ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಟೋಟ; ಭಯದಿಂದ ನನ್ನನ್ನು ಸೋಲಿಸಿದ್ದಾರೆ ಎಂದ ವಿ ಸೋಮಣ್ಣ
ಮೈಸೂರು, ಅಕ್ಟೋಬರ್ 09: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿಯಲ್ಲಿ ಅಸಮಾಧನದ ಕಿಚ್ಚು ಹೆಚ್ಚಾಗಿದೆ. 2023 ರ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿ ಸೋಲು ಕಂಡಿರುವ ಮಾಜಿ ಸಚಿವ ವಿ ಸೋಮಣ್ಣ ಮತ್ತೆ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.
ಹೌದು, ಈ ಕುರಿತು ಸೋಮವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಬಿಜೆಪಿಗೆ ಬರುವವರೆಗೆ ನಾನು ಸೋತೇ ಇರಲಿಲ್ಲ. ಬಿಜೆಪಿಗೆ ಬಂದ ಬಳಿಕ ನಾಲ್ಕು ಬಾರಿ ಸೋತೆ. ನಾನು ಏನೋ ಆಗಿಬಿಡುತ್ತೇನೆ ಎಂಬ ಭಯದಲ್ಲಿ ನನ್ನನ್ನು ಬಿಜೆಪಿಯಲ್ಲಿ ಸೋಲಿಸಲಾಗಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದೆ. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಬಾರಿ ಗೆದ್ದಿದ್ದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ನಿಷ್ಠುರವಾಗಿ ಮಾತನಾಡುತ್ತೇನೆ. ಆದರಿಂದ ಏನಾಗಿದೆ ಎಂಬ ಬಗ್ಗೆ ಚರ್ಚೆ ಬೇಡ. ಕಷ್ಟಪಟ್ಟು ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ನಾನು ಕೆಲಸಗಾರ ಎಂಬ ಭಾವನೆ ಇದೆ. ಈ ಹಿಂದೆ ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿನ ಮಂತ್ರಿಯೊಬ್ಬರು ಗೋವಿಂದರಾಜನಗರ ಯಾಕೆ ಬಿಟ್ಟಿರಿ ಅಂದ್ರು. ನಾನು ಕ್ಷೇತ್ರ ಬಿಡಲಿಲ್ಲ, ನನ್ನನ್ನು ಬೇರೆ ಕ್ಷೇತ್ರಕ್ಕೆ ಕಳುಹಿಸಿದರು ಅಂದೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ 10 ಬಾರಿ ಗೆದ್ದಿದ್ದಾರೆ. ಪ್ರತಿ ಬಾರಿಯೂ ಬೇರೆ ಬೇರೆ ಕ್ಷೇತ್ರಗಳಲ್ಲೇ ಗೆದ್ದಿದ್ದಾರೆ. ಅಂತೆಯೇ ಮುಂದೆ ನೀವೂ ಬೇರೆ ಬೇರೆ ಕ್ಷೇತ್ರಕ್ಕೆ ಹೋಗಿ, ಸೋಲಿನಿಂದ ಧೃತಿಗೆಡಬೇಡಿ ಎಂದು ಹೇಳಿ ನನ್ನನ್ನು ಬೇರೆ ಕ್ಷೇತ್ರಕ್ಕೆ ಕಳುಹಿಸಿದ್ದರು ಎಂದು ಹೇಳಿದರು.
ಇನ್ನೂ ಜಾತಿ ಗಣತಿ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜಾತಿ ಗಣತಿ ವರದಿ ನೋಡಿದರೆ ಅಚ್ಚರಿಯಾಗುತ್ತದೆ. ವೀರಶೈವ ಸಮಾಜ ಒಗ್ಗಟ್ಟಾಗಬೇಕು, ಇಲ್ಲದಿದ್ದರೆ ಹೇಳುವವರು, ಕೇಳುವವರು ಇಲ್ಲದಂತಾಗುತ್ತದೆ. ನಮ್ಮಲ್ಲಿ ಎಲ್ಲವೂ ಇದೆ. ಆದರೆ ಅವಕಾಶ ಬಂದಾಗ ಕಣ್ಮುಚ್ಚಿ ಕೂರುತ್ತೇವೆ ಎಂದು ಹೇಳಿದರು.

ಬಿಜೆಪಿಯಲ್ಲಿ ಲಿಂಗಾಯತರಿಗೆ ಉಸಿರು ಕಟ್ಟಿಸಲಾಗುತ್ತಿದೆ: ಕಾಂಗ್ರೆಸ್
ಬಿಜೆಪಿಗೆ ಬರುವವರೆಗೆ ನಾನು ಸೋತೇ ಇರಲಿಲ್ಲ. ಬಿಜೆಪಿಗೆ ಬಂದ ಬಳಿಕ ನಾಲ್ಕು ಬಾರಿ ಸೋತೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿಕೆ ಕುರಿತು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿಯಲ್ಲಿ ಲಿಂಗಾಯತರಿಗೆ ಉಸಿರು ಕಟ್ಟಿಸಲಾಗುತ್ತಿದೆ ಎಂಬುದಕ್ಕೆ ಸೋಮಣ್ಣನವರ ಹೇಳಿಕೆಯೇ ಸಾಕ್ಷಿ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಕರ್ನಾಟಕ ಕಾಂಗ್ರೆಸ್ ಸೋಮವಾರ ವಿ.ಸೋಮಣ್ಣನವರ ಹೇಳಿಕೆ ಆಧರಿಸಿ ಬಿಜೆಪಿ ವಿರುದ್ಧ ಲೇವಡಿ ಮಾಡಿ ಟ್ವೀಟ್ ಮಾಡಿದೆ. ಬಿಜೆಪಿಗೆ ಬರುವವರೆಗೂ ನಾನು ಸೋತಿರಲಿಲ್ಲ, ಬಿಜೆಪಿಗೆ ಬಂದಮೇಲೆ ಸೋತಿದ್ದೇನೆ, ನಮ್ಮವರೇ ನನ್ನನ್ನು ಸೋಲಿಸಿದರು ಎಂದು ಬಿಜೆಪಿ ನಾಯಕ ವಿ.ಸೋಮಣ್ಣ ಅವರು ಹೇಳಿದ್ದನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ.
ಬಿಜೆಪಿಯೊಳಗಿನ ಆಂತರಿಕ ಕಲಹ ಇನ್ನೂ ಮುಗಿಲಿಲ್ಲ ಎಂದು ಕಾಲೆಳೆದ ಕಾಂಗ್ರೆಸ್ ಪಕ್ಷವು, ಬಿಜೆಪಿಯಲ್ಲಿ ಲಿಂಗಾಯತರಿಗೆ ಉಸಿರು ಕಟ್ಟಿಸಲಾಗುತ್ತಿದೆ ಎಂಬುದಕ್ಕೆ ಸೋಮಣ್ಣನವರ ಹೇಳಿಕೆಯೇ ಸಾಕ್ಷಿ. ಸಂತೋಷ ಕೂಟದ ದಾಳಕ್ಕೆ ಲಿಂಗಾಯತ ನಾಯಕರು ಅಬ್ಬೇಪಾರಿಗಳಂತಾಗಿದ್ದಾರೆ ಎಂದು ತಿವಿದಿದೆ.












Click it and Unblock the Notifications