Amit Shah: ಮೋದಿಗೆ ನೀವು ಹೀಗಳೆದಷ್ಟೂ ಕಮಲ ಮತ್ತಷ್ಟು ಅರಳುತ್ತೆ: ಖರ್ಗೆ ಗೆ ತಿರುಗೇಟು ಕೊಟ್ಟ ಅಮಿತ್ ಶಾ
ಹುಬ್ಬಳ್ಳಿ,ಏಪ್ರಿಲ್28: ರಾಜ್ಯ ವಿಧಾನ ಸಭಾ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದೆ. ಚುನಾವಣಾ ಪ್ರಚಾರದ ಬರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕೊಟ್ಟ ಹೇಳಿಕೆಗಳು ಚುನಾವಣಾ ಅಸ್ತ್ರವಾಗಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿಷ ಸರ್ಪ ಎಂಬ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ವಿರುದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಮಿತ್ ಶಾ ಪ್ರಚಾರ ನಡೆಸಿದ ಬಳಿಕ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಸ್ತಾರೆ. ಇಂತಹ ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಬೇಡಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಸೋನಿಯಾ ಗಾಂಧಿ ಮೌತ್ ಕಾ ಸೌದಾಗರ್ ಅಂತಾರೆ, ಮೋದಿಗೆ ನೀವು ಹೀಗಳೆದಷ್ಟೂ ಕಮಲ ಮತ್ತಷ್ಟು ಅರಳುತ್ತದೆ. ಮೋದಿಗೆ ಧಮ್ಕಿ ಕೊಟ್ಟಷ್ಟು ಅವರ ಪರ ಅಲೆ ಏಳಲಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಡಂಬಲ್ ಇಂಜಿನ್ ಸರ್ಕಾರವನ್ನ ಗೆಲ್ಲಿಸಿ, ಕರ್ನಾಟಕದ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ. ರಾಹುಲ್ ಬಾಬಾ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವಿದೆ. ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವಿದೆ. ಕಾಂಗ್ರೆಸ್ ರಿವರ್ಸ್ ಗೇರ್ ಸರ್ಕಾರ, ರಿವರ್ಸ್ ಗೇರ್ ಸರ್ಕಾರ ಬಯಸುತ್ತೀರಾ ಎಂದು ಜನರಿಗೆ ಪ್ರಶ್ನಿಸಿದ ಅಮಿತ್ ಶಾ, ಈ ರಿವರ್ಸ್ ಗೇರ್ ಸರ್ಕಾರದಿಂದ ರಾಜ್ಯ ಅಭಿವೃದ್ದಿ ಸಾಧ್ಯವಿಲ್ಲ, ಕರ್ನಾಟಕದ ಅಭಿವೃದ್ದಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಮತ್ತಷ್ಟು ಕುಂಠಿತಗೊಳ್ಳಲಿದೆ. ಕಾಂಗ್ರೆಸ್ ಪಕ್ಷದಿಂದ ರೈತರಿಗೆ ಯಾವಾಗಲೂ ಅನ್ಯಾಯವಾಗುತ್ತಲೇ ಇದೆ. ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದು ಇದೇ ಕಾಂಗ್ರೆಸ್ ಎಂಬುದನ್ನು ಮರೆಯಬೇಡಿ. ಇನ್ನೂ ರೈತರ ಮೇಲೆ ಲಾಠಿ, ಗುಂಡೇಟು ಹೊಡೆದ ಕಾಂಗ್ರೆಸ್ಗೆ ಮತ ಕೇಳುವ ನೈತಿಕತೆಯಿಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಕೇಂದ್ರ, ಕರ್ನಾಟಕ ಮತ್ತು ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮಹಾದಾಯಿ ವಿವಾದ ಬಗೆಹರಿಸಲಿಲ್ಲ. ಕಳಸಾ ಬಂಡೂರಿ ಯೋಜನೆ ಚಾಲನೆಗೆ ಮೋದಿ ಕಾರಣಕರ್ತರಾದರು. ಮೋದಿ ಒಂಬತ್ತು ವರ್ಷದಲ್ಲಿ ದೇಶದ ಮಾನ ಹೆಚ್ಚಿಸಿದ್ದಾರೆ, ಮೂಲಭೂತ ಸೌಕರ್ಯ ಹೆಚ್ಚಿಸಿದ್ದಾರೆ, ಗಡಿಯಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಇಡೀ ವಿಶ್ವದಲ್ಲಿ ಮೋದಿ ಬಗ್ಗೆ ಅಭಿಮಾನದ ಮಾತುಗಳು ವ್ಯಕ್ತವಾಗುತ್ತಿವೆ. ಇಂತಹ ಮಹಾನ್ ನಾಯಕನ ಬಗ್ಗೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೂ ಬಸವಣ್ಣನವರು ಸಮಾಜ ಸುಧಾರಣೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ನೀವು ನಿರ್ಣಯ ಮಾಡಿ. ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಸಾಧ್ಯ. ಮತ್ತೊಮ್ಮೆ ನೀವು ಡಬಲ್ ಇಂಜಿನ್ ಸರ್ಕಾರವನ್ನ ಗೆಲ್ಲಿಸಬೇಕು ಎಂದು ಅಮಿತ್ ಶಾ ಹೇಳಿದರು.
ಕಾಂಗ್ರೆಸ್ ಕವಿರುದ್ದ ವಾಗ್ಧಾಳಿ ನಡೆಸಿದ ಅಮಿತ್ ಶಾ ಅವರು, ಗರೀಬಿ ಹಠಾವೋ ಎಂದು ಕಾಂಗ್ರೆಸ್ನವರು ಕೇವಲ ಭಾಷಣದಲ್ಲಿ ಹೇಳುತ್ತಿದ್ದರು. ಬಡತನ ನಿರ್ಮೂಲನೆಗೆ ಕಾಂಗ್ರೆಸ್ ಯಾವುದೇ ಕ್ರಮಕೈಗೊಳ್ಳಲಿಲ್ಲ. ಬಿಜೆಪಿ ಸರ್ಕಾರ 4,10,000 ಮನೆಗಳನ್ನು ನಿರ್ಮಾಣ ಮಾಡಿದೆ ಎಂದು ತಿಳಿಸಿದರು.












Click it and Unblock the Notifications