ಕೊನೆ ಸಂಪುಟ ಸಭೆಯಲ್ಲ, ಸಚಿವರಿಗೆ ಧೈರ್ಯ ತುಂಬಿದ ಕುಮಾರಸ್ವಾಮಿ!
ಬೆಂಗಳೂರು, ಜುಲೈ 11 : 'ಇದು ಕೊನೆ ಸಚಿವ ಸಂಪುಟ ಸಭೆಯಲ್ಲ. ಸರ್ಕಾರ ಭದ್ರವಾಗಲಿದ್ದು, ಇನ್ನೂ ಬಹಳಷ್ಟು ಸಚಿವ ಸಂಪುಟ ಸಭೆಯನ್ನು ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಚಿವರಿಗೆ ಅಭಯ ನೀಡಿದರು.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸರ್ಕಾರ ಅಲ್ಪ ಮತಕ್ಕೆ ಕುಸಿದಿರುವುದರಿಂದ ಈ ಸಚಿವ ಸಂಪುಟ ಸಭೆ ಬಹಳ ಕುತೂಹಲಕ್ಕೆ ಕಾರಣವಾಗಿತ್ತು.
'ಬಹಳಷ್ಟು ಜನರು ಇದೇ ಕೊನೆಯ ಕ್ಯಾಬಿನೆಟ್ ಸಭೆ ಎಂದುಕೊಂಡಿದ್ದೀರಿ ಅಲ್ಲವೇ?' ಎಂದು ನಗುತ್ತಲೇ ಪ್ರಶ್ನೆ ಮಾಡಿದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, 'ಸರ್ಕಾರ ಸುಭದ್ರವಾಗಿ ಉಳಿಯಲಿದೆ. ಇನ್ನಷ್ಟು ಸಂಪುಟ ಸಭೆಗಳನ್ನು ಮಾಡುತ್ತೇವೆ' ಎಂದು ಹೇಳಿದರು.

'ಸ್ಪೀಕರ್ ಮತ್ತು ಕಾನೂನಿನಿಂದಾಗಿ ಸರ್ಕಾರಕ್ಕೆ ದೊಡ್ಡ ರಿಲೀಫ್ ಸಿಗಲಿದೆ. ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಅಧಿವೇಶನ ನಡೆಯಲಿದೆ. ನೀವೆಲ್ಲರೂ ಒಗ್ಗಟ್ಟಾಗಿರಿ. ಬಿಜೆಪಿಯವರು ಏನು ಮಾಡಲಿದ್ದಾರೆ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ' ಎಂದು ಕುಮಾರಸ್ವಾಮಿ ಸಚಿವರಿಗೆ ಕರೆ ನೀಡಿದರು.
'ಸಚಿವರು ತಮ್ಮ ವ್ಯಾಪ್ತಿಯಲ್ಲಿರುವ ಶಾಸಕರ ಜೊತೆ ಸಂಪರ್ಕದಲ್ಲಿರಿ. ಸರ್ಕಾರ ಹೇಗೆ ಉಳಿಯಲಿದೆ ಎಂಬ ಚಿಂತೆ ನಿಮಗೆ ಬೇಡ. ಅತೃಪ್ತರ ಓಲೈಕೆಯನ್ನು ಎರಡೂ ಪಕ್ಷದವರು ಮಾಡುವುದು ಬೇಡ' ಎಂದು ಕುಮಾರಸ್ವಾಮಿ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಹೊರಬಂದ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ, ಸಚಿವ ಡಿ. ಕೆ. ಶಿವಕುಮಾರ್ ಅವರ ಜೊತೆ ವಿಧಾನಸೌಧದ ಆವರಣದಲ್ಲಿ ಕೆಲವು ಕಾಲ ಚರ್ಚೆ ನಡೆಸಿದರು. ಬಳಿಕ ಜೆಡಿಎಸ್ ಶಾಸಕರು ಇರುವ ದೇವನಹಳ್ಳಿ ರೆಸಾರ್ಟ್‌ಗೆ ತೆರಳಿದರು.












Click it and Unblock the Notifications