ಸಿಎಂ ಜೊತೆಗೆ ಶ್ಯಾಡೋ ಸಿಎಂ, ಸೂಪರ್ ಸಿಎಂ ಸಕ್ರಿಯರಾಗಿದ್ದಾರೆ: ಸಿ ಟಿ ರವಿ
ಬೆಂಗಳೂರು, ಮಾರ್ಚ್ 20 : ಮುಖ್ಯಮಂತ್ರಿಗಳ ಜೊತೆಗೆ ಶ್ಯಾಡೋ ಮುಖ್ಯಮಂತ್ರಿ, ಸೂಪರ್ ಸಿಎಂ- ಇವರೆಲ್ಲರೂ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿ ದುರ್ಬಲವಾಗಿದ್ದಾರೆ ಎಂದೇ ಇದರ ಅರ್ಥ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ
ಮುಖ್ಯಮಂತ್ರಿಗಳು ತಮ್ಮ ಟ್ವೀಟ್‍ನಲ್ಲಿ 'ನಾನೇ ಸ್ಟ್ರಾಂಗ್ ಸಿಎಂ; ವೀಕ್ ಪಿಎಂ' ಎಂದಿದ್ದಾರೆ. ಯಾರು ತನ್ನನ್ನು ತಾನು ಸ್ಟ್ರಾಂಗ್ ಎನ್ನುವವರು ವೀಕ್ ಆಗಿರುತ್ತಾರೆ. ಮೋದಿ ಅವರು ಬಲಿಷ್ಠ ನಾಯಕ ಎಂದು ಕೇವಲ ನಮ್ಮ ಪಕ್ಷ, ನಮ್ಮ ನಾಯಕರು ಮತ್ತು ಕಾರ್ಯಕರ್ತರು ಹೇಳುತ್ತಿಲ್ಲ. ದೇಶದ ಜನತೆ ಮಾತ್ರವಲ್ಲದೆ ವಿಶ್ವದ ಅಗ್ರಗಣ್ಯ ನಾಯಕರು ಮೋದಿಯವರನ್ನು ಅತ್ಯಂತ ಬಲಿಷ್ಠ ನಾಯಕರು ಎನ್ನುತ್ತಾರೆ ಎಂದು ಸಿ.ಟಿ.ರವಿ ಹೇಳಿದರು.

ನಾನೇ ಸ್ಟ್ರಾಂಗ್ ಎನ್ನುವ ಸಿದ್ದರಾಮಯ್ಯನವರೇ ನಿಮ್ಮ ಪರಿಸ್ಥಿತಿ ಏನಿದೆ. 5 ವರ್ಷ ಸಿಎಂ ಆಗಿರುವ ಖಾತರಿಯೇ ನಿಮಗಿಲ್ಲ. ನಾನೇ 5 ವರ್ಷ ಸಿಎಂ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಎಂದು ಹೇಳಿಸಿಕೊಳ್ಳುವ ಸ್ಥಿತಿ ಅವರದು. ದುರ್ಬಲ ಆಡಳಿತ ಸಿದ್ದರಾಮಯ್ಯರದು. ಕಳೆದೊಂದು ವರ್ಷವನ್ನು ಗಮನಿಸಿದರೆ ಆಡಳಿತದ ಹಿಡಿತವೇ ಅವರಿಗೆ ಸಿಕ್ಕಿಲ್ಲ ಎಂದು ಅರಿವಾಗುತ್ತದೆ ಟೀಕಿಸಿದರು. ನೀವೇ ನೇಮಕ ಮಾಡಿಕೊಂಡ ರಾಜಕೀಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಸಲಹೆಗಾರರು 'ಅಭಿವೃದ್ಧಿಗೆ ಬಿಡಿಗಾಸೂ ಕೊಡುತ್ತಿಲ್ಲ' ಎಂದು ನಿಮ್ಮ ಗುಣಗಾನ ಮಾಡಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು.
ಹಿರಿಯ ಸಚಿವರು ಮತ್ತು ಶಾಸಕರೇ ನಿಮ್ಮ ಸ್ಟ್ರಾಂಗ್ ಆಡಳಿತಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಿಮ್ಮ ಸರಕಾರದ ನೀತಿಯ ಪರಿಣಾಮವಾಗಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳಾ ದೌರ್ಜನ್ಯ ಮಾತ್ರವಲ್ಲ ಬೆತ್ತಲೆ ಮೆರವಣಿಗೆ ನಡೆಯುತ್ತಿದೆ. ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಆಗುತ್ತದೆ. ಹನುಮಾನ್ ಚಾಲೀಸ ಹಾಕುವುದು ಕೂಡ ಗಲಭೆಗೆ ಕಾರಣವಾಗುವಷ್ಟು ಆಡಳಿತ ಹದಗೆಟ್ಟಿದೆ ಎಂದು ಟೀಕಿಸಿದರು.
ಅಮೆರಿಕದ ಅಧ್ಯಕ್ಷರು ಮೋದಿಯವರು ವಿಶ್ವದ ಪ್ರಖ್ಯಾತ ನಾಯಕ ಎನ್ನುತ್ತಾರೆ. ಇಸ್ರೇಲ್ ಪ್ರಧಾನಿ ಕೂಡ ಮೋದಿಜೀ ಅವರನ್ನು ಅತ್ಯಂತ ಜನಪ್ರಿಯ ನಾಯಕ ಎಂದಿದ್ದಾರೆ. ಜಗತ್ತಿನ 11 ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಮೋದಿಯವರಿಗೆ ನೀಡಿವೆ ಎಂದು ಅವರು ವಿವರಿಸಿದರು. ಅತಿ ಹೆಚ್ಚು ವಿದೇಶದ ನಾಗರಿಕ ಪ್ರಶಸ್ತಿಯನ್ನು ಮೋದಿಯವರು ಪಡೆದುಕೊಂಡಿದ್ದಾರೆ ಎಂದರು.

ಉಕ್ರೇನ್- ರಷ್ಯಾ ಯುದ್ಧದ ಸಮಯದಲ್ಲಿ ಪ್ರಧಾನಿ ಮೋದಿಯವರ ಮಧ್ಯಪ್ರವೇಶದಿಂದ ಪರಮಾಣು ಬಾಂಬ್ ಪ್ರಯೋಗ ತಪ್ಪಿದೆ ಎಂದು ಅಮೇರಿಕವೇ ಹೇಳಿದೆ. ಕತಾರ್‍ನಲ್ಲಿ ಮರಣದಂಡನೆಗೆ ಗುರಿ ಆಗಿದ್ದಂಥ ನೌಕಾಸೇನೆಯ ನಿವೃತ್ತ ಅಧಿಕಾರಿಗಳನ್ನು ಮರಣದಂಡನೆಯಿಂದ ಬಿಡಿಸಿ ಈಚೆಗೆ ಸುರಕ್ಷಿತವಾಗಿ ಕರೆದುಕೊಂಡು ಬಂದವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದು ತಿಳಿಸಿದರು. ಉಕ್ರೇನ್- ರಷ್ಯಾ ಯುದ್ಧದ ಸಂದರ್ಭದಲ್ಲಿ 48 ಗಂಟೆಗಳ ಕಾಲ ಯುದ್ಧ ನಿಲುಗಡೆ ಮಾಡಿ, 23 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ಸಿರಿಯ, ಇಸ್ರೇಲ್, ಸುಡಾನ್, ಅಫಘಾನಿಸ್ತಾನ ಇತ್ಯಾದಿ ಬೇರೆಬೇರೆ ರಾಷ್ಟ್ರಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. 2014ಕ್ಕೆ ಮುಂಚೆ ಗ್ಲೋಬಲ್ ರೇಟಿಂಗ್ ಕಂಪನಿಗಳು ಭಾರತವನ್ನು ವಿಶ್ವದ ದುರ್ಬಲ ಆರ್ಥಿಕತೆ ಇರುವ 5 ರಾಷ್ಟ್ರಗಳಲ್ಲಿ ಒಂದು ಎಂದು ರೇಟಿಂಗ್ ನೀಡಿದ್ದವು. ದುರ್ಬಲ ಆರ್ಥಿಕತೆಯಿಂದ ಬಲಿಷ್ಠ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ಭಾರತ ಏರಿದೆ ಎಂದು ಹೇಳಿದರು. ಒಂದೆರಡು ವರ್ಷಗಳಲ್ಲಿ ನಾವು 3ನೇ ಸ್ಥಾನಕ್ಕೆ ದಾಪುಗಾಲಿಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2014ರಲ್ಲಿ 322 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಇದ್ದರೆ, ಇವತ್ತು 636 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಇದೆ. ರಫ್ತಿನಲ್ಲಿ ನಾವು ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದಿದ್ದೇವೆ. 776 ಬಿಲಿಯನ್ ಡಾಲರ್ ಮೌಲ್ಯದ ಸ್ವತ್ತುಗಳನ್ನು ಭಾರತ ರಫ್ತು ಮಾಡಿದೆ. ಒಂದು ಕಾಲದಲ್ಲಿ ಶೇ 98 ಮೊಬೈಲ್‍ಗಳ ಆಮದಾಗುತ್ತಿದ್ದರೆ, ಸ್ಟ್ರಾಂಗ್ ಪಿಎಂನ ಮೇಕ್ ಇನ್ ಇಂಡಿಯ ಕರೆಯ ಮೂಲಕ ಇವತ್ತು ಶೇ 98 ಮೊಬೈಲ್‍ಗಳು ಭಾರತದಲ್ಲೇ ತಯಾರಾಗುತ್ತಿವೆ ಎಂದು ಅಂಕಿಅಂಶಗಳನ್ನು ನೀಡಿದರು.
ಕೋವಿಡ್ ಸಂಬಂಧ 2 ವ್ಯಾಕ್ಸಿನ್ ಗಳನ್ನು ಭಾರತದಲ್ಲೇ ತಯಾರಿಸಿ 140 ಕೋಟಿ ಜನರಿಗೆ ಉಚಿತವಾಗಿ ವಿತರಣೆ ಮಾಡಿ, 100ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಮೈತ್ರಿಯ ಮೂಲಕ ರಫ್ತು ಮಾಡಿದವರು. ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ. ಭಯೋತ್ಪಾದನೆಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟಿದ್ದೇವೆ ಎಂದು ತಿಳಿಸಿದರು. ಭಾರತವೂ ಸುರಕ್ಷಿತ- ಭಾರತೀಯರೂ ಸುರಕ್ಷಿತವಾಗಿದ್ದಾರೆ. ಭಾರತದ ಆರ್ಥಿಕತೆಯೂ ವೇಗಗತಿಯಲ್ಲಿ ಬೆಳೆಯುತ್ತಿದೆ. ಬಡವರಿಗೆ ಬಲ ತುಂಬುತ್ತಿದ್ದಾರೆ. ಹೀಗೆ ಮೋದಿಯವರ ಸಾಧನೆಯನ್ನು ಗುಣಗಾನ ಮಾಡಲು ಇಂಥ ನೂರಾರು ಉದಾಹರಣೆಗಳನ್ನು ತೆಗೆದುಕೊಳ್ಳಬಹುದು ಎಂದರು.












Click it and Unblock the Notifications