ಆಳ್ವಾಸ್ ವಿಶ್ವ ನುಡಿಸಿರಿಗೆ ಅದ್ದೂರಿ ತೆರೆ
ಕೊನೆಗೂ ಮೂಡಬಿದಿರೆ ಇತಿಹಾಸ ಬರೆಯಿತು. ಸಾಹಿತಿಗಳ ಒಂದು ವಲಯದ ಅಪಸ್ವರದ ನಡುವೆಯೂ ಮೂಡಬಿದಿರೆಯಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಂಬ್ರಮದ ತೆರೆ ಕಂಡಿತು. ನಾಲ್ಕು ದಿನಗಳ ಕಾಲ ನಡೆದ ನುಡಿಸಿರಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಅಂದು-ಇಂದು- ಮುಂದು ಎಂಬ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಿತು.
ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡರಿಂದ ಉದ್ಘಾಟನೆಗೊಂಡ ಅಭೂತಪೂರ್ವ ಮೆರವಣಿಗೆಯಿಂದ ಆರಂಭಗೊಂಡ ಆಳ್ವಾಸ್ ನಡಿಸಿರಿ ವಿರಾಸತ್, ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ 11 ಮಂದಿ ಗಣ್ಯರಿಗೆ ಆಳ್ವಾಸ್ ವಿಶ್ವ ನುಡುಸಿರಿ 2013 ಪ್ರಶಸ್ತಿ ನೀಡುವುದರೊಮದಿಗೆ ಸಮಾಪನಗೊಂಡಿತು.
ಡಾ. ಎಚ್. ಎಸ್ ವೆಂಕಟೇಶಮೂರ್ತಿ, ಹಿರೇಮಗಳೂರು ಕಣ್ಣನ್, ಡಾ. ಡಿ.ಕೆ. ಚೌಟ, ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಬಿ.ಎಮ ಹೆಗ್ಡೆ, ಜಯಂತ ಕಾಯ್ಕಿಣಿ, ಫಕೀರ್ ಮೊಹಮ್ಮದ್ ಕಟ್ಪಾಡಿ, ಉಮಾ ಕುಲಕರ್ಣಿ, ಡಾ. ಕಮಲಾಹಂಪನಾ, ಕುಂಬ್ಳೆ ಸುಂದರ ರಾವ್, ಡಾ. ನಾ. ಮೊಗಸಾಲೆ ಮತ್ತು ಎರಡು ಸಂಘಟನೆಗಳಾದ ಮಂಗಳೂರಿನ ಬಾಸೆಲ್ ಮಿಶನ್ ಸಂಘಟನೆ ಮತ್ತು ಶಿವಮೊಗ್ಗ ಕರ್ನಾಟಕ ಸಂಘಕ್ಕೆ ಆಳ್ವಾಸ್ ನುಡಿಸಿರಿ 2013 ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕವಿ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮತನಾಡಿದ ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ, ಮೂಡಬಿದರೆಯನ್ನು ವಿಶ್ವಪಾರಂಪರಿಕ ತಾಣವಾವಿಗಿಸುವ ಚಿಂತನೆಯನ್ನು ಸಭೆಯ ಮುಂದಿಟ್ಟರು. ಒಟ್ಟಾರೆ, ವಿಶ್ವ ಆಳ್ವಾಸ್ ನುಡಿಸಿರಿ ಘಟಾನುಗಟಿ ಸಾಹಿತಿಗಳಿಂದ ಮೆಚ್ಚುಗೆಗೆ ಪಾತ್ರವಾಯಿತು.
ನುಡಿಸಿರಿಯ ಕುರಿತಂತೆ ಅಪಸ್ವರ ಎತ್ತಿದವರಿಗೂ ಉತ್ತರ ಕೊಡುವುದಕ್ಕೆ ಸಮ್ಮೆಳನದ ರೂವಾರಿ ಡಾ. ಮೋಹನ ಆಳ್ವ ಮರೆಯಲಿಲ್ಲ.ದಯವಿಟ್ಟು ನುಡಿಸಿರಿಗೆ ಬಂಡಾಯ, ಪರ್ಯಾಯದ ಹಣೆಪಟ್ಟಿ ಬೇಡ...ನುಡಿಸಿರಿಗೆ ಬಂದು ನೋಡಿ...ಹೊರಗೆ ನಿಂತು ಮಾತನಾಡಬೇಡಿ ಎಂದು ತಿರುಗೇಟು ನಿಡಿದರು.
ಸಾಹಿತ್ಯಸಮ್ಮೇಳನದ ಜೊತೆಗೆ ಜನಪದಸಿರಿ, ವಿದ್ಯಾರ್ಥಿಸಿರಿ ಜೊತೆಗೆ 34ನೇ ರಾಜ್ಯಮಟ್ಟದ ಕೃಷಿ ಸಮ್ಮೇಳನ ನಡೆಸುವ ಮೂಲಕ ನಿಜ ಅರ್ಥದಲ್ಲಿ ವಿಶ್ವ ಸಮ್ಮೇಳನ ಎನಿಸಿಕೊಂಡಿತು. ಅಮೇರಿಕಾ ಮತ್ತು ಕೊಲ್ಲಿ ರಾಷ್ಟ್ರಗಳ ಕನ್ನಡ ಸಂಘಟನೆಗಳ ಪ್ರತಿನಿಧಿಗಳು ವಿಶ್ವ ಆಳ್ವಾಸ್ ನುಡಿಸಿರಿಯಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಅರ್ಥಪೂರ್ಣಗೊಳಿಸಿದರು. ಸುಮಾರು 5 ಲಕ್ಷ ಮಂದಿ ಈ ಸಮ್ಮೇಳನ ಮತ್ತು ಸಾಂಸ್ಕೃತಿಕ ಸಂಭ್ರಮಕ್ಕೆ ಸಾಕ್ಷಿಯಾದರು.
ವಿರಾಸತ್ ವೈಭವ: ನುಡಿಸಿರಿಯ ಜೊತೆಗೆ ವಿರಾಸತ್ ನಡೆದದ್ದು ಇದೇ ಮೊದಲು.ಹಾಗಾಗಿ ಸಾಹಿತ್ಯದ ರುಚಿ ಉಣ್ಣ ಬಂದವರಿಗೆ ದೇಶಾದ್ಯಂತದಿಂದ ಬಂದ ಕಲಾ ತಂಡಗಳ ಪ್ರದರ್ಶನ ಕಣ್ತುಂಬಿಕೊಳ್ಳುವಂತಾಯಿತು. ವಿದ್ಯಾಗಿರಿಯ ಬೆಟ್ಟದ ಮೇಲೆ ಹಾಕಲಾಗಿದ್ದ ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ಚತ್ತಿಸ್ ಗಡದ ಪಾಂಡ್ವಾನಿ ಸಂಗೀತ ಕಲಾವಿದೆ ಪದ್ಮಭೂಷಣ ಡಾ.ತೀಜನ್ ಬಾಯಿಯವರಿಗೆ ಆಳ್ವಾಸ್ ವಿರಾಸತ್ ಪ್ರಸಸ್ತಿ ಪ್ರದಾನ ಮಾಡಲಾಯಿತು. ಪ್ರತೀದಿನ 9 ಸಮಾನಾಂತರ ವೇದಿಕೆಗಳಲ್ಲಿ ಸುಮಾರು 90 ಸಾಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೃಷಿಸಿರಿ: ಇಡೀ ವಿಶ್ವ ನುಡಿಸಿರಿ ವಿರಾಸತ್‍ನಲ್ಲಿ ಪ್ರಮುಖವಾಗಿ ಗಮನ ಸೆಳೆದದ್ದು , 34ನೇ ರಾಜ್ಯಮಟ್ಟದ ಕೃಷಿ ಮೇಳ . ಪದ್ಮಭೂಷಣ ವರ್ಗೀಸ್ ಕುರಿಯನ್ ವೇದಿಕೆಯಲ್ಲಿ ಮೂರು ದಿನಗಳ ಕಾಲ ಅರ್ಥಪೂರ್ಣ, ವಿದ್ವತ್ಪೂರ್ಣ ವಿಚಾರಗೋಷ್ಠಿ ಮತ್ತು ವಸ್ತುಪ್ರದರ್ಶನ ಕೃಷಿ ಆಸಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಉಳಿದಂತೆ, ಮೊದಲೆರಡು ದಿನ ಬೇಡಿಕೆಯಿಲ್ಲದೆ, ನಿರಾಶರಾಗಿದ್ದ ಪುಸ್ತಕ ಮಾರಾಟಗಾರರು ಕೊನೇಯ ಎರಡು ದಿನಗಳಲ್ಲಿ ಗ್ರಾಹಕರ ಪ್ರತಿಕ್ರಿಯೆ ಕಂಡು ನಿಟ್ಟುಸಿರು ಬಿಡುವಂತಾಯಿತು. ಒಟ್ಟಾರೆ, ಮೂಡಬಿದಿರೆಯಲ್ಲಿ ನಾಲ್ಕು ದಿನಗಳ ಕಲ ನಡೆದ ವಿಶ್ವ ನುಡಿಸಿರಿ ವಿರಾಸತ್ ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಇತಿಹಾಸ ಬರೆಯಿತು. ಅಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಅನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ, ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರೆ, ಡಾ.ಬಿ.ಎ.ವಿವೇಕ ರೈ ಅಧ್ಯಕ್ಷತೆ ವಸಿದ್ದರು ಅಂದ ಹಾಗೆ ಇಡೀ ಸಮ್ಮೆಳನ ಸರಕಾರದ ಕಿಂಚಿತ್ತೂ ಆರ್ಥಿಕ ನೆರವಿಲ್ಲದೆ ನಡೆಯಿತು ಎಂಬುದು ವಿಶೇಷ.













Click it and Unblock the Notifications