅವರು ಸಿಎಂ ಆಗಿದ್ದ ಅವಧಿಯಲ್ಲಿ, ಅವರನ್ನು ಕೆಎಸ್‌ಡಿಎಲ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ, ವಿರೂಪಾಕ್ಷಪ್ಪ ಅವರ ಇನ್ನೊಬ್ಬ ಪುತ್ರ ಮಲ್ಲಿಕಾರ್ಜುನ ಮಾಡಾಳ್ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಅಧಿಕಾರಿಗಳ ಪ್ರಕಾರ, ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ತನ್ನ ತಂದೆಯ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಪ್ರಶಾಂತ್ ಸಿಕ್ಕಿಬಿದ್ದಿದ್ದಾನೆ. ಅಲ್ಲಿಂದ 2.02 ಕೋಟಿ ನಗದು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಶಾಂತ್ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ 6.1 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಫ್‌ಐಆರ್‌ನಲ್ಲಿ ವಿರೂಪಾಕ್ಷಪ್ಪ ಅವರನ್ನು ಪ್ರಮುಖ ಆರೋಪಿ ಮತ್ತು ಪ್ರಶಾಂತ್ ಅವರನ್ನು ಎರಡನೇ ಆರೋಪಿ ಎಂದು ಪೊಲೀಸರು ಹೆಸರಿಸಿದ್ದಾರೆ.












Click it and Unblock the Notifications