Election Ads Rule: ಅಭ್ಯರ್ಥಿಗಳಿಗೆ ಜಾಹೀರಾತು ನಿಯಮಗಳು
ಬೆಂಗಳೂರು, ಏಪ್ರಿಲ್ 23; ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24ರ ಮಧ್ಯಾಹ್ನ 3 ಗಂಟೆ ಕೊನೆಯ ದಿನ. ಅಭ್ಯರ್ಥಿಗಳು ಮೇ 10ರಂದು ನಡೆಯುವ ಚುನಾವಣೆಗೆ ಜಾಹೀರಾತುಗಳ ಮೂಲಕ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೂ ಸಹ ನಿಯಮಗಳಿವೆ.
ರಾಜಕೀಯ ಪ್ರಚಾರದ ಪತ್ರಿಕಾ ಜಾಹೀರಾತು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತು ಹಾಗೂ ಸಾಮಾಜಿಕ ಜಾಲತಾಣ, ಮೊಬೈಲ್, ಎಸ್‌ಎಂಎಸ್, ಇ-ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಜಾಹೀರಾತುಗಳಿಗೆ ಕಡ್ಡಾಯವಾಗಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ನಿಗದಿತ ನಮೂನೆ-ಎ ನಲ್ಲಿ ಅರ್ಜಿ ಸಲ್ಲಿಸಿ, ನಮೂನೆ-ಬಿ ಯಲ್ಲಿ ಅನುಮತಿ ಪಡೆಯಬೇಕು. ಜಾಹೀರಾತಿನ ವೆಚ್ಚವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸುವುದು ಸಹ ಕಡ್ಡಾಯವಾಗಿದೆ. ಜಾಹೀರಾತು ಅನುಮತಿ ಹಾಗೂ ಪಾವತಿ ಸುದ್ದಿಯ (ಪೇಯಿಡ್ ನ್ಯೂಸ್) ಮೇಲೆ ನಿಗಾವಹಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಪಾವತಿ ಸುದ್ದಿ ಪ್ರಕಟಿಸುವುದು ಪ್ರಜಾ ಪ್ರಾತಿನಿಧಿಕ ಕಾಯ್ದೆ 1951ರಡಿ ಶಿಕ್ಷಾರ್ಹ ಅಪರಾಧವಾಗಿದೆ. ಪಾವತಿ ಸುದ್ದಿಯು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಅಪಾಯಕಾರಿಯಾಗಿದೆ. ಪಾವತಿ ಸುದ್ದಿಯನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಮಾಧ್ಯಮ ಸಂಸ್ಥೆಗಳು ಹಾಗೂ ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಪಾವತಿ ಸುದ್ದಿ ಎಂದರೆ ಚುನಾವಣೆಗೆ ಸಂಬಂಧಿಸಿದಂತೆ ನಗದು ಅಥವಾ ಯಾವುದೇ ಉಡುಗೊರೆ ರೂಪದಲ್ಲಿ ಪಡೆದುಕೊಂಡು ಸುದ್ದಿ ಮಾಡುವುದು ಮಾತ್ರವಲ್ಲ. ಪಕ್ಷ ಅಥವಾ ಅಭ್ಯರ್ಥಿಗೆ ಸಂಬಂಧಿಸಿದ ಸುದ್ದಿ ಅಥವಾ ವಿಶ್ಲೇಷಣೆ ಮಾಧ್ಯಮದಲ್ಲಿ (ಮುದ್ರಣ ಹಾಗೂ ವಿದ್ಯುನ್ಮಾನ) ಪ್ರಕಟವಾಗಿದ್ದಲ್ಲಿ ಅದನ್ನು ಪಾವತಿ ಸುದ್ದಿ ಎಂದು ಪರಿಗಣಿಸಲಾಗುತ್ತದೆ.
ಪಾವತಿ ಸುದ್ದಿ ಪ್ರಕಟವಾದರೆ ಪರಿಶೀಲಿಸಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರನ್ವಯ ಪ್ರಕರಣ ದಾಖಲಿಸುವುದಲ್ಲದೇ ಪ್ರಜಾ ಪ್ರಾತಿನಿಧ್ಯ ಕಾಯ್ದೆ-1951ರ ಅಧ್ಯಾಯ-3ರ ಭಾಗ-7ರಂತೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಒಳಪಡಿಸಲು ಅವಕಾಶವಿದೆ. ಜಿಲ್ಲಾ ಮಟ್ಟದಲ್ಲಿ ಜಾಹೀರಾತು ಪ್ರಮಾಣೀಕರಿಸಲು ಜಿಲ್ಲಾಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯನ್ನು ರಚಿಸಲಾಗಿದೆ.

ಎಲ್ಲ ಪತ್ರಿಕಾ, ದೃಶ್ಯ ಮಾಧ್ಯಮ ಹಾಗೂ ಸ್ಥಳೀಯ ಕೇಬಲ್ ಟಿವಿಗಳಲ್ಲಿ ಪ್ರಸಾರವಾಗುವ ಚುನಾವಣಾ ಜಾಹಿರಾತುಗಳ ಪ್ರಕಟಣೆಗೆ ಮುಂಚಿತವಾಗಿ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ಅನುಮತಿ ಕಡ್ಡಾಯವಾಗಿರುತ್ತದೆ. ಕೇಬಲ್ ಟಿವಿ, ಸಾಮಾಜಿಕ ಜಾಲತಾಣ, ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಇ-ಪತ್ರಿಕೆಗಳ ಸುದ್ದಿಗಳ ಕುರಿತಂತೆ ನಿಗಾವಹಿಸಲು ತಂಡಗಳನ್ನು ಸಹ ರಚನೆ ಮಾಡಲಾಗಿದೆ.
ನೋಟಿಸ್ ನೀಡಲಾಗುತ್ತದೆ; ಚುನಾವಣಾ ಅಭ್ಯರ್ಥಿಯ ಪರ ಅಥವಾ ವಿರುದ್ಧವಾದ ವ್ಯಕ್ತಿತ್ವ ಅಥವಾ ಸಾಧನೆಯ ಸರಿಯಾದ ಚಿತ್ರಣ ಇರದೇ ಮತ ಚಲಾಯಿಸುವುದನ್ನು ನಿರ್ಧರಿಸುವುದು, ಒಬ್ಬ ಅಭ್ಯರ್ಥಿಯ ಸಾಧನೆ ಬಗ್ಗೆ ನಿಗದಿತ ಶಬ್ದಗಳ ಬರಹವನ್ನು ನಿರಂತರವಾಗಿ ಪ್ರಕಟಿಸುವುದು. ಒಬ್ಬನೇ ಅಭ್ಯರ್ಥಿಯ ಬಗ್ಗೆ ನಿರಂತರವಾಗಿ ಲೇಖನವನ್ನು ಬರೆದು ಪ್ರಕಟಿಸುವುದು, ಜಾತಿ, ಧರ್ಮದ ಆಧಾರದ ಮೇಲೆ ಒಬ್ಬ ವ್ಯಕ್ತಿ ಗೆಲುವು ಸಾಧ್ಯತೆ ಎಂದು ಪ್ರತಿಬಿಂಬಿಸುವುದು, ವರದಿಯ ತಲೆಬರಹದಲ್ಲಿ ನಿರ್ಧಿಷ್ಟ ವ್ಯಕ್ತಿ ಗೆಲುವು ಸಾಧಿಸುತ್ತಾನೆ ಎಂದು ನಮೂದಿಸಿ ಒಳಗಿನ ಸುದ್ದಿಯಲ್ಲಿ ಕಾರಣ ಇಲ್ಲದೇ ಇರುವುದು ಇವೆಲ್ಲವೂ ಪಾವತಿಯ ಸುದ್ದಿಯ ವ್ಯಾಪ್ತಿಗೆ ಒಳಪಡುತ್ತವೆ. ಪಾವತಿ ಸುದ್ದಿ ಎಂದು ಪರಿಗಣಿಸಿ, ಪ್ರಕಟವಾದ 96 ಗಂಟೆಯೊಳಗೆ ಸಂಬಂಧಿಸಿದ ಪಕ್ಷ ಅಥವಾ ಅಭ್ಯರ್ಥಿಗಳಿಗೆ ಸ್ಪಷ್ಟೀಕರಣ ಕೇಳಿ ನೋಟೀಸ್ ನೀಡಲಾಗುವುದು. ಅಭ್ಯರ್ಥಿಗಳು 48 ಗಂಟೆಯೊಳಗೆ ನೋಟೀಸ್‍ಗೆ ಉತ್ತರಿಸಬೇಕಾಗುತ್ತದೆ.
ಫೇಸ್‍ಬುಕ್, ವಾಟ್ಸಪ್, ಟ್ವಿಟರ್ ಮತ್ತು ಯೂಟ್ಯೂಬ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಮತ್ತು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವುದಕ್ಕಿಂತ ಮುಂಚೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ವತಿಯಿಂದ ಮಾಧ್ಯಮ ಪ್ರಮಾಣೀಕರಣ ಪತ್ರ ಪಡೆಯುವುದು ಕಡ್ಡಾಯ. ಒಂದು ವೇಳೆ ಅದನ್ನು ಉಲ್ಲಂಘಿಸಿ ಪ್ರಚಾರ ಮಾಡಿದರೇ ಚುನಾವಣಾ ನೀತಿ ಸಂಹಿತೆ ಮತ್ತು ಐಟಿ ಕಾಯ್ದೆ ಉಲ್ಲಂಘನೆ ಅಡಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪೋಸ್ಟ್ ಮಾಡುವುದಕ್ಕಿಂತ ಮುಂಚೆ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಗೆ ಪೋಸ್ಟ್ ಮಾಡುವ ವಿನ್ಯಾಸವುಳ್ಳ ಅಂಶ, ಅದಕ್ಕೆ ತಗುಲಿದ ಹಾಗೂ ತಗಲುವ ವೆಚ್ಚ ಸೇರಿದಂತೆ ಇನ್ನಿತರ ಅಂಶಗಳನ್ನು ಸಲ್ಲಿಸಬೇಕು. ಅದನ್ನು ಸಮಿತಿ ಪರಿಶೀಲಿಸಿ ಸಂಖ್ಯೆಯೊಂದನ್ನು ನೀಡಿ ಪ್ರಮಾಣೀಕರಣ ಪ್ರಮಾಣಪತ್ರ ನೀಡಲಿದೆ. ಅದನ್ನು ಮಾತ್ರ ಪ್ರಚಾರ ಮಾಡಬೇಕು. ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ಅನುಮತಿ ಪಡೆಯದೇ ಹಾಗೆಯೇ ಪ್ರಚಾರ ಮಾಡಿದ್ದಲ್ಲಿ ಗ್ರೂಪ್ ಅಡ್ಮಿನ್, ಶೇರ್ ಮಾಡಿದವರು ಹಾಗೂ ಅಭ್ಯರ್ಥಿಗಳ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿ ಕ್ರಮ ಕೈಗೊಳ್ಳಲಾಗುವುದು.












Click it and Unblock the Notifications