ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ ದೇವರಾಜೇಗೌಡ
ಬೆಂಗಳೂರು, ಜೂನ್ 07: ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಬಂಧನಕ್ಕೊಳಗಾಗಿರುವ ಹಾಸನದ ವಕೀಲ ಜಿ. ದೇವರಾಜೇಗೌಡ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇದೇ ದೇವರಾಜೇಗೌಡ ಅವರ ಹೆಸರು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲೂ ಕೇಳಿ ಬಂದಿತ್ತು. ಅದರಲ್ಲೂ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಆ ಮಧ್ಯೆ ಅವರೇ ಬಂಧನಕ್ಕೊಳಗಾಗಿ ಇದೀಗ ಜೈಲು ಸೇರಿದ್ದಾರೆ.

ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಆರೋಪಿ ಜಿ. ದೇವರಾಜೇಗೌಡಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಹೊಳೆನರಸೀಪುರದ ಟೌನ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ದೂರುದಾರೆ ಮಹಿಳೆಯನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಶೀಘ್ರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಸುಳ್ಳು ಆರೋಪ: ದೇವರಾಜೇಗೌಡ, ತಾನು ಅಮಾಯಕರಾಗಿದ್ದೇನೆ. ಸುಳ್ಳು ಆರೋಪ ಮಾಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪೊಲೀಸರು ಹಾಗೂ ದೂರುದಾರೆ ಮಹಿಳೆ ದುರದ್ದೇಶ ಹೊಂದಿದ್ದಾರೆ. ದೂರುದಾರೆ ಮಹಿಳೆಯೇ ತನ್ನ ನಿವೇಶನದ ವ್ಯಾಜ್ಯದ ವಿಚಾರವಾಗಿ ನನ್ನನ್ನು ಸಂಪರ್ಕಿಸಿದ್ದರು. ನಂತರ ನನ್ನ ನಂಬರ್ ಪಡೆದು ಸಂದೇಶ ಕಳುಹಿಸಿದ್ದರು.
ಕೆಲ ಕಾಲದ ನಂತರ ನನ್ನ ಕಚೇರಿಗೆ ದೂರುದಾರೆಯ ಪತಿ ಭೇಟಿ ನೀಡಿ ನನ್ನ ಮೇಲೆ ಮಾಟ ಮಂತ್ರ ಮಾಡಿಸಿದ್ದರು. ದೂರುದಾರೆ ನನಗೆ ಕುಂಕುಮವನ್ನು ಹಣೆಗೆ ಹಚ್ಚಿದರು. ಆಗ ನನಗೆ ತಲೆ ತಿರುಗಿತು.
ನಂತರ ವಿಡಿಯೋಕಾಲ್ ಮಾಡಿ ನನಗೆ ಲೈಂಗಿಕ ಪ್ರಚೋದನೆ ನೀಡುತ್ತಿದ್ದರು. ಮಾಟಮಂತ್ರದಿಂದ ನಾನು ಬಲಿಪಶುವಾದೆ. ಆಕೆಯೇ ಕರೆ ಮಾಡಿ ಖಾಸಗಿ ಅಂಗ ತೋರಿಸುತ್ತಿದ್ದರು. ಮಹಿಳೆಯರನ್ನು ತೋರಿಸಿ ಕಾಮ ಪ್ರಚೋದನೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ನಂತರ ಅನಾಮದೇಯ ವ್ಯಕ್ತಿ ನನಗೆ ಕರೆ ಮಾಡಿ 2 ಕೋಟಿ ಹಣ ನೀಡಬೇಕು. ಇಲ್ಲವಾದರೆ ನಿನ್ನ ಅಶ್ಲೀಲ ಪೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ತಿಳಿಸಿದರು. ಈ ಬಗ್ಗೆ ನಾನು ಬೆಂಗಳೂರಿನ ಹೆಬ್ಬಾಳ ಠಾಣೆಗೆ ದೂರು ನೀಡಿದೆ.
ವಿಚಾರಣೆಗೆ ಹಾಜರಾದ ದೂರುದಾರೆಯು ಆ ವೇಳೆ ನನ್ನ ಮೇಲೆ ಯಾವುದೇ ಆರೋಪ ಮಾಡಿಲ್ಲ. ನಂತರ ಏ.4ರಂದು ಆಕೆ ದೂರು ನೀಡಿದ್ದಾರೆ. ದುರುದ್ದೇಶದಿಂದ ನನ್ನ ವಿರುದ್ಧ ದೂರು ದಾಖಲಿಸಿರುವುದನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ದೇವರಾಜೇಗೌಡ ಕೋರಿದ್ದಾರೆ.
ಏನಿದು ಪ್ರಕರಣ?; ದೇವರಾಜೇಗೌಡ ವಿರುದ್ಧ ಮಹಿಳೆಯೊಬ್ಬರು ಹೊಳೆನರಸೀಪುರ ಠಾಣೆಗೆ 2024ರ ಏ.1ರಂದು ದೂರು ದಾಖಲಿಸಿದ್ದರು. ನಿವೇಶನ ವಿಚಾರವಾಗಿ ಅವರನ್ನು ಭೇಟಿ ಮಾಡಿದ್ದೆ. ಅಂದಿನಿಂದ ತನ್ನೊಂದಿಗೆ ಅವರು ಮಾತನಾಡುತ್ತಿದ್ದರು.
ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕಾ ಘಟಕದ ಹಿಂದಿರುವ ಜನನಿಬಿಡಿ ಪ್ರದೇಶಕ್ಕೆ ಕರೆದೊಯ್ದು, ಮೈ ಕೈಮುಟ್ಟಿ ದೈಹಿಕ ಹಿಂಸೆ ನೀಡುತ್ತಾರೆ. ನಂತರ ತಮ್ಮ ಮನೆಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.












Click it and Unblock the Notifications