Minister Priyank kharge: ಗ್ಯಾರಂಟಿ ಎಲ್ಲರಿಗೂ ಉಚಿತ ಎಂದು ನಾವು ಎಲ್ಲೂ ಹೇಳಿಲ್ಲ: ಪ್ರಿಯಾಂಕ್ ಖರ್ಗೆ
ಬೆಂಗಳೂರು,ಮೇ31: ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಉಚಿಯವಾಗಿ ಅನ್ವಯ ಎಂದು ನಾವು ಎಲ್ಲೂ ಹೇಳಿಲ್ಲ. ಸರ್ಕಾರದ ಯಾವುದೇ ಯೋಜನೆ ಪುಕ್ಸಟ್ಟೆ ಇರುವುದಿಲ್ಲ. ಮಾನದಂಡಗಳು ಅಗತ್ಯ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಕುರಿತು ಮಾತನಾಡಿ, ಗ್ಯಾರಂಟಿ ಯೋಜನೆಗಳು ಯಾರಿಗೆ ಸಿಗಬೇಕು ಹಾಗೂ ಯಾರಿಗೆ ಸಿಗಬಾರದು ಎಂಬ ನೀಲಿ ನಕ್ಷೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆಲವೊಂದು ನಿರ್ಬಂಧಗಳು ಅನಿವಾರ್ಯ. ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರದ್ದೇ ಇರಲಿ, ಸರ್ಕಾರದ ಯಾವುದೇ ಯೋಜನೆಗಳು ಪುಕ್ಸಟ್ಟೆಯಾಗಿ ಸಿಗುವುದಿಲ್ಲ. ಬದಲಾಗಿ ಕೆಲವೊಂದು ಮಾನದಂಡಗಳು ಅಗತ್ಯವಾಗಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳು ಕುರಿತು ಶುಕ್ರವಾರ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗುತ್ತದೆ. ಆಳವಾಗಿ ಚರ್ಚೆ ಆದ ಬಳಿಕ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಆರ್ಥಿಕ ಇಲಾಖೆಯವರು ಯಾವ ರೀತಿಯಲ್ಲಿ ಘೋಷಣೆಗಳನ್ನು ಜಾರಿಗೊಳಿಸಬಹುದು ಎಂಬುವುದನ್ನು ತಿಳಿಸಿದ್ದಾರೆ.
ಆರ್ಥಿಕ ಸ್ಥಿರತೆ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ. ಆರ್ಥಿಕ ಹೊಣೆ ಆಗುವುದು ನಿಜ. ಆದರೆ ಇದು ಆರ್ಥಿಕ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಮಾಡುತ್ತಿರುವುದು. ಬಡತನ ರೇಖೆಗಿಂತ ಕೆಳಗೆ ಇರುವವರಿಗೆ, ಜನಸಾಮಾನ್ಯರಿಗೆ ಆರ್ಥಿಕ ಸ್ಥಿರತೆ ಕೊಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸುತ್ತಿದ್ದೇವೆ.
ಚುನಾವಣೆಯಲ್ಲಿ ಬಿಜೆಪಿ ಸೋತು ಸುಣ್ಣವಾಗಿ ಮನೆಯಲ್ಲಿ ಕುಳಿತುಕೊಂಡಿದೆ. ಹಾಗಾಗಿ ಈ ರೀತಿಯಲ್ಲಿ ಪ್ರಚೋದನೆ ಕೊಡುತ್ತಿದ್ದಾರೆ. ಅವರು ನಾಲ್ಕು ವರ್ಷ ಇದ್ದರು ಏನು ಮಾಡಿದ್ದಾರೆ? 600 ಭರವಸೆ ಕೊಟ್ಟಿದ್ದರು, ಎಷ್ಟು ಈಡೇರಿಸಿದ್ದಾರೆ? ಎಂದು ಪ್ರಶ್ನಿಸಿದ್ದರು.

ಈ ಹಿಂದೆ ಪ್ರಧಾನಿ ಮೋದಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ಕೊಟ್ಟಿದ್ದರು ಅದು ಬಂತಾ? ಪ್ರತಿ ಒಬ್ಬರ ಅಕೌಂಟಿಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು ಅದು ಈಡೇರಿದೆಯಾ? ಎಂದು ಪ್ರಶ್ನಿಸಿದರು.












Click it and Unblock the Notifications