ಅನಂತ್ ಕುಮಾರ್ ನಿಧನ : ಕರ್ನಾಟಕ ಬಿಜೆಪಿಗೆ ದೊಡ್ಡ ನಷ್ಟ
ಬೆಂಗಳೂರು, ನವೆಂಬರ್ 12 : ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನ ಬಿಜೆಪಿಗೆ ತುಂಬಲಾರದ ನಷ್ಟ ತಂದಿದೆ. ಅದರಲ್ಲೂ ಕರ್ನಾಟಕ ಬಿಜೆಪಿಗೆ ಅವರ ಸಲಹೆ, ಸೂಚನೆ, ಮಾರ್ಗದರ್ಶನದ ಅಗತ್ಯವಿತ್ತು. ಆದ್ದರಿಂದ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಿದೆ.
ಸೋಮವಾರ ಮುಂಜಾನೆ ಅನಂತ್ ಕುಮಾರ್ (59) ಅವರು ವಿಧಿವಶರಾದರು. ಪಕ್ಷಾತೀತವಾಗಿ ವಿವಿಧ ನಾಯಕರು ಅವರ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿರು.
ಕರ್ನಾಟಕ ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಅನಂತ್ ಕುಮಾರ್ ಅವರು ಒಬ್ಬರಾಗಿದ್ದರು. ಕರ್ನಾಟಕ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಅವರು ಸಾಕಷ್ಟು ಪ್ರಭಾವ ಹೊಂದಿದ್ದರು. ಬಿಜೆಪಿ ಸಂಸದೀಯ ಮಂಡಳಿಯಲ್ಲಿಯೂ ಇದ್ದರು.

2003ರಲ್ಲಿ ಅನಂತ್ ಕುಮಾರ್ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿದ್ದರು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಪಡೆದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅನಂತ್ ಕುಮಾರ್ ಅವರ ಸಂಘಟನಾ ಕೌಶಲ್ಯ, ಪ್ರಚಾರದ ಪ್ರಭಾವದ ಅರಿವು ಎಲ್ಲಾ ನಾಯಕರಿಗೂ ಇತ್ತು.
ಪ್ರಸ್ತುತ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ (75) ಅವರು ವಯಸ್ಸಿನ ಕಾರಣದಿಂದಾಗಿ ಪಕ್ಷದ ಮೇಲೆ ಮೊದಲಿನಷ್ಟು ಹಿಡಿತ ಹೊಂದಿಲ್ಲ. 2018ರ ವಿಧಾನಸಭೆ ಚುನಾವಣೆ ಬಳಿಕ ನಡೆದ ವಿದ್ಯಮಾನಗಳು ಇದಕ್ಕೆ ಸಾಕ್ಷಿಯಾಗಿವೆ.
ಅನಂತ್ ಕುಮಾರ್ ಅವರಿಗೆ ಇನ್ನೂ ವಯಸ್ಸು ಇತ್ತು. ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಇನ್ನಷ್ಟು ಬೆಳೆಯುವ ಅವಕಾಶವಿತ್ತು. ರಾಜ್ಯದ ಯುವ ನಾಯಕರಿಗೆ ಅವರ ಮಾರ್ಗದರ್ಶನ ಅಗತ್ಯವಿತ್ತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು.
ಅನಂತ್ ಕುಮಾರ್ ಅವರು 22 ವರ್ಷದಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದರು. ಈಗ ಬಿಜೆಪಿಯ ಮುಂದೆ ಲೋಕಸಭಾ ಕ್ಷೇತ್ರಕ್ಕೂ ಹೊಸ ಅಭ್ಯರ್ಥಿಯನ್ನು ಹುಡುಕುವ ಸವಾಲು ಇದೆ.












Click it and Unblock the Notifications