ಸುದೀಪ್‌ಗೆ ಪ್ರಶ್ನೆಗಳನ್ನು ಎದುರಿಸಲು ಸಿದ್ಧರಾಗಿ ಎಂದ ನಟ, ಯಾರು ಗೊತ್ತಾ?
ಬೆಂಗಳೂರು, ಏಪ್ರಿಲ್ 6: ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಘೋಷಿಸುತ್ತೇನೆ ಎಂದು ಹೇಳಿದ ನಟ ಕಿಚ್ಚ ಸುದೀಪ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಸುದೀಪ್‌ಗೆ ಮುಂಬರುವ ಪ್ರಶ್ನೆಗಳನ್ನು ಎದುರಿಸಲು ಸಿದ್ದರಾಗಿ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ ಸುದೀಪ್... ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು, ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ.. ಇನ್ನು ಮುಂದೆ ನಿಮ್ಮನ್ನೂ .. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ ಎಂದು ಬರೆದುಕೊಂಡಿದ್ದಾರೆ.

ನಟ ಸುದೀಪ್ ಅವರು ಬಿಜೆಪಿ ಸೇರುತ್ತಾರೆ ಎಂಬ ವರದಿಗಳ ಬೆನ್ನಲ್ಲೇ ಬುಧವಾರ ಪ್ರತಿಕಾಗೋಷ್ಠಿ ಕರೆದಿದ್ದ ಬಸವರಾಜ ಬೊಮ್ಮಾಯಿ ಅವರ ಜೊತೆ ಭಾಗವಹಿಸಿದ್ದ ಸುದೀಪ್ ಅವರು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ವ್ಯಪ್ತಪಡಿಸುತ್ತೇನೆ. ಹೀಗಾಗಿ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಘೋಷಿಸಿದ್ದರು. ಈ ಬೆನ್ನಲ್ಲೇ ಅನೇಕ ಮಾಧ್ಯಮಗಳು ಸುದೀಪ್ ಅವರು ಬಿಜೆಪಿಗೆ ಬೆಂಬಲ ವ್ಯಕ್ಯಪಡಿದರು ಎಂದು ವರದಿ ಮಾಡಿದ್ದವು.
ಬುಧವಾರವೇ ನಟ ಪ್ರಕಾಶ್ ರಾಜ್ ಅವರು ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಟ್ವೀಟ್ ಮಾಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ಎಂಬ ಉಹಾಪೋಹಗಳಿಗೆ ತೆರೆ ಬಿದ್ದಿದೆ. ಬಿಜೆಪಿಯನ್ನು ನಾನು ಸೇರ್ಪಡೆಗೊಳ್ಳುವುದಿಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಷ್ಟೇ ನನ್ನ ಬೆಂಬಲವಿದೆ. ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ಸುದೀಪ್ ತಿಳಿಸಿದ್ದರು.

ಬಸವರಾಜ ಬೊಮ್ಮಾಯಿ ಅವರೊಂದಿಗೆ ನನಗೆ ವೈಯುಕ್ತಿಕ ಸ್ನೇಹ ಸಂಬಂಧವಿದೆ. ನನ್ನ ಕಷ್ಟದ ಕಾಲದಲ್ಲಿ ಅವರ ನನಗೆ ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಅವರ ಪರ ನಿಂತಿದ್ದೇನೆ. ಈಗ ಅವರಿಗೆ ನನ್ನ ಅನಿವಾರ್ಯವಿದೆ ಎಂಬುದಾಗಿ ಹೇಳಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲುವುದು ಮಾನವೀಯ ಗುಣ' ಎಂದು ಹೇಳಿದ್ದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳನ್ನು ಎದುರಿಸಿದ ಸುದೀಪ್ ಅವರಲ್ಲಿ ಪೊಲಿಟಿಕಲ್ ಕ್ಲ್ಯಾರಿಟಿ ಇರುವುದು ಕಂಡುಬರಲಿಲ್ಲ. ಈ ಸುದ್ದಿಗೋಷ್ಠಿಯು ತುರಾತುರಿಯಲ್ಲಿ ನಡೆದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇಷ್ಟು ವರ್ಷಗಳ ಕಾಲ ಸಿನಿಮಾಗೆ ಸಂಬಂಧಿಸಿದ್ದ ಪ್ರೆಸ್‌ಮೀಟ್‌ಗಳನ್ನು ಎದುರಿಸಿದ್ದ ಸುದೀಪ್, ಮೊದಲ ಬಾರಿಗೆ ಹಾರ್ಡ್ ಹಿಟ್ಟಿಂಗ್ ಪ್ರಶ್ನೆಗಳನ್ನು ಎದುರಿಸಿದ್ದರು.
ನಟ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಗೆ ಬೆಂಬಲ ಸೂಚಿಸಿರುವುದಕ್ಕೆ ಸುದೀಪ್ ಅವರ ಅಭಿಮಾನಿ ಬಳಗದಿಂದಲೇ ವಿರೋಧ ವ್ಯಕ್ತವಾಗಿತ್ತು. ಎರಡು ನಾಲಿಗೆ ಇರೋ ರಾಜಕಾರಣಿಗಳನ್ನ ನಂಬಿ ರಾಜಕೀಯಕ್ಕೂ ರಾಜಕೀಯ ಪಕ್ಷದ ಪ್ರಚಾರಕ್ಕೋ, ಹೋಗೋದಕ್ಕಿಂತ, ಸದಾ ನಿಮ್ಮ ಶ್ರೇಯೋಭಿಲಾಷಿಗಳಾಗಿ ಇರೋ ಅಭಿಮಾನಿಗಳಿಗಾಗಿ ಕೆಲಸ ಮಾಡಿ ಎಂದು ಟ್ವೀಟ್ಟರ್ ಬ್ಲೂಟಿಕ್ ಇರುವ ಅವರ ಅಭಿಮಾನಿ ಬಳಗ ಟೀಮ್ ಕಿಚ್ಚ ಸುದೀಪ್ ಖಾತೆಯಿಂದ ಟ್ವೀಟ್ ಕೂಡ ಮಾಡಲಾಗಿತ್ತು.












Click it and Unblock the Notifications