ಸರಕಾರಿ ಕಚೇರಿಗಳಲ್ಲಿ ಲಂಚ ಬೇಡ ನಾಮಫಲಕ; ರಾಜಕೀಯ ವಾಗ್ಯುದ್ಧ

ಬೆಂಗಳೂರು, ಸೆ. 27: ರಾಜ್ಯ ರಾಜಕೀಯದಲ್ಲಿ ಭ್ರಷ್ಟಾಚಾರ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಸರಕಾರ ಮತ್ತು ವಿಪಕ್ಷಗಳ ಮಧ್ಯೆ ಮಹಾ ಸಮರವೇ ನಡೆಯುತ್ತಿದೆ. ಭ್ರಷ್ಟಾಚಾರ ವಿಷಯವನ್ನಿಟ್ಟುಕೊಂಡು ಸರಕಾರವನ್ನು ಹುರಿದು ಮುಕ್ಕಲು ಕಾಂಗ್ರೆಸ್ ಸಕಲ ಪ್ರಯತ್ನ ಮಾಡುತ್ತಿದೆ. ಸರಕಾರ ವಿರುದ್ಧ ಕೇಳಿಬಂದಿರುವ ಹಲವು ಭ್ರಷ್ಟಾಚಾರ ಆರೋಪಗಳು ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರಗಳನ್ನು ನೀಡಿವೆ. ವಿಪಕ್ಷದ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸರಕಾರ ಕೂಡ ಪ್ರಯತ್ನಿಸುತ್ತಿದೆ. ಇದೇ ವೇಳೆ, ಲಂಚ ವಿರೋಧಿ ಫಲಕಗಳನ್ನು ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಹಾಕುವ ನಿರ್ಧಾರಕ್ಕೆ ಸರಕಾರ ಬಂದಿದೆ.

ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರಿಂದ ಆರಂಭಗೊಂಡು ಮುಂದಿನ ಒಂದು ವರ್ಷದ ಅವಧಿಯವರೆಗೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ವಿರೋಧಿ ಫಲಕಗಳನ್ನು ಕಾಣಸಿಗಲಿವೆ.

ಸಿಟಿಜನ್ ಎನ್‌ಕ್ವೈರಿ ಕೌನ್ಸಿಲ್ ಮತ್ತು ಸಿಇಸಿ ಟ್ರಸ್ಟ್ ಸಂಸ್ಥೆಗಳು ಸರಕಾರಕ್ಕೆ ಇಂಥದ್ದೊಂದು ಸಲಹೆ ಇರುವ ಪ್ರಸ್ತಾವ ಮುಂದಿಟ್ಟಿತ್ತು. ಇದನ್ನು ಮುಖ್ಯಮಂತ್ರಿ ಕಾರ್ಯಾಲಯ ಒಪ್ಪಿಕೊಂಡಿರುವುದು ತಿಳಿದುಬಂದಿದೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರು ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳ ಇಲಾಖೆಗೆ (ಡಿಪಿಎಆರ್) ಈ ನಿಟ್ಟಿನಲ್ಲಿ ಕಾರ್ಯವಹಿಸುವಂತೆ ಸೂಚನೆ ನೀಡಿದ್ದಾರೆನ್ನಲಾಗಿದೆ.

Anti Graft Boards at Govt Offices, Siddaramaiah Dig at CM Bommai

ಏನಿರುತ್ತೆ ಬೋರ್ಡ್‌ನಲ್ಲಿ?

ಸಿಟಿಜನ್ ಎನ್‌ಕ್ವೈರಿ ಕೌನ್ಸಿಲ್ ಮತ್ತು ಸಿಇಸಿ ಟ್ರಸ್ಟ್ ಸಲ್ಲಿಸಿರುವ ಪ್ರಸ್ತಾವದ ಪ್ರಕಾರ, "ನನಗೆ ಲಂಚ ಕೊಡಬೇಕಿಲ್ಲ. ನಾನು ಭ್ರಷ್ಟ ಅಧಿಕಾರಿ ಅಲ್ಲ" ಎಂದು ಬರೆಯಲಾಗುವ ಫಲಕವನ್ನು ಸರಕಾರಿ ಕಚೇರಿಗಳಲ್ಲಿ ಹಾಕಬೇಕೆಂದು ಸಲಹೆ ನೀಡಲಾಗಿದೆ.

ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಪೇಸಿಎಂ, 40 ಪರ್ಸೆಂಟ್ ಕಮಿಷನ್ ಇತ್ಯಾದಿ ಆರೋಪಗಳಿರುವ ಅಸ್ತ್ರವನ್ನು ಪ್ರಯೋಗಿಸುತ್ತಿರುವ ಹೊತ್ತಿನಲ್ಲೇ ಸರಕಾರ ಈ ನಡೆ ಇಡುತ್ತಿರುವುದು ಕುತೂಹಲ.

ಸಿದ್ದರಾಮಯ್ಯ ಲೇವಡಿ:

ಲಂಚ ವಿರೋಧಿ ಫಲಕಗಳನ್ನು ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಹಾಕುವ ಸರಕಾರದ ನಿರ್ಧಾರವನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ ಲೇವಡಿ ಮಾಡಿದ್ದು, ಸಿಎಂ ಮತ್ತವರ ಸಚಿವರ ಮನೆಗಳ ಮುಂದೆ ಈ ಬೋರ್ಡ್ ಹಾಕಬೇಕು ಎಂದು ಸಲಹೆ ನೀಡಿದ್ದಾರೆ. ಹಾಗೆಯೇ, ತಾನು ಮಾಡುವ ಭ್ರಷ್ಟಾಚಾರವನ್ನು ಸರಕಾರಿ ಅಧಿಕಾರಿಗಳ ಮೇಲೆ ಹಾಕುತ್ತಿದೆ ಎಂದೂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

"ನನಗೆ ಲಂಚ ಕೊಡಬೇಕಾಗಿಲ್ಲ. ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂದು ಸರಕಾರಿ ಕಚೇರಿಗಳಲ್ಲಿ ರಾಜ್ಯ ಬಿಜೆಪಿ ಸರಕಾರ ಬೋರ್ಡ್ ಹಾಕಿಸುತ್ತಂತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮೊದಲು ನಿಮ್ಮ ಮತ್ತು ಸಚಿವರ ಕಚೇರಿಗಳು ಹಾಗೂ ಮನೆ ಮುಂದೆ ಈ ಬೋರ್ಡ್ ಹಾಕಿಸಿ.

"ಸರಕಾರಿ ಗುತ್ತಿಗೆದಾರರು ಲಂಚದ ಆರೋಪ ಮಾಡಿರುವುದು ಸಚಿವರ ಮೇಲೆ, ಅಧಿಕಾರಿಗಳ ಮೇಲೆ ಅಲ್ಲ. ಅಧಿಕಾರಿಗಳನ್ನು ತೋರಿಸಿ ಲಂಚ/ಕಮಿಷನ್ ಆರೋಪದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ. ಲಂಚಾವತಾರ ನಾಟಕದಲ್ಲಿ ಅಧಿಕಾರಗಳದ್ದು ಪೋಷಕ ಪಾತ್ರ. ಬಿಜೆಪಿ ಸರಕಾರದ ಇಲಾಖಾ ಸಚಿವರದ್ದೇ ಮುಖ್ಯ ಪಾತ್ರ.

"ಸಚಿವರಿಂದ ರಕ್ಷಣೆಗೆ ಅಭಯ ಇಲ್ಲದೆ ಯಾವ ಅಧಿಕಾರಿಯೂ ಲಂಚಕ್ಕೆ ಕೈಯೊಡ್ಡುವ ಸಾಹಸ ಮಾಡುವುದಿಲ್ಲ. ಸಚಿವರು ಪ್ರಾಮಾಣಿಕವಾಗಿದ್ದಾಗ ಸರಕಾರಿ ಅಧಿಕಾರಿಗಳು ಕೂಡ ಪ್ರಾಮಾಣಿಕವಾಗಿರುತ್ತಾರೆ. ಸಚಿವರು ಭ್ರಷ್ಟರಾದಾಗ 'ಯಥಾ ರಾಜಾ ತಥಾ ಪ್ರಜಾ' ಅಷ್ಟೇ.

"ಸನ್ಮಾನ್ಯ ಮುಖ್ಯಮಂತ್ರಿ ಅವರೇ, ಈ ಬೋರ್ಡ್ ಬರೆಸಿ ಹಾಕುವ ನಾಟಕಗಳನ್ನೆಲ್ಲಾ ನಿಲ್ಲಿಸಿ. ಮೊದಲು 40% ಕಮಿಷನ್ ಆರೋಪವೂ ಸೇರಿದಂತೆ ಸಚಿವರುಗಳ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಹೊರಿಸಿ.

"ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಸರಕಾರಿ ಕಚೇರಿಗಳಲ್ಲಿ 'ಲಂಚ ಕೊಡಬೇಕಾಗಿಲ್ಲ' ಎಂಬ ಬೋರ್ಡ್ ಅಳವಡಿಸುವ ಮೊದಲು ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ. ನೊಂದ ಜನರು ದೂರು ಕೊಟ್ಟರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ" ಎಂದು ಸಿದ್ದರಾಮಯ್ಯ ತಮ್ಮ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಭ್ರಷ್ಟಾಚಾರ ಮಾಡದ ಕಾಂಗ್ರೆಸ್ಸಿಗರು ಇದ್ದಾರಾ?

ಇದೇ ವೇಳೆ, ಬಿಜೆಪಿ ನಾಯಕರೂ ಕೂಡ ಕಾಂಗ್ರೆಸ್ ಪಕ್ಷದ ವಿರುದ್ಧ ಭ್ರಷ್ಟಾಚಾರ ವಿಚಾರದಲ್ಲಿ ಪ್ರತಿದಾಳಿ ಮುಂದುವರಿಸಿದೆ. ತುಮಕೂರಿನಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, "ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯನ್ನು ಈ ನಾಡಿನ ಜನರು ನಂಬಲ್ಲ. ಎಷ್ಟೇ ಸುಳ್ಳು ಹೇಳಿದರೂ ಕಾಂಗ್ರೆಸ್‌ನವರು ಯಾರನ್ನೂ ನಂಬಿಸಲು ಆಗಲ್ಲ" ಎಂದು ಕುಟುಕಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ 65 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು. ಡಿಕೆ ಶಿವಕುಮಾರ್ ಭ್ರಷ್ಟಾಚಾರ ಆರೋಪದಿಂದ ಜೈಲಿಗೆ ಹೋಗಿ ಹೊರಬಂದಿದ್ಧಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ ಸಚಿವ ಆರ್. ಅಶೋಕ್, "ಭ್ರಷ್ಟಾಚಾರ ಮಾಡದ ಕಾಂಗ್ರೆಸ್ ನಾಯಕರು ಯಾರಾದರೂ ಇದ್ದರೆ ಅಂಥವರು ಬೇಕಾದರೆ ಪೇಸಿಎಂ ಪೋಸ್ಟರ್ ಅಂಟಿಸಲಿ" ಎಂದು ಸವಾಲು ಹಾಕಿದ್ದಾರೆ.

65 ವರ್ಷಗಳ ಕಾಲ ಕಾಂಗ್ರೆಸ್ಸಿಗರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಅವರು ಅದ್ಯಾವ ಮುಖ ಇಟ್ಟುಕೊಂಡು ಭ್ರಷ್ಟಾಚಾರ, ಪೇಸಿಎಂ ಬಗ್ಗೆ ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಕಂದಾಯ ಸಚಿವರು ಕುಟುಕಿದ್ದಾರೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+