Darshan: ಭೂತ & ಭವಿಷ್ಯತ್ತಿನ ಎರಡು ಕೊಲೆಗಳು, ತುರ್ತು ಅಗತ್ಯಗಳು
ಬೆಂಗಳೂರು, ಜೂನ್ 19; ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾಧ್ಯಮಗಳಲ್ಲಿ ಸ್ಫೋಟಕ ಸುದ್ದಿಗಳು ಒಂದು ವಾರದಿಂದ ಪ್ರಸಾರವಾಗುತ್ತಲೇ ಇದೆ. ನಟ ದರ್ಶನ್ ಸೇರಿ 17 ಆರೋಪಿಗಳ ಪೊಲೀಸ್ ಕಸ್ಟಡಿ ಜೂನ್ 20ಕ್ಕೆ ಅಂತ್ಯಗೊಳ್ಳಲಿದೆ.
ಜೂನ್ 11ರ ಮಂಗಳವಾರ ಬೆಳಗ್ಗೆ ಕನ್ನಡದ ನಟ, ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ಕೊಲೆ ಆರೋಪದಲ್ಲಿ ಮೈಸೂರಿನಲ್ಲಿ ಬಂಧಿಸಲಾಗಿದೆ. ಬಳಿಕ ಮಾಧ್ಯಮಗಳಲ್ಲಿ ಈ ಸುದ್ದಿ ಹೇಗೆ ಪ್ರಸಾರವಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ.

ಕನ್ನಡ ಸಿನಿಮಾ ನಿರ್ದೇಶಕ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಕರ್ನಾಟಕದ ಎರಡು ಪ್ರಮುಖ ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದು, 'ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು' ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಮಾಧ್ಯಮಗಳ ಕಿವಿ ಹಿಂಡಿದ್ದಾರೆ.
ಮಂಸೋರೆ ಪೋಸ್ಟ್ ಏನು?; ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು.
1. ಭೂತಕಾಲದ ಕೊಲೆ: ಈ ಕೊಲೆಯೊಂದರಲ್ಲಿ ಖ್ಯಾತ ಸಿನೆಮಾ ನಟ ಮುಖ್ಯ ಆರೋಪಿ. ಪ್ರಕರಣ ತನಿಖಾ ಹಂತದಲ್ಲಿದೆ, ಅಂತಿಮ ತೀರ್ಪನ್ನು ನ್ಯಾಯಾಲಯ ನೀಡುತ್ತದೆ. ಈ ಪ್ರಕರಣಕ್ಕೆ ಮಾಧ್ಯಮಗಳು ಇಪ್ಪತ್ತನಾಲ್ಕು ಗಂಟೆಗಳ ಸ್ಫೋಟಕ ಸಮಯವನ್ನು ನಿಗದಿಪಡಿಸಿದ್ದಾರೆ. ಭವಿಷ್ಯತ್ತಿನಲ್ಲಿ ಈ ಕೊಲೆ ಪ್ರಕರಣದಿಂದಾಗಿ ಸಮಾಜದ ಮೇಲೆ ಉಂಟಾಗಬಹುದಾದ ತೀವ್ರತೆಯನ್ನು ನೀವೇ ನಿರ್ಧರಿಸಿ.
2. ಭವಿಷ್ಯತ್ತಿನಲ್ಲಿ ನಡೆಯಲಿರುವ ಸಾಮೂಹಿಕ ಮರಣ ಹೋಮ: ಒಕ್ಕೂಟದಲ್ಲಿ ಹೊಸ ಸರ್ಕಾರ. ಅಸ್ತಿತ್ವಕ್ಕೆ ಬಂದು, ರಾಜ್ಯದ ಲೋಕಸಭಾ ಸದಸ್ಯರೊಬ್ಬರು ಒಕ್ಕೂಟದ ಸರ್ಕಾರದಲ್ಲಿ ಮಂತ್ರಿಯಾದ ಕೂಡಲೇ, ರಾಜ್ಯದ ಸಂಡೂರಿನ ಬಳಿ ಗಣಿಗಾರಿಕೆಗೆ ಅನುಮತಿ ನೀಡುವ ಕಡತವೊಂದಕ್ಕೆ ಸಹಿ ಮಾಡಿದ್ದಾರೆ. ಇದರಿಂದ ಕೊಲೆಯಾಗುವುದು ಸಾವಿರಾರು ಮರಗಳು. ಪ್ರಕೃತಿಯ ನಾಶ.
ಇದರಿಂದಾಗಲಿರುವ ಪರಿಣಾಮ ವಾತಾವರಣದಲ್ಲಿ ಅಸಮತೋಲನ, ಮುಂದಿನ ತಲೆಮಾರಿಗೆ ಹಾನಿಕಾರಿಕ ಪರಿಸರ. ಇದಕ್ಕೆ ಮಾಧ್ಯಮಗಳು ಮೀಸಲಿಟ್ಟಿರುವ-ನಿಗದಿಪಡಿಸಿರುವ ಸಮಯವೆಷ್ಟು?. ಈ ಕೊಲೆಗಳಾದರೆ ಆಗಲಿರುವ ದುಷ್ಪರಿಣಾಮದ ತೀವ್ರತೆಯ ಬಗ್ಗೆ ಸಮಾಜದಲ್ಲಿ ಆಗುತ್ತಿರುವ ಚರ್ಚೆಗಳೆಷ್ಟು?. ಮಾಧ್ಯಮ ಹಾಗೂ ಸಮಾಜ ಚಿಂತಿಸಿ ಆದ್ಯತೆ ನೀಡಬೇಕಾದ ಇವತ್ತಿನ ತುರ್ತು ವಿಷಯ ಯಾವುದಾಗಬೇಕಿತ್ತು?, ಯಾವುದಾಗಿದೆ? ನೀವೇ ನಿರ್ಧರಿಸಿ ಎಂದು ಮಂಸೋರೆ ಪೋಸ್ಟ್‌ನಲ್ಲಿ ಗಮನ ಸೆಳೆದಿದ್ದಾರೆ.
🤔🤔🤔 pic.twitter.com/suLfgKhJaj
— ಮಂಸೋರೆ/ManSoRe (@mansore25) June 18, 2024
ಸಾಮಾಜಿಕ ಜಾಲತಾಣದಲ್ಲಿ ಗಣಿಗಾರಿಕೆ ವಿರೋಧಿಸಿ 'ಸೇವ್ ಸಂಡೂರು ಫಾರೆಸ್ಟ್' ಎಂಬ ಅಭಿಯಾನ ಆರಂಭವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕೆಐಒಸಿಎಲ್ ಗಣಿ ಕಾರ್ಯಾಚರಣೆ ಆರಂಭಿಸುವುದಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿ ಸಹಿ ಹಾಕಿದ್ದಾರೆ ಎಂಬ ವರದಿ ಬಂದ ಬಳಿಕ ಈ ಅಭಿಯಾನ ಆರಂಭವಾಗಿದೆ.
ಸದ್ಯದ ಮಾಹಿತಿಯಂತೆ ಸಂಡೂರು ಅರಣ್ಯ ಪ್ರದೇಶದ ಸ್ವಾಮಿಮಲೈ ಬ್ಲಾಕ್‌ನ ಒಟ್ಟು 470.40 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾಗಲಿದೆ. ಹಂತ-ಹಂತವಾಗಿ ಇದಕ್ಕಾಗಿ ಸುಮಾರು 99 ಸಾವಿರ ಮರಗಳನ್ನು ಕಡಿಯಲಾಗುತ್ತದೆ. ಈ ಕುರಿತು ಪರಿಸರ ಪ್ರೇಮಿಗಳು 'ಸೇವ್ ಸಂಡೂರು ಫಾರೆಸ್ಟ್' ಎಂಬ ಅಭಿಯಾನ ನಡೆಸುತ್ತಿದ್ದಾರೆ. ಆದರೆ ಒಂದು ವಾರದಿಂದ ಇಂತಹ ಗಂಭೀರ ವಿಚಾರ ಮಾಧ್ಯಮಗಳ ಗಮನ ಸೆಳೆದಿಲ್ಲ. ಮಾಧ್ಯಮಗಳ ಕ್ಯಾಮರಾಗಳು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಗೇಟ್ ಮುಂದೆಯೇ ಇವೆ.
ರೇಣುಕಾಸ್ವಾಮಿ ಅಪಹರಣ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ಪ್ರಕರಣ ಸಹ ಗಂಭೀರವಾಗಿರುವುದೇ. ಇದರಲ್ಲಿ ಆರೋಪಿಗಳ ಪಾತ್ರ ಸಾಬೀತಾದರೆ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು. ಆದರೆ ಗಂಟೆಗೊಂದು ಸ್ಫೋಟಕ ಸುದ್ದಿ ಕೊಡುವ ಭರದಲ್ಲಿ ರಾಜ್ಯದ ಉಳಿದ ವಿಷಯಗಳನ್ನು ಮಾಧ್ಯಮಗಳು ನಿರ್ಲಕ್ಷ್ಯ ಮಾಡುತ್ತಿವೆಯೇ? ಎಂಬುದು ನಿರ್ದೇಶಕರ ಪೋಸ್ಟ್‌ನ ಸಾರಾಂಶವಾಗಿದೆ.












Click it and Unblock the Notifications