9 ಆನೆ ಕೊಡಿ, ಆಂಧ್ರ ಪದೇಶದಿಂದ ಕರ್ನಾಟಕಕ್ಕೆ ಬೇಡಿಕೆ!
ಬೆಂಗಳೂರು, ಜೂನ್ 10: ಆಂಧ್ರ ಪ್ರದೇಶದ ಅರಣ್ಯ ಇಲಾಖೆ ತರಬೇತಿ ಪಡೆದ 9 ಆನೆಗಳನ್ನು ನೀಡುವಂತೆ ಕರ್ನಾಟಕದ ಅರಣ್ಯ ಇಲಾಖೆಗೆ ಮನವಿ ಸಲ್ಲಿಕೆ ಮಾಡಿದೆ. ಆದರೆ ಸರ್ಕಾರ ಇನ್ನೂ ಆನೆಗಳನ್ನು ನೀಡುವ ಕುರಿತಾಗಿ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.
ಆಂಧ್ರ ಪ್ರದೇಶ ತರಬೇತಿ ಪಡೆದ ಆನೆಗಳಿಗೆ ಬೇಡಿಕೆ ಇಟ್ಟಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ರಾಜ್ಯದ ಆನೆ ಶಿಬಿರಗಳಲ್ಲಿರುವ ತರಬೇತಿ ಪಡೆದ ಆನೆಗಳ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ.

ತರಬೇತಿ ಪಡೆದ ಕುಮ್ಕಿ ಆನೆಗಳನ್ನು ಕಾಡು ಆನೆಗಳನ್ನು ಬಲೆಗೆ ಬೀಳಿಸಲು, ಹುಲಿ ಹಿಡಿಯುವ ಕಾರ್ಯಾಚರಣೆಗಳಲ್ಲಿ, ಕೆಲವೊಮ್ಮೆ ಗಾಯಗೊಂಡ ಅಥವಾ ಸಿಕ್ಕಿಬಿದ್ದ ಕಾಡು ಆನೆಯನ್ನು ಬಿಡಿಸುವ ಕಾರ್ಯಾಚರಣೆಯಲ್ಲಿ ಬಳಕೆ ಮಾಡಲಾಗುತ್ತದೆ.
ಹೋರಾಟಗಾರರ ವಿರೋಧ: ಆಂಧ್ರ ಪ್ರದೇಶಕ್ಕೆ ತರಬೇತಿ ಪಡೆದ ಕುಮ್ಕಿ ಆನೆಗಳನ್ನು ನೀಡುವುದಕ್ಕೆ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದಸರಾ ಆನೆ ಅರ್ಜುನನ ಸಾವಿನ ಬಳಿಕ ರಾಜ್ಯದಲ್ಲಿ ತರಬೇತಿ ಪಡೆದ ಆನೆಗಳನ್ನು ಬೇರೆ ರಾಜ್ಯಕ್ಕೆ ನೀಡುವುದು ಬೇಡ ಎಂದು ಹೇಳುತ್ತಿದ್ದಾರೆ.
ಅರಣ್ಯ, ವನ್ಯಜೀವಿಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಲ್ಖಾಡೆ ಮಾತನಾಡಿ, "ಕೆಲವು ತಿಂಗಳ ಹಿಂದೆ ಆಂಧ್ರ ಪ್ರದೇಶದಿಂದ ಮನವಿ ಬಂದಿದೆ. ಇದುವರೆಗೂ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ. ವಿವಿಧ ಆನೆ ಶಿಬಿರಗಳ ಸಿಬ್ಬಂದಿಗೆ ಆನೆಗಳನ್ನು ಗುರುತಿಸಿ ಪಟ್ಟಿ ಮಾಡುವಂತೆ ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.
"ಪ್ರತಿಯೊಂದು ಆನೆ ಶಿಬಿರದಲ್ಲಿಯೂ ಬಳಕೆ ಮಾಡದ 2-3 ಆನೆಗಳಿವೆ. ಇಂತಹ ಬಳಕೆ ಮಾಡದ ಆನೆಗಳ ಪಟ್ಟಿಯನ್ನು ತಯಾರು ಮಾಡಲಾಗುತ್ತದೆ. ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಆನೆ ಶಿಬಿರಗಳಲ್ಲಿ ದಸರಾದಲ್ಲಿ ಭಾಗವಹಿಸಲು ತರಬೇತಿ ಪಡೆದ, ಕುಮ್ಕಿ ಆನೆಗಳಿಲ್ಲ. ಆಂಧ್ರ ಪ್ರದೇಶದ ಅರಣ್ಯ ಇಲಾಖೆ ತರಬೇತಿ ಪಡೆದ ಆನೆಗಳನ್ನು ಕುಮ್ಕಿ ಕಾರ್ಯಾಚರಣೆಗೆ ಬಳಕೆ ಮಾಡಲು ಕೇಳುತ್ತಿಲ್ಲ. ಅವರು ಗಸ್ತು ತಿರುಗಲು ಆನೆಗಳಿಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದರು.
ಪ್ರತಿ 5 ವರ್ಷಗಳಿಗೊಮ್ಮೆ ಆನೆಗಳ ಗಣತಿಯನ್ನು ನಡೆಸಲಾಗುತ್ತದೆ. ಆದರೆ ಈ ವರ್ಷದ ಮೇ ತಿಂಗಳಿನಲ್ಲಿ ಮೂರು ದಿನಗಳ ಕಾಲ ಮೊದಲ ಬಾರಿಗೆ ಕರ್ನಾಟಕದ ಜೊತೆ ಗಡಿ ಹಂಚಿಕೊಂಡಿರುವ 4 ರಾಜ್ಯಗಳಲ್ಲಿ ಆನೆಗಳ ವಿಶೇಷ ಗಣತಿಯನ್ನು ನಡೆಸಲಾಗಿತ್ತು.
ಮೇ 23 ರಿಂದ 25ರ ತನಕ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಗಡಿಗಳಲ್ಲಿ ವಿಶೇಷವಾಗಿ ಆನೆಗಳ ಗಣತಿಯನ್ನು ನಡೆಸಲಾಗಿತ್ತು. ಆನೆಗಳ ಹಾವಳಿ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಯೋಜನೆ ತಯಾರು ಮಾಡಲು ಅಂತರರಾಜ್ಯ ಗಡಿಯಲ್ಲಿಈ ಗಣತಿ ನಡೆದಿತ್ತು.
ದಕ್ಷಿಣ ಭಾರತದಲ್ಲಿ ಹೆಚ್ಚು ಆನೆಗಳಿರುವ ರಾಜ್ಯ ಕರ್ನಾಟಕ. 2022-23ರಲ್ಲಿ ನಡೆದ ಆನೆಗಳ ಗಣತಿ ಬಳಿಕ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು. ರಾಜ್ಯದಲ್ಲಿ 6,395 ಆನೆಗಳಿದ್ದವು. 2017ರ ಬಳಿಕ ರಾಜ್ಯದಲ್ಲಿ ಆನೆಗಳ ಸಂಖ್ಯೆ 346 ಏರಿಕೆಯಾಗಿದೆ ಎಂದು 2023ರ ಆಗಸ್ಟ್‌ನಲ್ಲಿ ಪ್ರಕಟವಾದ ಏಷ್ಯಾನ್ ಎಲಿಫೆಂಟ್ ಪಾಪ್ಯುಲೇಷನ್ ಮಧ್ಯಂತರ ಸಮೀಕ್ಷಾ ವರದಿ ತಿಳಿಸಿತ್ತು.












Click it and Unblock the Notifications