Actress Amulya: ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಸಹೋದರ ನಿಧನ
ಬೆಂಗಳೂರು, ಅಕ್ಟೋಬರ್ 17: ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Actress Amulya) ಅವರ ಸಹೋದರ ಮತ್ತು ನಿರ್ದೇಶಕರಾಗಿದ್ದ ದೀಪಕ್ ಅರಸ್ ಅವರು ಗುರುವಾರ ಸಂಜೆ ನಿಧನರಾದರು. ನಟಿ ಅಮೂಲ್ಯ ಅವರು ಸೇರಿದಂತೆ ಇಡಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿದು ಚಿತ್ರರಂಗದ ಕಲಾವಿದರು ನಟಿ ಮನೆಗೆ ಭೇಟಿ ನೀಡಿದ್ದಾರೆ.
ಚಿತ್ರರಂಗದಲ್ಲಿ ನಿರ್ದೇಶಕರಾಗಿಯು ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿದ್ದ ದೀಪಕ್ ಅರಸ್ ಅವರು 42ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ್ದಾರೆ. ಕೆಲವು ವರ್ಷಗಳಿಂದ ದೀಪಕ್ ಅರಸ್ ಅವರು ಅನಾರೋಗ್ಯದಿಂದ ನರಳುತ್ತಿದ್ದರು ಎಂದು ತಿಳಿದು ಬಂದಿದೆ. ಕೊನೆಗೆ ಚಿಕಿತ್ಸೆ ಫಲಿಕಾರಿಯಾಗದೇ ಅವರು ಆರ್.ಆರ್ ನಗರದ ಖಾಸಗಿ ಆಸ್ಪ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಮೃತರು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದರು. ಈ ಸಂಬಂಧ ನಿರಂತರ ಚಿಕಿತ್ಸೆ ಪಡೆಯುತ್ತಲೇ (ಡಯಾಲಿಸಿಸ್) ಪಡೆಯುತ್ತಲೇ ಇದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅವರ ಜೀವನ ಕೊನೆಯಾಗಿದೆ. ಮೃತರು ಇಬ್ಬರು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ದೀಪಕ್ ಅರಸ್ ಅವರ ಮೃತ ದೇಹವನ್ನು ಸದ್ಯ ನಗರದ ವೈಯಾಲಿಕಾವಲ್ ನಿವಾಸಕ್ಕೆ ತರಲಾಗಿದೆ. ನಾಳೆ ಶುಕ್ರವಾರ ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ನಾಗಮಂಗಲಕ್ಕೆ ತಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯಸಂಸ್ಕಾರ ಮಾಡುವ ನಿರೀಕ್ಷೆಗಳು ಇವೆ.
ದೀಪಕ್ ಅರಸ್ ಅವರು ಕನ್ನಡದ 'ಮನಸಾಲಜಿ, ಶುಗರ್ ಫ್ಯಾಕ್ಟರಿ' ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇವುಗಳ ಜೊತೆಗೆ ಭವಿಷ್ಯದಲ್ಲಿ ಇನ್ನೊಂದಿಷ್ಟು ಉತ್ತಮ ಸದಭಿರುಚಿಯ ಸಿನಿಮಾಗಳನ್ನು ಮಾಡುವ ಆಲೋಚನೆಯಲ್ಲಿ ಅವರಿದ್ದರು ಎನ್ನಲಾಗಿದೆ.
ನಟಿ ಅಮೂಲ್ಯ ಸಹೋದರ ದೀಪಕ್ ಅವರು ಸಿನಿಮಾ ರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು.ಒಳ್ಳೊಳ್ಳೆಯ ಸಿನಿಮಾಗಳನ್ನು ನಿರ್ದೇಶಿಸಬೇಕು ಎಂಬ ಕನಸು ಇಟ್ಟುಕೊಂಡಿದ್ದರು. ನಿರಂತರವಾಗಿ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದರು. ಈ ಮಧ್ಯೆ ಅವರು ಅನಾರೋಗ್ಯಕ್ಕೆಒಳಗಾಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಣ್ಣನನ್ನು ಕಳೆದುಕೊಂಡಿದ್ದೇವೆ ಎಂದು ನಟಿ ಅಮೂಲ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications