ಅರಮನೆ ಮೈದಾನದಲ್ಲಿ ಜೆಡಿಎಸ್ ವಿಮರ್ಶನಾತ್ಮಕ ಸಭೆ: ಕುಗ್ಗಿದ ನಾಯಕರಿಗೆ ಬೂಸ್ಟರ್ ?
ಬೆಂಗಳೂರು, ಮೇ 24: ಚುನಾವಣೆಯಿಂದ ಚುನಾವಣೆಗೆ ಮತದಾರರು ಪ್ರಬುದ್ಧರಾಗಿದ್ದಾರೆ ಎಂಬುದು ಈ ಬಾರಿಯ ವಿಧಾನಸಭಾ ಚುನಾವಣೆಯಿಂದ ಸಾಬೀತಾಗಿದೆ. ಸದ್ಯ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಅಧಿಕಾರ ಹಿಡಿದಿದ್ದರೆ, ಬಿಜೆಪಿ ಅಧಿಕಾರ ಕಳೆದುಕೊಂಡು ವಿರೋಧಪಕ್ಷದ ಸ್ಥಾನಕ್ಕೆ ಬಂದು ನಿಂತಿದೆ. ಜೆಡಿಎಸ್ ಕಳೆದ ಬಾರಿ ಗೆದ್ದಿದ್ದ ಸ್ಥಾನಗಳನ್ನು ಕಳೆದುಕೊಳ್ಳುವಂತಾಗಿದೆ.
ಚುನಾವಣೆ ಬಳಿಕ ಜೆಡಿಎಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕುಗ್ಗಿದ್ದು, ಅವರಲ್ಲಿ ಆಶಾಭಾವನೆ ಮೂಡಿಸುವ ಮತ್ತು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಕಾರ್ಯವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಿರಿಯ ನಾಯಕರು ಮಾಡಬೇಕಾಗಿದ್ದು, ಹೀಗಾಗಿ ಮೇ 25ರಂದು ವಿಮರ್ಶನಾತ್ಮಕ ಸಭೆಗೆ ತಯಾರಿ ನಡೆದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳಾಗಿದ್ದು, ಅವುಗಳು ಏರಿಳಿತ ಕಂಡರೂ ಅದನ್ನು ಸರಿಪಡಿಸಿಕೊಳ್ಳುವ ಶಕ್ತಿ ಆ ಪಕ್ಷಗಳಿಗಿದೆ. ಆದರೆ ಜೆಡಿಎಸ್ ಸ್ಥಿತಿ ಆ ರೀತಿಯಲ್ಲಿಲ್ಲ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಮತ್ತೆ ಜಿಗಿದು ನಿಲ್ಲುವುದು ಅಷ್ಟು ಸುಲಭವಲ್ಲ. 2023ರ ಚುನಾವಣೆಯಲ್ಲಿ ಇಡೀ ರಾಜ್ಯವನ್ನು ಸಂಚರಿಸಿ ಅದರಲ್ಲೂ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ ಪಕ್ಷವನ್ನು ಸಂಘಟಿಸಿ ಹೆಚ್ಚಿನ ಸ್ಥಾನ ಪಡೆಯುವ ಪ್ರಯತ್ನ ಮಾಡಿದ್ದರು.
ಬಹುಮತ ಪಡೆಯಲಿಲ್ಲ..ಕಿಂಗ್ ಮೇಕರ್ ಆಗಲಿಲ್ಲ..!
ಹೇಗಿದ್ದರೂ ಹಳೇ ಮೈಸೂರು ಮತದಾರರು ನಮ್ಮನ್ನು ಕೈಬಿಡಲ್ಲ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಒಂದಷ್ಟು ಸ್ಥಾನಗಳನ್ನು ಗೆದ್ದುಬಿಟ್ಟರೆ ನಾವೇ ಕಿಂಗ್ ಮೇಕರ್ ಆಗಬಹುದೆಂಬ ಆಲೋಚನೆ ದಳಪತಿಗಳದ್ದಾಗಿತ್ತು. ಆದರೆ ಈಗ ಜೆಡಿಎಸ್ ಭದ್ರಕೋಟೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಲಗ್ಗೆಯಿಟ್ಟಿದ್ದು, ಕಳೆದುಕೊಂಡು ಕ್ಷೇತ್ರಗಳನ್ನು ಮತ್ತೆ ಗೆಲ್ಲುವುದು ಜೆಡಿಎಸ್ ನಾಯಕರಿಗೆ ಸುಲಭವೇನಲ್ಲ.

ರಾಮನಗರ, ಮಂಡ್ಯ ಮತ್ತು ಹಾಸನದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಭದ್ರಹಿಡಿತ ಸಾಧಿಸಿತ್ತು. ಆದರೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕರ್ಮಭೂಮಿ ರಾಮನಗರದಲ್ಲಿ ಪ್ರಾಬಲ್ಯ ಕಳೆದುಕೊಳ್ಳುವಂತಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಸಮನಾಗಿ ಟಕ್ಕರ್ ಕೊಟ್ಟಿದೆ. ಹಾಸನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯು ಜೆಡಿಎಸ್ ನ ಸ್ಥಾನಗಳನ್ನು ಕಿತ್ತುಕೊಂಡಿದೆ.
ರಾಮನಗರ-ಹಾಸನದಲ್ಲಿ ಜೆಡಿಎಸ್‌ಗೆ ಶಾಕ್
ರಾಮನಗರಜಿಲ್ಲೆಯನ್ನು ಜೆಡಿಎಸ್‌ನ ಭದ್ರಕೋಟೆ ಮಾಡಿಕೊಂಡು ಬಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ಹೊರತುಪಡಿಸಿ ಬೇರೆಯವರನ್ನು ಗೆಲ್ಲಿಸಿಕೊಂಡು ಬರಲು ಸಾಧ‍್ಯವಾಗಿಲ್ಲ. ಮಗ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಬದುಕನ್ನು ರಾಮನಗರದಿಂದ ಆರಂಭಿಸಲು ತಯಾರಿ ಮಾಡಿದರೂ ಅದು ಸಫಲತೆ ಕಾಣಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಏಕಾಂಗಿಯಾಗಿದ್ದಾರೆ.

ಅತ್ತ ಹಾಸನದಲ್ಲಿ ಪ್ರಾಬಲ್ಯ ಮೆರೆದಿದ್ದ ಹೆಚ್.ಡಿ.ರೇವಣ್ಣರಿಗೂ ಶಾಕ್ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ಭದ್ರಕೋಟೆಯೊಳಗೆ ನುಗ್ಗಿವೆ. ಕಳೆದ ಬಾರಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಎರಡು ಸ್ಥಾನಕ್ಕೇರಿದೆ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ವಿಜೃಂಭಿಸಿದೆ. ಸದ್ದಿಲ್ಲದೆ ರಾಷ್ಟ್ರೀಯ ಪಕ್ಷಗಳು ಚುನಾವಣೆಯಿಂದ ಚುನಾವಣೆಗೆ ಸ್ಥಾನಗಳನ್ನು ಹೆಚ್ಚು ಮಾಡಿಕೊಳ್ಳುತ್ತಾ ಹೋಗುತ್ತಿರುವುದು ಪ್ರಾದೇಶಿಕ ಪಕ್ಷಗಳ ಪಾಲಿಗೆ ಒಳ್ಳೆಯ ಬೆಳವಣಿಗೆ ಅಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.
ಜೆಡಿಎಸ್ ಟಾರ್ಗೆಟ್ ಮಾಡಿದ ಬಿಜೆಪಿ
ಹೆಚ್.ಡಿ.ಕುಮಾರಸ್ವಾಮಿ ಅವರೇ ಜೆಡಿಎಸ್ ಪಕ್ಷದ ಪ್ರಮುಖ ನಾಯಕರಾಗಿದ್ದರಿಂದ ಅವರು ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಜವಬ್ದಾರಿ ಇದ್ದುದರಿಂದ ಅವರು ರಾಮನಗರದತ್ತ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಹೆಚ್.ಡಿ.ರೇವಣ್ಣ ಮತ್ತು ಅವರ ಪತ್ನಿ ಭವಾನಿ, ಪುತ್ರರಾದ ಪ್ರಜ್ವಲ್ ಮತ್ತು ಸೂರಜ್ ಅವರು ಸೇರಿದಂತೆ ಹಲವು ನಾಯಕರು ಜಿಲ್ಲೆಯಲ್ಲಿ ಠಿಕಾಣಿ ಹೂಡಿದರೂ ಕೂಡ ಅವರಿಗೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಲಿಲ್ಲ.
ಇದೆಲ್ಲವನ್ನು ಗಮನಿಸಿದರೆ ಮತದಾರರು ಜೆಡಿಎಸ್ ನಿಂದ ದೂರ ಸರಿಯಲು ಕಾರಣವೇನು? ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಮತದಾರರು ವಿಮುಖರಾಗುವಂತೆ ಮಾಡಿತಾ? ಇಷ್ಟಕ್ಕೂ ಜೆಡಿಎಸ್ ಎಡವಿದ್ದೆಲ್ಲಿ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳಲಾರಂಭಿಸಿವೆ. ಕಳೆದ ಬಾರಿ 2018ರ ಚುನಾವಣೆಯಲ್ಲಿ ಬಿಜೆಪಿ ನಾಯಕರು ಅಷ್ಟೊಂದಾಗಿ ಜೆಡಿಎಸ್ ನ್ನು ಟಾರ್ಗೆಟ್ ಮಾಡಿರಲಿಲ್ಲ. ಆದರೆ 2023 ಚುನಾವಣೆಯಲ್ಲಿ ಬಿಜೆಪಿ ನೇರವಾಗಿ ಜೆಡಿಎಸ್ ನ್ನು ಟಾರ್ಗೆಟ್ ಮಾಡಿತ್ತು. ಪ್ರಧಾನಿ ನರೇಂದ್ರಮೋದಿ, ಗೃಹಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ನಾಯಕರು ಜೆಡಿಎಸ್ ಮೇಲೆ ವಾಗ್ದಾಳಿ ನಡೆಸಿದ್ದರು.
ಬೂಸ್ಟರ್ ಆಗುತ್ತಾ ವಿಮರ್ಶನಾತ್ಮಕ ಸಭೆ ?
ಒಟ್ಟಾರೆಯಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಗೆಲುವಿಗಾಗಿ ಹಲವು ರೀತಿಯ ತಂತ್ರಗಳನ್ನು ಮಾಡಿದ್ದರೂ ಕೂಡ ಅದ್ಯಾವುದು ಫಲಕೊಡಲಿಲ್ಲ. ಹೀಗಾಗಿ ಚುನಾವಣೆ ಬಳಿಕ ಜೆಡಿಎಸ್ ನಾಯಕರಲ್ಲಿ ಉತ್ಸಾಹ ಕುಗ್ಗಿದಂತೆ ಕಾಣುತ್ತಿದೆ. ಹೀಗಾಗಿ ಮತ್ತೆ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬಿ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸಲೇಬೇಕಾಗಿದೆ. ಜೊತೆಗೆ ಸೋಲಿನ ವಿಮರ್ಶೆಯನ್ನು ಮಾಡಬೇಕಾಗಿದೆ.
ಇದೀಗ ಜೆಡಿಎಸ್ ಮೇ 25ರಂದು ಬೆಳಿಗ್ಗೆ 10.30ಕ್ಕೆ ವಿಮರ್ಶನಾತ್ಮಕ ಸಭೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದೆ. ಈ ಸಭೆ ಪಕ್ಷದ ಹಿತದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು, ಇಲ್ಲಿ ಆಗಲಿರುವ ತೀರ್ಮಾನಗಳ ಬಗ್ಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬಹುನಿರೀಕ್ಷೆ ಹೊಂದಿದ್ದು, ಪಕ್ಷ ಸಂಘಟನೆಗೆ ಈ ಸಭೆ ಬೂಸ್ಟರ್ ಆಗುತ್ತಾ ಕಾದು ನೋಡಬೇಕಾಗಿದೆ.












Click it and Unblock the Notifications