ತಮಿಳಿನಿಂದ ಕನ್ನಡ ಹುಟ್ಟಿತು ಎಂದ ಕಮಲ್ ಹಾಸನ್ : ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಬೆಂಗಳೂರು ಮೇ 28: ಬಹುಭಾಷಾ ನಟ ಕಮಲ್ ಹಾಸನ್ ಅವರು ತಮ್ಮ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಚಾರ ಮಾಡುವ ವೇಳೆ ಉದ್ದಟತನದ ಹೇಳಿಕೆ ನೀಡಿದ್ದಾರೆ. ತಮಿಳಿನಿಂದಕನ್ನಡ ಹುಟ್ಟಿದ್ದು, ಎಂಬರ್ಥದಲ್ಲಿ ಅವರು ಮಾತನಾಡಿರುವುದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಮಲ್ ಹಾಸನ್ ಅವರ ಹೇಳಿಕೆಯನ್ನು ರಾಜ್ಯದ ಜನತೆಗೆ ಹಾಗೂ ಕನ್ನಡ ಪರ ಸಂಘಟನೆಗಳು ಖಂಡಿಸಿವೆ. ನಟ ಕಮಲ್ ಹಾನಸ್ ಆಕ್ರೋಶ ವ್ಯಕ್ತಪಡಿಸಿವೆ. ಇದೀಗ, ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಟ ಕಮಲ್ ಹಾಸನ್ ಅವರಿಗೆ ಕನ್ನಡದ ಇತಿಹಾಸದ ಬಗ್ಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ ಬೃಹತ್ "ಜೈ ಹಿಂದ್ ಸಭಾ" ಕಾರ್ಯಕ್ರಮದಲ್ಲಿ ಭಾರತೀಯ ಯೋಧರ ಪರಂಪರೆಯನ್ನು ಶ್ಲಾಘಿಸಿ, ನಿವೃತ್ತ ಯೋದ ಸಮೂಹವನ್ನು ಸನ್ಮಾನಿಸಿ, ಹುತಾತ್ಮ ಯೋಧರ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಪುರಸ್ಕರಿಸಿ ಮಾತನಾಡಿ, ಸೈನಿಕರು, ರೈತರು, ವೈದ್ಯರು, ಶಿಕ್ಷಕರು ನಮ್ಮ ತಂದೆ ತಾಯಿಯಷ್ಟೇ ಸ್ಮರಣೀಯರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ತ್ಯಾಗ ಮನೋಭಾವದಿಂದ ಯೋಧರು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ದೇಶದ ರಕ್ಷಣೆ ಕೇವಲ ಯೋಧರ ಜವಾಬ್ದಾರಿಯಲ್ಲ. 140 ಕೋಟಿ ಭಾರತೀಯರ ಜವಾಬ್ದಾರಿ ಎಂದರು. ಶಿಷ್ಟ ರಕ್ಷಣೆ-ದುಷ್ಟರ ಸಂಹಾರದ ವಿಚಾರದಲ್ಲಿ ಭಾರತ ತನ್ನ ಇತಿಹಾಸದಲ್ಲೇ ಯಾವತ್ತೂ ರಾಜಿ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯರ ಬದ್ಧತೆ ಎಂದು ಶ್ಲಾಘಿಸಿದರು. ಇನ್ನೂ ಯೋಧರ ಕ್ಯಾಂಟೀನ್ ಗೆ ಅಬಕಾರಿ ಸುಂಕ ಹಾಕುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಿಎಂ ಘೋಷಣೆ ಮಾಡಿದರು. ಹಾಗೆಯೇ ನಿವೃತ್ತ ಯೋಧರ ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು: ಬಿ ವೈ ವಿಜಯೇಂದ್ರ
ಮಾತೃಭಾಷೆಯನ್ನು ಪ್ರೀತಿಸಬೇಕು, ಆದರೆ ಅದರ ಹೆಸರಿನಲ್ಲಿ ದುರಭಿಮಾನ ಮೆರೆಯುವುದು ಸಂಸ್ಕೃತಿ ಹೀನ ನಡವಳಿಕೆಯಾಗುತ್ತದೆ. ಅದರಲ್ಲೂ ಕಲಾವಿದರಿಗೆ ಪ್ರತಿಯೊಂದು ಭಾಷೆಯನ್ನೂ ಗೌರವಿಸುವ ಸಂಸ್ಕಾರ ಇರಬೇಕು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿರುವ ನಟ ಕಮಲ್ ಹಾಸನ್ ತಮ್ಮ ತಮಿಳು ಭಾಷೆಯನ್ನು ವೈಭವಿಕರಿಸುವ ಮತ್ತಿನಲ್ಲಿ ನಟ ಶಿವರಾಜ್ ಕುಮಾರ್ ಅವರನ್ನೂ ಕುಳ್ಳಿರಿಸಿಕೊಂಡು ಕನ್ನಡವನ್ನು ಅವಮಾನಿಸಿರುವುದು ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.
ಭಾರತವೂ ಸೇರಿದಂತೆ ವಿಶ್ವದ ಹತ್ತು -ಹಲವು ಕಡೆಗಳಲ್ಲಿ ಕನ್ನಡದ ಹೆಗ್ಗುರುತು ಶತಾಶತಮಾನಗಳಿಂದಲೂ ಪಡಿಮೂಡಿದೆ. ಜಗತ್ತಿನ ಭಾಷೆಗಳಲ್ಲಿ ಕನ್ನಡಕ್ಕೆ ಸರ್ವ ಶ್ರೇಷ್ಠ ಮಾನ್ಯತೆ ಇದೆ ಎಂಬ ಕನಿಷ್ಠ ತಿಳುವಳಿಕೆ ಕಮಲ್ ಹಾಸನ್ ರಂತಹ ಸಂಕುಚಿತ ವ್ಯಕ್ತಿತ್ವವಿರುವ ದುರಾಭಿಮಾನಿ ವ್ಯಕ್ತಿಗಳಿಗೆ ತಿಳಿದಿರಲಿ. ಕನ್ನಡವನ್ನು ಅವಹೇಳನ ಮಾಡುವ ಮುನ್ನ ಕನ್ನಡ ಚಿತ್ರಗಳಲ್ಲೂ ನಟಿಸಿರುವ ಕಮಲ್ ಹಾಸನ್ ಕನ್ನಡ,ಕನ್ನಡಿಗರ ಋಣ ತಮ್ಮ ಮೇಲಿದೆ ಎಂಬ ಔದಾರ್ಯತೆಯನ್ನು ಮರೆತಿದ್ದು ಅವರ ಉಪಕಾರ ಸ್ಮರಣೆಯಿಲ್ಲದ ವ್ಯಕ್ತಿತ್ವವನ್ನು ಅನಾವರಣಗೊಳಿಸಿದೆ. ದಕ್ಷಿಣ ಭಾರತದಲ್ಲಿ ಸಾಮರಸ್ಯತೆಯನ್ನು ಬೆಸೆಯಬೇಕಾದ ಕಮಲ್ ಹಾಸನ್ ಅವರು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುತ್ತಿದ್ದರು. ಇದೀಗ ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಕೊಳ್ಳಿಯಿಟ್ಟು ಕನ್ನಡವನ್ನು ಅಪಮಾನಿಸಿದ್ದಾರೆ. ಈ ಕೂಡಲೇ ಕಮಲ್ ಹಾಸನ್ ಅವರು ಈ ಕೂಡಲೇ ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಬಿ ವೈ ವಿಜಯೇಂದ್ರ ಅವರು ಆಗ್ರಹಿಸಿದರು. ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿತು ಎಂಬುದನ್ನು ವ್ಯಾಖ್ಯಾನಿಸಲು ಕಮಲ್ ಹಾಸನ್ ಇತಿಹಾಸ ತಜ್ಞರೇನೂ ಅಲ್ಲ. ಆದರೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಕನ್ನಡ ಭಾಷೆ ಭಾರತದ ಭೂಪಟದಲ್ಲಿ ಸಮೃದ್ಧತೆಯನ್ನು ಸಂಕೇತಿಸುತ್ತದೆ, ಸೌಹಾರ್ದತೆಯನ್ನು ಪ್ರತಿನಿಧಿಸುತ್ತಿದೆ. ಕನ್ನಡಿಗರು ಭಾಷಾ ದ್ವೇಷಿಗಳಲ್ಲ, ಆದರೆ ಕನ್ನಡ ನಾಡು, ನುಡಿ, ಜನ, ಜಲ, ವಿಚಾರಗಳು ಬಂದಾಗ ಸ್ವಾಭಿಮಾನವನ್ನು ಎಂದಿಗೂ ಬಲಿ ಕೊಟ್ಟಿಲ್ಲ ಎಂಬ ಸತ್ಯ ವಿವೇಕ ಸುಟ್ಟುಕೊಂಡವರಂತೆ ಮಾತನಾಡಿರುವ ಕಮಲ್ ಹಾಸನ್ ಅವರಿಗೆ ನೆನಪಿರಲಿ ಎಂದು ಎಚ್ಚರಿಸಿದರು.












Click it and Unblock the Notifications