'ಡಿ.ಕೆ.ಶಿವಕುಮಾರ್ ಕ್ಷೇತ್ರ ಎಂದ ತಕ್ಷಣ ಅಮಿತ್ ಶಾ ಅಧಿಕಾರಿಗಳು ಬರುವುದನ್ನೇ ಬಿಟ್ಟರು'
ಬೆಂಗಳೂರು, ಸೆಪ್ಟೆಂಬರ್ 08: ಕನಕಪುರ ಭಾಗದಲ್ಲಿ ನನ್ನನ್ನು ಜನಪ್ರತಿನಿಧಿಯಿಂದಾಗಿ ಆಯ್ಕೆ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದೀರ. ಅಮುಲ್ ಸಂಸ್ಥೆಗಿಂತ ಉತ್ತಮವಾದ ಉಪಕರಣಗಳನ್ನು ಶಿವನಹಳ್ಳಿಯ ಬಳಿಯ ಡೈರಿಯಲ್ಲಿ ಸ್ಥಾಪಿಸಿದ್ದೇನೆ. ಅಮಿತ್ ಷಾ ಅವರ ಕಚೇರಿ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿಕೊಂಡು ಹೋಗಿದ್ದರು. ಡಿ.ಕೆ.ಶಿವಕುಮಾರ್ ಕ್ಷೇತ್ರ ಎಂದು ತಿಳಿದ ತಕ್ಷಣ ಬರುವುದನ್ನೇ ಬಿಟ್ಟರು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ರಸ್ತೆ, ನೀರಾವರಿ, ಶಾಲೆ, ಆಸ್ಪತ್ರೆ, ವಿದ್ಯುತ್ ಹೇಳಿದಂತೆ ಎಲ್ಲಾ ಕೆಲಸಗಳನ್ನು ನನ್ನ ಕ್ಷೇತ್ರಕ್ಕೆ ಮಾಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಒಂದಷ್ಟು ವ್ಯತ್ಯಾಸವಾಯಿತು. ಏಕೆ ಎಂದು ಅರ್ಥವಾಗುತ್ತಿಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಬೇಕು.

ಬಯಲು ಸೀಮೆ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಷ್ಟಾಗಿ ಮಳೆ ಬಿದ್ದಿಲ್ಲ. ಕಡಲೆಕಾಯಿ, ಹುರುಳಿಯನ್ನು ಹಾಕಿಕೊಳ್ಳಬಹುದು ಹೊರತು ಅಷ್ಟೊಂದು ಅನುಕೂಲವಾಗಿಲ್ಲ. ಈ ಯೋಜನೆಯಿಂದ ಅಂತರ್ಜಲ ಹೆಚ್ಚಾಗುತ್ತದೆ. ರೇಷ್ಮೆ ಸೇರಿದಂತೆ ಇತರೆ ಬೆಳೆಗೆ ಅನುಕೂಲವಾಗಬಹುದು. ಈ ಭಾಗದ ಜನರಿಗೆ ನಾನು ಸಲಹೆ ನೀಡುತ್ತಿದ್ದೇನೆ. ನಿಮ್ಮಗ ಆಸ್ತಿಗಳ ಮೌಲ್ಯವನ್ನು ಹೆಚ್ಚು ಮಾಡುತ್ತೇನೆ, ಯಾರು ಮಾಡಿಕೊಳ್ಳಬೇಡಿ. ನನ್ನ ತಲೆಯಲ್ಲಿ ಒಂದಷ್ಟು ಲೆಕ್ಕಾಚಾರಗಳಿವೆ, ನನ್ನ ಆಲೋಚನೆಗಳು ನಿಮಗೆ ಈಗ ಅರ್ಥವಾಗುತ್ತಿರಬಹುದು.
ಬಿಜೆಪಿ ಸರ್ಕಾರ ಸಹಕಾರ ಕೊಟ್ಟರೆ ಎಲ್ಲವೂ ಸಾಧ್ಯ. ನ್ಯಾಯಾಲಯದಲ್ಲಿ ಮೇಕೆದಾಟು ವಿಚಾರವಾಗಿ ನಮಗೆ ನ್ಯಾಯ ದೊರೆಯುವ ಭರವಸೆ ಇದೆ. ಕನಕಪುರ ಭಾಗದ ಜನರಿಗೆ ಅನುಕೂಲವಾಗದೆ ಇರಬಹುದು. ಆದರೆ ರಾಜ್ಯದ ಹಿತಕ್ಕೆ ಒಳ್ಳೆಯದಾಗುತ್ತದೆ. ಕಾವೇರಿ ಭಾಗದ ಜನರಿಗೆ, ಬೆಂಗಳೂರಿನ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಸುಮಾರು 550 ಎಕರೆಯಷ್ಟು ರೈತರ ಜಮೀನು ಹೋಗಬಹುದು. ಅವರಿಗೆ ಉತ್ತಮ ಪರಿಹಾರ ನೀಡಿ, ಪರ್ಯಾಯ ಭೂಮಿಯನ್ನು ಕಲ್ಪಿಸಲಾಗುವುದು. ಪಡುವಣ, ಸಂಗಮ ಇವುಗಳಿಗೆ ಸ್ವಲ್ಪ ತೊಂದರೆ ಆಗಬಹುದು ಆದರೆ ರಾಜ್ಯದ ಹಿತ ಮುಖ್ಯ.
ನಮ್ಮನ್ನು ಹೊತ್ತು ಮೆರೆಸಿದ ಜನರನ್ನು ಬಿಟ್ಟು ಸೂಟು ಬೂಟು ಹಾಕಿದವರನ್ನು ಪೊಲೀಸರು ಮತ್ತು ಗನ್ ಮ್ಯಾನ್ ಗಳು ನಮ್ಮ ಬಳಿಗೆ ಕಳಿಸುತ್ತಾರೆ. ಈ ಕಾರಣಕ್ಕೆ ಸುರೇಶ್ ಅವರಿಗೆ ಸಲಹೆ ನೀಡಿದ್ದು ನೀನೆ ಸುತ್ತ ಬಡವರ ಸೇವೆ ಮಾಡುವರು ಮಾತ್ರ ಇಟ್ಟುಕೋ ಎಂದು ಹೇಳಿದ್ದೀನೆ. ಕುಟುಂಬದ ಜೊತೆಗೆ ವಿದೇಶಿ ಪ್ರವಾಸ ಹೋಗುತ್ತಿದ್ದು ಈ ವಾರ ನಿಮ್ಮ ಸೇವೆಗೆ ನಾನು ಲಭ್ಯವಿರುವುದಿಲ್ಲ. ಆನಂತರ ಇಂದಿನಂತೆ ನಿಮ್ಮೆಲ್ಲರ ಅಹವಾಲುಗಳನ್ನು ನಾನು ಸ್ವೀಕರಿಸುತ್ತೇನೆ.
ಶಿವಲಿಂಗೇಗೌಡರು ಎಂಎಲ್ಎ ಆಗಿದ್ದ ಕಾಲ. ಆಗ ಇಲ್ಲಿನ ಸ್ಥಳೀಯ ನಾಯಕರಾದ ನಾಗಣ್ಣ ಅವರು ಬಂದು ನನ್ನನ್ನು ಭೇಟಿಯಾಗಿ ಹಾರೋಬೆಲೆ ಭಾಗದಲ್ಲಿ ಇದ್ದ ಸಿಮೆಂಟ್ ಕಾರ್ಖಾನೆಗಳು ವಾಪಸ್ ಹೋಗುತ್ತಿವೆ. ಈಗ ನೀರಾವರಿ ಕುರಿತಾಗಿ ಒಂದಷ್ಟು ಕೆಲಸ ಮಾಡಿ ಎಂದು ಮನವಿ ಮಾಡಿದ್ದರು.
ವೀರೇಂದ್ರ ಪಾಟೀಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಪುಟ್ಟಸ್ವಾಮಿಗೌಡರನ್ನು ಇಲ್ಲಿಗೆ ಕರೆದುಕೊಂಡು ಬಂದು, ಗುತ್ತಿಗೆದಾರರಿಗೆ ಸೇರಿದ್ದ ಶೆಡ್ಒಂದರಲ್ಲಿ ಊಟವನ್ನು ಹಾಕಿಸಿದ್ದೆ. ಆಗ ಪುಟ್ಟಸ್ವಾಮಿಗೌಡರು ಶಿವಕುಮಾರ್ ಕಾರ್ಯಕರ್ತರ ಮನೆಯಲ್ಲಿ ಊಟ ಹಾಕಿಸುವುದು ಬಿಟ್ಟು ಗುತ್ತಿಗೆದಾರನ ಶೆಡ್ಡಿನಲ್ಲಿ ಊಟ ಹಾಕಿಸುತ್ತಿದ್ದೀಯಲ್ಲ? ಎಂದು ಬಿಟ್ಟರು.
ಈ ಭಾಗದಲ್ಲಿ ದೊಡ್ಡ ಮನೆಗಳು ಇರಲಿಲ್ಲ. ಆದ ಕಾರಣಕ್ಕೆ ಅಲ್ಲಿ ಊಟ ಹಾಕಿಸಿದ್ದೆ. ಶಿವಣ್ಣ ಎನ್ನುವರದ್ದು ಮಾತ್ರ ಒಂದು ಸ್ವಲ್ಪ ದೊಡ್ಡ ಮನೆಯಾಗಿತ್ತು. ಪುಟ್ಟಸ್ವಾಮಿಗೌಡರು ಹೀಗೆ ಹೇಳಿಬಿಟ್ಟರಲ್ಲ ಎಂದು ಸ್ವಲ್ಪ ಬೇಸರವಾಗಿತ್ತು. ಆಗ ಸ್ಥಳೀಯರೊಬ್ಬರು ಮನೆಯನ್ನು ಮಾರುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ, ನನ್ನ ಗೆಳೆಯರಾದ ಸಂಪತ್ ಅವರನ್ನು ಕಳಿಸಿ 20 ಎಕರೆ ಜಮೀನಿನ ಜೊತೆಗೆ ಕೋಡಹಳ್ಳಿಯಲ್ಲಿ ಮನೆಯನ್ನು ತೆಗೆದುಕೊಂಡೆ. ಕೋಡಹಳ್ಳಿಯಲ್ಲಿ ಈ ಮೊದಲೇ ಟೆಂಟ್ ಇದ್ದರೂ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರಲಿಲ್ಲ ಎಂದು ಹೇಳಿದರು.












Click it and Unblock the Notifications