'ದೇವಾಲಯಗಳು ಇವರಿಂದ ನಡೆಯಲಿ..' ಎಂದ ಧಾರ್ಮಿಕ ಗುರುಗಳು
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿತರಿಸುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಇತರೆ ಕಲಬೆರಕೆ ವಸ್ತುಗಳನ್ನು ಬಳಸಲಾಗುತ್ತಿದೆ ಎನ್ನುವ ವಿವಾದದ ಬಗ್ಗೆ ದೇಶದೆಲ್ಲೆಡೆ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಧಾರ್ಮಿಕ ಗುರುಗಳು ಸಹ ಆಕ್ಷೇಪ ವ್ಯಕ್ತಪಡಿಸಿದ್ದು, ದೇವಸ್ಥಾನಗಳ ಆಡಳಿತದ ಬಗ್ಗೆ ದೊಡ್ಡ ಸಲಹೆ ಕೂಡ ನೀಡಿದ್ದಾರೆ.
ಆಧ್ಯಾತ್ಮಿಕ ಗುರು, ಈಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್, ಶ್ರೀ ರವಿಶಂಕರ್ ಗುರೂಜಿ, ಪೇಜಾವರ ಶ್ರೀಗಳು ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ದೇವಸ್ಥಾನಗಳು ಭಕ್ತರಿಂದ ನಡೆಯಬೇಕೇ ಹೊರತು ಸರ್ಕಾರಗಳಿಂದ ಅಲ್ಲ ಎಂದು ಎಲ್ಲರೂ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಡ್ಡು ತಯಾರಿಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾಗಿರೋದು ಅಸಹ್ಯ ತರುವಂತಿದೆ. ಇವೆಲ್ಲ ನಿಲ್ಲಬೇಕಾದರೆ ದೇವಾಲಯಗಳು ಸರ್ಕಾರ ಆಡಳಿತದಿಂದ ನಡೆಯದೆ, ಕೇವಲ ಭಕ್ತರಿಂದ ನಡೆಯಬೇಕು. ಎಲ್ಲಿ ಭಕ್ತಿ ಇರುವುದಿಲ್ಲವೋ ಅಲ್ಲಿ ಪವಿತ್ರತೆಯೂ ಇರೋದಿಲ್ಲ ಎಂದು ಜಗ್ಗಿ ವಾಸುದೇವ್ ಹೇಳಿದ್ದಾರೆ.
ತಿರುಪತಿಯಲ್ಲಿ ನಡೆದಿರುವ ಲಡ್ಡು ವಿವಾದದ ಘಟನೆಯು ಹಿಂದೂಗಳ ಮನಸ್ಸಿನಲ್ಲಿ ತೀವ್ರ ನೋವು ಹಾಗೂ ಆಕ್ರೋಶವನ್ನುಂಟು ಮಾಡಿದೆ. ತಮ್ಮ ಸ್ವಾರ್ಥಕ್ಕಾಗಿ ಇರುವ ಅಧಿಕಾರಿಗಳು, ವ್ಯಾಪಾರಸ್ಥರು ಹಾಗೂ ರಾಜಕೀಯ ನಾಯಕರು ದೇವಾಲಯಗಳ ಮುಖ್ಯಸ್ಥಿಕೆ ವಹಿಸಿಕೊಳ್ಳಬಾರದು. ಬದಲಾಗಿ ಧಾರ್ಮಿಕ ಮುಖಂಡರು ಹಾಗೂ ಭಕ್ತರಿಗೆ ದೇವಸ್ಥಾನಗಳ ನಿರ್ವಹಣೆ ವಹಿಸುವುದು ಒಳ್ಳೆಯದು. ಇದಕ್ಕೆ ಈಗ ಸಮಯ ಕೂಡಿ ಬಂದಿದೆ ಎಂದು ಮತ್ತೊಬ್ಬ ಆಧ್ಯಾತ್ಮಿಕ ಗುರುವಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಕೂಡ ಲಡ್ಡು ವಿವಾದದ ಬಗ್ಗೆ ಮಾತನಾಡಿದ್ದು, ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿರುವುದು ಹಿಂದೂ ಸಮಾಜಕ್ಕೆ ಮಾಡಿರುವ ಬಹುದೊಡ್ಡ ಅಪಚಾರ. ಇದು ದೇವರಿಗೂ ಮಾಡಿರುವ ಅಪಚಾರ. ಸರ್ಕಾರವೇ ಇಂತಹ ನೀಚ ಕೆಲಸ ಮಾಡಿರುವುದು ಖಂಡನೀಯ ಎಂದು ದೂರಿದ್ದಾರೆ.

ಧಾರ್ಮಿಕ ಕೇಂದ್ರಗಳು ಸರ್ಕಾರ ವಶದಲ್ಲಿ ಇರಬಾರದು. ಅವುಗಳೆಲ್ಲ ಹಿಂದೂ ಧರ್ಮದವರ ಸುಪರ್ದಿಯಲ್ಲಿರಬೇಕು. ಸುಪ್ರೀಂಕೋರ್ಟ್ ತೀರ್ಪಿನಲ್ಲೂ ಇದನ್ನೇ ಹೇಳಲಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಸರ್ಕಾರದ ಸ್ವಾಧೀನದಿಂದ ದೇಗುಲಗಳನ್ನು ಮುಕ್ತಗೊಳಿಸಬೇಕು. ತಿರುಪತಿ ದೇವಾಲಯದ ಆಡಳಿತವನ್ನು ಹಿಂದೂಗಳಿಗೆ ನೀಡಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಸಲಹೆ ನೀಡಿದ್ದಾರೆ.
ತಿರುಪತಿಯ ಶ್ರೀನಿವಾಸನು ಗೋವಿನ ರಕ್ಷಣೆಗೆ ಅವತರಿಸಿದ ಎಂದು ಪುರಾಣ ಹೇಳುತ್ತದೆ. ಈ ಪುಣ್ಯಕ್ಷೇತ್ರದಲ್ಲಿ ಗೋವು ಹಾವಿಗೆ ಹಾಲೆರೆಯುತ್ತಿತ್ತು. ಈ ವೇಳೆ ಮಾಲೀಕನಿಂದ ಹಸುವನ್ನ ಶ್ರೀನಿವಾಸನೇ ರಕ್ಷಿಸಿದ್ದ ಎಂದು ಹೇಳಲಾಗುತ್ತಿದೆ. ಅಂತಹ ಶ್ರೀನಿವಾಸನಿಗೇ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದಾರೆ. ಇದೊಂದು ಕ್ಷಮಿಸಲಾಗದ ಅಪರಾಧ. ಇದು ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲೆ ನಡೆದಿರುವ ಹಲ್ಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಸದ್ಯ ಈ ವಿಷಯದ ಬಗ್ಗೆ ದೇಶಾದ್ಯಂತ ಚರ್ಚೆಗಳು ಜೋರಾಗಿ ನಡೆಯುತ್ತಿವೆ.












Click it and Unblock the Notifications