KRS Dam; ಕಬಿನಿ ಜಲಾಶಯದ ಒಳಹರಿವು ಭಾರಿ ಹೆಚ್ಚಳ; ಕೆಆರ್‌ಎಸ್ ಜಲಾಶಯಕ್ಕೂ ಉತ್ತಮ ಒಳಹರಿವು
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೆರೆ ಕಟ್ಟೆಗಳು ಭರ್ತಿಯಾಗುತ್ತಿವೆ. ಸತತವಾಗಿ ಮಳೆಯಾಗುತ್ತಿರುವ ಕಾರಣ ನದಿಗಳ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ದಿನೇ ದಿನೇ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕೃತ್ತಿಕಾ ಮಳೆ ರಾಜ್ಯಕ್ಕೆ ತಂಪೆರದಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕೂಡ ಕಳೆದ ಎರಡು ವಾರಗಳಿಂದ ವ್ಯಾಪಕ ಮಳೆಯಾಗುತ್ತಿದೆ.

ಹಳೇ ಮೈಸೂರು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕಾವೇರಿ ನದಿ ಮೈದುಂಬಿಕೊಳ್ಳುತ್ತಿದೆ. ಕಳೆದ ವಾರ ಸಾವಿರ ಕ್ಯೂಸೆಕ್ ಒಳಗಡೆ ಇದ್ದ ಒಳಹರಿವು, ಈಗ ಭಾರಿ ಹೆಚ್ಚಾಗಿದೆ. ಅದರಲ್ಲೂ ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಕೆಆರ್ ಎಸ್ ಜಲಾಶಯದ ಒಳಹರಿವು ಕೂಡ ಹೆಚ್ಚಾಗಿದೆ.
ಕಬಿನಿ ಜಲಾಶಯಕ್ಕೆ ಭಾರಿ ನೀರು
ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಭಾರಿ ಹೆಚ್ಚಾಗಿದೆ. ಶುಕ್ರವಾರ ಕಬಿನಿ ಜಲಾಶಯದ ಒಳಹರಿವು 6473 ಕ್ಯೂಸೆಕ್ ಇದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಆಗಿದ್ದು, ಸದ್ಯ ಜಲಾಶಯದಲ್ಲಿ 7.23 ಟಿಎಂಎಸಿ ಅಡಿ ನೀರು ಸಂಗ್ರಹವಾಗಿದೆ. 6473 ಕ್ಯೂಸೆಕ್ ಒಳಹರಿವು ಇದ್ದರೆ 300 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
24.05.2024 ರಂತೆ ಪ್ರಮುಖ #ಜಲಾಶಯದ ಮಟ್ಟ. Major #Reservoir Level as of 24.05.2024.
— Karnataka State Natural Disaster Monitoring Centre (@KarnatakaSNDMC) May 24, 2024
Source: WRDO & KPCL. pic.twitter.com/p2JHFxWvHr
ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನಲ್ಲೂ ಏರಿಕೆಯಾಗಿದ್ದು, ಶುಕ್ರವಾರ 2509 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ. ಜಲಾಶಯದ ಸಾಮರ್ಥ್ಯ 49.45 ಟಿಎಂಸಿ ಇದ್ದರೆ, ಸದ್ಯ 11.60 ಟಿಎಂಸಿ ನೀರು ಸಂಗ್ರಹವಾಗಿದೆ. 2509 ಕ್ಯೂಸೆಕ್ಸ್ ಒಳಹರಿವು ಇದ್ದು, ಹೊರ ಹರಿವು ಪ್ರಮಾಣ 525 ಕ್ಯೂಸೆಕ್ಸ್ ಆಗಿದೆ.
ಉಳಿದಂತೆ ಹೇಮಾವರತಿ ಜಲಾಶಯದ ಒಳಹರಿವು 627 ಕ್ಯೂಸೆಕ್ಸ್ ಇದ್ದರೆ, ಹಾರಂಗಿ ಜಲಾಶಯದ ಒಳಹರಿವು 460 ಕ್ಯೂಸೆಕ್ಸ್ ಆಗಿದೆ.
ವ್ಯಾಪಕ ಮಳೆ ನಿರೀಕ್ಷೆ
ಇನ್ನೂ ಒಂದು ವಾರ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈಗಾಗಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಇನ್ನೂ ಒಂದು ವಾರ ಉತ್ತಮ ಮಳೆಯಾದರೆ, ಜಲಾಶಯಗಳ ಒಳಹರಿವು ಮತ್ತಷ್ಟು ಹೆಚ್ಚಾಗಲಿದೆ.
ಕಳೆದ ವರ್ಷ ಬರ ಮತ್ತು ಬಿಸಿಲಿನ ತಾಪದಿಂದ ಭಾರಿ ನಷ್ಟಕ್ಕೆ ಒಳಗಾಗಿದ್ದ ರೈತರಿಗೆ ಈ ಬಾರಿ ಮುಂಗಾರಿಗೆ ಮುನ್ನವೇ ಮಳೆ ಅಬ್ಬರಿಸಲು ಆರಂಭಿಸಿರುವುದು ಖುಷಿ ತಂದಿದೆ.












Click it and Unblock the Notifications