ಅಣ್ಣಾಮಲೈ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಮಾಜಿ ಪೊಲೀಸ್ ಅಧಿಕಾರಿ!
ಬೆಂಗಳೂರು, ಮೇ 07; ತಮಿಳುನಾಡು ಬಿಜೆಪಿಯ ಅಧ್ಯಕ್ಷ ಕೆ. ಅಣ್ಣಾಮಲೈ ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಪಕ್ಷದ ಸಹ ಉಸ್ತುವಾರಿ. ರಾಜ್ಯದಲ್ಲಿ ಅವರು ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ. ಈ ಹಿಂದೆ ಐಪಿಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಅವರು ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮುಕಿದ್ದಾರೆ.
ಬಿಜೆಪಿ ಸೇರಿರುವ ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಕುರಿತು ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಭಾನುವಾರ ಟ್ವೀಟ್ ಮಾಡಿದ್ದಾರೆ. ಅಣ್ಣಾಮಲೈ ಹೇಳಿಕೆಯ ಒಂದು ಪೇಪರ್ ಕಟಿಂಗ್ ಕೋಟ್ ಮಾಡಿ ಅವರು ಟ್ವೀಟ್ ಮಾಡಿ, ಅನುಕಂಪ ವ್ಯಕ್ತಪಡಿಸಿದ್ದಾರೆ.

"ಅಯ್ಯೋ ದುರ್ವಿಧಿಯೇ ಅಣ್ಣಾಮಲೈಗೆ BJPಯವರು ಎಂತಹಾ ದಯನೀಯ ಸ್ಥಿತಿ ತಂದಿಟ್ಟಿದ್ದಾರೆ ನೋಡಿ?! ಒಬ್ಬ ಮಾಜಿ IPSಅಧಿಕಾರಿ ರೌಡಿ ಮತ್ತು ಕ್ರಿಮಿನಲ್‌ಗಳ ಪರವಾಗಿ ಬ್ಯಾಟಿಂಗ್ ಮಾಡಬೇಕಾದ ದುಃಸ್ಥಿತಿ!!!. ಮೋದಿ ಹೇಗೋ escape ಆದ್ರು. ಪಾಪ.....ಅಣ್ಣಾಮಲೈ ಮಾತ್ರ ಸಿಕ್ಕ್ಹಾಕಿಕೊಂಡರು" ಎಂದು ಅನುಪಮಾ ಶೆಣೈ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಟ್ವೀಟ್‌ಗೆ ಕಾರಣವೇನು?; ಮಾಜಿ ಪೊಲೀಸ್ ಅಧಿಕಾರಿ ಅನುಮಮಾ ಶೆಣೈ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ವಿರುದ್ಧ ಟ್ವೀಟ್ ಮಾಡಲು ಕಾರಣ ಕರ್ನಾಟಕದ ಬಿಜೆಪಿ ಮತ್ತು ಚಿತ್ತಾಪುರ ಕ್ಷೇತ್ರದ ಪಕ್ಷದ ಅಭ್ಯರ್ಥಿ, ರೌಡಿ ಶೀಟರ್ ಮಣಿಕಂಠ ರಾಠೋಡ್. ರಾಜ್ಯದ ಚುನಾವಣೆಯಲ್ಲಿ ಬಹಳ ಚಿರಪರಿಚಿತ ಹೆಸರು ಈ ಬಿಜೆಪಿ ಅಭ್ಯರ್ಥಿಯದ್ದು.

ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ್ ಬಿಜೆಪಿ ಅಭ್ಯರ್ಥಿ. ಈತ ಮಾತನಾಡಿದ್ದಾರೆ ಎಂಬ ಆಡಿಯೋವೊಂದು ಎರಡು ದಿನದಿಂದ ವೈರಲ್ ಆಗಿದೆ. ಕಾಂಗ್ರೆಸ್ ಈ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಎಂತಹ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೀರಿ? ಎಂದು ಪಕ್ಷವನ್ನು ಕೇಳುತ್ತಿದೆ.
ಮಣಿಕಂಠ ರಾಠೋಡ್, "ಖರ್ಗೆ ಹೆಂಡರು, ಮಕ್ಕಳನ್ನು ಸಾಫ್ ಮಾಡುತ್ತೇನೆ" ಎಂದು ಹೇಳಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್ ಮಣಿಕಂಠ ರಾಠೋಡ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಕ್ಕೆ ನಿಂತಿದೆ. ಬಿಜೆಪಿ ವಿರುದ್ಧ ಟೀಕೆ ಮಾಡಿದೆ.
ಕೆ. ಅಣ್ಣಾಮಲೈ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮಣಿಕಂಠ ರಾಠೋಡ್ ಹೇಳಿಕೆ "ಕಟ್ ಎಂಡ್ ಪೇಸ್ಟ್" ಎಂದು ಹೇಳಿದ್ದಾರೆ. ಅನುಪಮಾ ಶೆಣೈ ಇದೇ ಹೇಳಿಕೆ ಮುಂದಿಟ್ಟುಕೊಂಡು ಕೆ. ಅಣ್ಣಾಮಲೈ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ರೌಡಿ ಶೀಟರ್ ಸಮರ್ಥನೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.
ಕೆ. ಅಣ್ಣಾಮಲೈ ಹೇಳಿದ್ದೇನು?; ಮಣಿಕಂಠ ರಾಠೋಡ್ ಹೇಳಿಕೆ ಬಗ್ಗೆ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆ. ಅಣ್ಣಾಮಲೈ, "ಎರಡು ಮೂರು ತಿಂಗಳಿನಿಂದ ಕರ್ನಾಟಕದಲ್ಲಿರುವ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಪ್ರಜ್ಞೆಯ ಸಮತೋಲನ ಕಳೆದುಕೊಂಡಿದ್ದಾರೆ. ಪ್ರಧಾನಿಯಾವರ ಪ್ರಚಾರ ಆರಂಭವಾದ ಬಳಿಕ ಬಿಜೆಪಿ ಪರ ಅಲೆ ಹೆಚ್ಚಾಗಿದೆ. ಇದರಿಂದ ಹತಾಶೆಗೊಂಡು ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದ್ದರು.
"ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. 26 ವರ್ಷದ ಯುವಕನ ಮೇಲೆ ಖರ್ಗೆ ಕುಟುಂಬಕ್ಕೆ ಏಕಿಷ್ಟು ಸಿಟ್ಟು?, ಅವರ ವಿರುದ್ಧ ಏಕೆ ಅಪಪ್ರಚಾರ ಮಾಡುತ್ತಿದ್ದಾರೆ?. ಎರಡು ವರ್ಷದಿಂದ ಒಳ್ಳೆಯ ಕೆಲಸಗಳ ಮೂಲಕ ಜನರ ಪ್ರೀತಿಗಳಿಸಿರುವ ರಾಠೋಡ್ ಮೇಲೆ ಪ್ರಿಯಾಂಕ್ ಖರ್ಗೆ 40 ಪ್ರಕರಣಗಳನ್ನು ದಾಖಲಸಿದ್ದಾರೆ" ಎಂದು ತಿಳಿಸಿದ್ದರು.
ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಯಸ್ಸು 26, ದಾಖಲಾಗಿರುವ ಪ್ರಕರಣಗಳು 40, ಆಸ್ತಿ 29 ಕೋಟಿ, ವಿದ್ಯಾರ್ಹತೆ ಎಸ್‌ಎಸ್‌ಎಸ್‌ಎಲ್‌ಸಿ ಫೇಲ್, ಅಂಗನವಾಡಿ ಮಕ್ಕಳಿಗೆ ಹಂಚುವ ಹಾಲಿನ ಪುಡಿ, ಪಡಿತರ ಅಕ್ಕಿ ಕಳ್ಳ ಸಾಗಣೆ ಆರೋಪ ಎದುರಿಸುತ್ತಿರುವ ಇವರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಮಣಿಕಂಠ ರಾಠೋಡ್ ಪರವಾಗಿ ಪ್ರಚಾರ ನಡೆಸಲು ಚಿತ್ತಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಬೇಕಿತ್ತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸರಣಿ ಟ್ವೀಟ್‌ಗಳ ಮೂಲಕ ಮಣಿಕಂಠ ರಾಠೋಡ್ ಟೀಕಿಸಿದ ಮೇಲೆ ಮೋದಿ ಪ್ರಚಾರ ರದ್ದು ಮಾಡಲಾಗಿತ್ತು.












Click it and Unblock the Notifications