ಎಪಿಎಲ್ ಕುಟುಂಬ, ಸರ್ಕಾರಿ ನೌಕರರಿಗೂ ಆರೋಗ್ಯ ಭಾಗ್ಯ
ಬೆಂಗಳೂರು, ಜ, 18: ಎಪಿಎಲ್ ಕಾರ್ಡ್ ದಾರರು ಮತ್ತು ಸರ್ಕಾರಿ ನೌಕರರ ಕುಟುಂಬಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಎಪಿಎಲ್ ಕುಟುಂಬಗಳಿಗೂ 'ರಾಜೀವ್ ಆರೋಗ್ಯ ಭಾಗ್ಯ' ಮತ್ತು ಸರ್ಕಾರಿ ನೌಕರರಿಗೆ 'ಜ್ಯೋತಿ ಸಂಜೀವಿನಿ' ಯೋಜನೆ ಹೆಸರಲ್ಲಿ ಆರೋಗ್ಯ ಭಾಗ್ಯವನ್ನು ಜನವರಿ 20 ರಿಂದ ಕಲ್ಪಿಸಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ಬಿಪಿಎಲ್ ಕುಟುಂಬಗಳಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಜಾರಿಯಲ್ಲಿದೆ. ಎಪಿಎಲ್ ಕುಟುಂಬಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಹೊಸ ಆರೋಗ್ಯ ಜಾರಿ ಮಾಡಿರುವುದರಿಂದ ರಾಜ್ಯದ ಶೇ. 90ರಷ್ಟು ಜನರಿಗೆ ಚಿಕಿತ್ಸಾ ಸೌಲಭ್ಯ ಒದಗಿಸಿದಂತಾಗುತ್ತದೆ. ಎರಡೂ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಲು ಸದ್ಯವೇ ಮೊಬೈಲ್ ಆಪ್ ಸಹ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.[ರಾಜ್ಯ ಸರ್ಕಾರದಿಂದ ಶೀಘ್ರ 'ದಂತ ಆರೋಗ್ಯ ಸಮೀಕ್ಷೆ?]

ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ಅಪಘಾತ, ಸುಟ್ಟಗಾಯ, ನವಜಾತ ಶಿಶುಗಳಿಗೆ ಸಂಬಂಧಿಸಿದ ಮಾರಕ ಕಾಯಿಲೆ ಸೇರಿದಂತೆ 449 ಬಗೆಯ ಶಸ್ತ್ರಚಿಕಿತ್ಸೆ ಒದಗಿಸಲು 110 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೂ ಒಪ್ಪಿಕೊಂಡಿವೆ. ಎಪಿಎಲ್ ಕಾರ್ಡ್ ಒಂದೇ ಫಲಾನುಭವಿಗಳ ಅರ್ಹತೆಗೆ ಮಾನದಂಡ. ಅದು ಬಿಟ್ಟು ಪ್ರತ್ಯೇಕ ಗುರುತಿನ ಚೀಟಿ ಕೊಡಲಾಗುವುದಿಲ್ಲ ಎಂದು ತಿಳಿಸಿದರು.
ರಾಜೀವ್ ಆರೋಗ್ಯ ಭಾಗ್ಯದಡಿ ಎಪಿಎಲ್ ಕಾರ್ಡ್‌ದಾರರ ಶೇ.70ರಷ್ಟು ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದ್ದರೆ, ಉಳಿದ ಶೇ.30ರಷ್ಟನ್ನು ಮಾತ್ರ ಫಲಾನುಭವಿ ನೀಡಬೇಕಾಗುತ್ತದೆ. ರೋಗಿ ಬಯಸಿದರೆ ಸ್ಪೆಷಲ್ ವಾರ್ಡ್ ಸೇವೆ ಪಡೆಯಬಹುದು. ಆದರೆ ಸರ್ಕಾರ ಜನರಲ್ ವಾರ್ಡ್ ನಷ್ಟೇ ಹಣ ಪಾವತಿಸಲಿದೆ. 1 ಕುಟುಂಬಕ್ಕೆ 1.5 ಲಕ್ಷ ರೂ. ಮಿತಿ ಗುರುತಿಸಲಾಗಿದೆ. ಸುವರ್ಣ ಆರೋಗ್ಯ ಟ್ರಸ್ಟ್ ಪರವಾನಗಿ ಪಡೆದರೆ ಹೆಚ್ಚಿನ ಮೊತ್ತ ಪಡೆದುಕೊಳ್ಳಬಹುದು.












Click it and Unblock the Notifications