HD Kumaraswamy: ಮಾಜಿ ಸಿಎಂ ಕುಮಾರಸ್ವಾಮಿ ಫೇಸ್‌ಬುಕ್ ಅಕೌಂಟ್...
ಮಾಜಿ ಸಿಎಂ ಕುಮಾರಸ್ವಾಮಿ ಅವರ ಫೇಸ್‌ಬುಕ್ ಅಕೌಂಟ್‌ನಲ್ಲಿ ಹ್ಯಾಕರ್ಸ್ ಕಿತಾಪತಿ ಮಾಡಿರುವ ಘಟನೆ ಇಂದು ವರದಿಯಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧಿಕೃತ ಹಾಗೂ ವೆರಿಫೈಡ್ ಫೇಸ್‌ಬುಕ್ ಅಕೌಂಟ್‌ನ ಪ್ರೊಫೈಲ್ ಇಮೇಜ್ & ಕವರ್ ಫೋಟೊ ದಿಢೀರ್ ಬದಲಾಗಿತ್ತು. ಹೀಗೆ ಫೋಟೊ ಬದಲಾಗಿದ್ದು ದೊಡ್ಡ ಸುದ್ದಿಯಲ್ಲ, ಆದರೆ ಅಲ್ಲಿ ಹಾಕಿದ್ದ ಫೋಟೊ ಸಂಚಲನ ಸೃಷ್ಟಿಸಿತ್ತು. ಈಗ ಅದರ ಅಸಲಿ ವಿಚಾರ ಹೊರಬಿದ್ದಿದೆ.
ಅಂದಹಾಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ, ಅಧಿಕೃತ ಹಾಗೂ ವೆರಿಫೈಡ್ ಫೇಸ್‌ಬುಕ್ ಅಕೌಂಟ್‌ನ ಪ್ರೊಫೈಲ್ ಇಮೇಜ್‌ಗೆ ಕಿಡಿಗೇಡಿಗಳು ವಿದೇಶಿ ಹುಡುಗಿ ಫೋಟೊ ಹಾಕಿದ್ದರು. ಹಾಗೇ ಕವರ್ ಫೋಟೊಗೆ ಕಾರಿನ ಚಿತ್ರ ಹಾಕಲಾಗಿತ್ತು. ಇನ್ನು ಇದನ್ನ ತಕ್ಷಣವೇ ಗಮಿಸಿದ ಎಚ್‌ಡಿಕೆ ಅಭಿಮಾನಿಗಳು ಹಾಗೂ ಅವರ ಸೋಷಿಯಲ್ ಮೀಡಿಯಾ ತಂಡ ತಕ್ಷಣ ತಪ್ಪು ಸರಿಪಡಿಸಿದೆ. ಆದರೆ ಯಾವ ಕಾರಣಕ್ಕೆ ಹೀಗೆ ಆಗಿದೆ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿತ್ತಾ? ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಡಿಲೀಟ್
ಹೌದು, ಈ ವಿಚಾರ ತಿಳಿಯುತ್ತಿದ್ದಂತೆ ಕಿಡಿಗೇಡಿಗಳು ಹಾಕಿದ್ದ ಫೋಟೊ ಡಿಲೀಟ್ ಮಾಡಿ ಬೇರೆ ಫೋಟೊ ಹಾಕಲಾಗಿದೆ. ಆದರೆ ಅಷ್ಟೊತ್ತಿಗೆ ಅಪ್‌ಡೇಟ್ ಆಗಿದ್ದ ಪ್ರೊಫೈಲ್ ಇಮೇಜ್ & ಕವರ್ ಫೋಟೊಗೆ ಕಮೆಂಟ್‌ಗಳು ಬರಲು ಆರಂಭಿಸಿದ್ದವು. ತಕ್ಷಣ ಅಲರ್ಟ್ ಆದ ಕೆಲವು ಫೇಸ್‌ಬುಕ್ ಬಳಕೆದಾರರು, ವಿಷಯ ತಿಳಿಯದೆ ಕಮೆಂಟ್ ಮಾಡುತ್ತಿದ್ದವರಿಗೆ ಅಕೌಂಟ್ ಹ್ಯಾಕ್ ಆಗಿದೆ ಅನ್ನೋ ವಿಚಾರವನ್ನ ತಿಳಿಸಿದ್ದಾರೆ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಿಎಂ ಎಚ್‌ಡಿಕೆ ಅವರ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಟೀಂ ಅಲರ್ಟ್ ಆಗಿ, ಕಿಡಿಗೇಡಿಗಳು ಹಾಕಿದ್ದ ಫೋಟೊ ಕಿತ್ತು ಎಸೆದಿದೆ.
ಚಂದ್ರಯಾನ ಸಕ್ಸಸ್ ಬಗ್ಗೆ ಎಚ್‌ಡಿಕೆ ಸಂತಸ
ಈ ಮಧ್ಯೆ ಇನ್ನೊಂದು ವಾರ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ. ಕಾರಣ, ನಾವೆಲ್ಲರೂ ಈಗ ಚಂದ್ರಯಾನ ಯಶಸ್ಸಿನ ಗುಂಗಿನಲ್ಲೇ ಇದ್ದೇವೆ. ಇವತ್ತು ದೇಶ-ವಿದೇಶಗಳಲ್ಲಿ ಚಂದ್ರಯಾನದ ಬಗ್ಗೆಯೇ ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿವೆ, ಪ್ರಶಂಸೆಗಳು ಬರುತ್ತಿವೆ. ಎಲ್ಲರ ಗಮನ ಆ ಕಡೆ ಇದೆ. ಹೀಗಾಗಿ ನಾನು 1 ವಾರ ರಾಜಕಾರಣದ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಈ ಬಗ್ಗೆ ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಮಾಜಿ ಸಿಎಂ ಹೀಗೆ ಹೇಳಿಕೆ ನೀಡಿದ್ದಾರೆ.

ವಿಜ್ಞಾನಿಗಳ ಅವಿರತ ಶ್ರಮದ ಕಾರಣ ದೇಶದ ಪ್ರತಿಷ್ಠೆ ವಿಶ್ವಮಟ್ಟದಲ್ಲಿ ಹೆಚ್ಚಾಗಿದೆ. ಇವತ್ತು ಪ್ರಧಾನ ಮಂತ್ರಿಗಳು ಬೆಂಗಳೂರಿಗೆ ಬಂದು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಹೋಗಿದ್ದಾರೆ. ಹೀಗಾಗಿ ರಾಜಕಾರಣ ಬಗ್ಗೆ ಹೆಚ್ಚಿಗೆ ಚರ್ಚೆ ಮಾಡಲ್ಲ. ನೀವು ಸರ್ಕಾರದ ಬಗ್ಗೆ ಕಠಿಣವಾಗಿ ಮಾತನಾಡುವುದು ಬೇಡ, ಇವರು ತಪ್ಪುಗಳನ್ನು ಮಾಡಿಕೊಂಡು ಹೋಗಲಿ ಬಿಟ್ಟು ಬಿಡಿ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಹಾಗಂತ ಬಿಟ್ಟುಬಿಟ್ಟರೆ ಇವರಿಗೆ ಹೇಳೋರು ಕೇಳೋರು ಇರುವುದಿಲ್ಲ, ಆ ಪರಿಸ್ಥಿತಿಗೆ ಬಂದು ಬಿಡ್ತಾರೆ. ಈಗಲೇ ಹೇಳೋರು, ಕೇಳೋರು ಇಲ್ಲ ಎಂದು ಮಾಜಿ ಸಿಎಂ ಎಚ್‌ಡಿಕೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲೋಡ್ ಶೆಡ್ಡಿಂಗ್ ಬಗ್ಗೆ ಗರಂ
ಲೋಡ್ ಶೆಡ್ಡಿಂಗ್ ಕುರಿತು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದ ಮಾಜಿ ಸಿಎಂ ಎಚ್‌ಡಿಕೆ, ನಾನು ಸರ್ಕಾರಕ್ಕೆ ಹೇಳುವುದು ಇಷ್ಟೇ. ನಿಮ್ಮ ಗ್ಯಾರಂಟಿ ಸ್ಕೀಂಗಳನ್ನ ಮಾಡಿಕೊಂಡು ಹೋಗಿ ಸಂತೋಷ. ಅದು ಎಷ್ಟರಮಟ್ಟಿಗೆ ನಿಮ್ಮ ಎಲ್ಲಾ ಗ್ಯಾರಂಟಿ ಸ್ಕೀಂಗಳಿಂದ ನಾಡಿನ ಜನತೆಗೆ ಅನೂಕೂಲ ಆಗುತ್ತಿದೆ ಎಂಬುದನ್ನು ಕಾದು ನೋಡೋಣ. ಅದಾನಿ, ಅಂಬಾನಿಗೆ ಸೇರುವ ದುಡ್ಡನ್ನು ಪ್ರತಿಯೊಬ್ಬರಿಗೂ ಹಂಚುತಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದ್ಯಾರಿಗೆ ಹಂಚುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ ಎಂದು ಹರಿಹಾಯ್ದರು.












Click it and Unblock the Notifications