ಪತಿ ವಿರುದ್ಧ ಆಧಾರರಹಿತ ನಪುಂಸಕ ಆರೋಪವೂ ಮಾನಸಿಕ ಕ್ರೌರ್ಯ!
ಬೆಂಗಳೂರು ಜೂ.15. ಪತ್ನಿ ಪತಿಯ ವಿರುದ್ಧ ಆಧಾರರಹಿತ ನಪುಂಸಕ ಆರೋಪ ಮಾಡುವುದು ಸಹ 'ಮಾನಸಿಕ ಕ್ರೌರ್ಯ' ಆಗಲಿದೆ. ಹೀಗೆಂದು ಹೈಕೋರ್ಟ್ ಕೌಟುಂಬಿಕ ಪ್ರಕರಣವೊಂದರಲ್ಲಿ ವ್ಯಾಖ್ಯಾನಿಸಿ, ಅದನ್ನು ಆಧರಿಸಿ ಪತಿ ವಿಚ್ಛೇದನ ಕೋರಬಹುದು ಎಂದು ಆದೇಶಿಸಿದೆ.
ಅಲ್ಲದೆ, ಪ್ರಕರಣವೊಂದರಲ್ಲಿ ಪತಿಯ ವಿರುದ್ಧ ಆಧಾರರಹಿತವಾಗಿ ನಪುಂಸಕತ್ವದ ಆರೋಪ ಹೊರಿಸಿದ ಪತ್ನಿಯ ನಡೆಯನ್ನು ಆಕ್ಷೇಪಿಸಿ, ವಿಚ್ಛೇದನ ಮಂಜೂರು ಮಾಡಿದೆ.
ಇದರಿಂದಾಗಿ ಇನ್ನು ಮುಂದೆ ಪತ್ನಿಯು ಸುಖಾಸುಮ್ಮನೆ ಪತಿ ವಿರುದ್ಧ ಆರೋಪ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೂ ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ವಿಚ್ಚೇದನ ಮಂಜೂರಾತಿ ಮಾಡಲು ನಿರಾಕರಿಸಿದ ಧಾರವಾಡದ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಕ್ರಮ ರದ್ದು ಕೋರಿ ಧಾರವಾಡದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಪುರಸ್ಕರಿಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ನೇತೃತ್ವದ ವಿಭಾಗೀಯಪೀಠ ಈ ಆದೇಶ ಮಾಡಿದೆ. ಜತೆಗೆ, ಪತ್ನಿ ಮರುಮದುವೆಯಾಗುವರೆಗೂ ಪತ್ನಿಗೆ ಮಾಸಿಕ ಎಂಟು ಸಾವಿರ ರೂ.ಜೀವನಾಂಶ ನೀಡಬೇಕು ಎಂದು ಪತಿಗೆ ಆದೇಶಿಸಿದೆ.

ಹೈಕೋರ್ಟ್ ಆದೇಶವೇನಿದೆ? ನ್ಯಾಯಪೀಠ, "ಪತಿ ವೈವಾಹಿಕ ಜೀವನದ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಲೈಂಗಿಕ ಕ್ರಿಯೆಗೆ ನಡೆಸಲು ಅಸಮರ್ಥ ಎಂದು ಪತ್ನಿ ಆರೋಪಿಸಿದ್ದಾರೆ. ಆದರೆ, ಈ ಆರೋಪವು ಸತ್ಯವೆಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಧಾರ ಒದಗಿಸಿಲ್ಲ. ಪ್ರಜ್ಞಾವಂತ ಮಹಿಳೆ ಮತ್ತೊಬ್ಬರ ಮುಂದೆ ಗಂಡನ ನಪುಂಸಕತ್ವದ ಬಗ್ಗೆ ಸುಳ್ಳು ಆರೋಪ ಮಾಡುವುದಿಲ್ಲ. ಸಾಕ್ಷ್ಯಧಾರವಿಲ್ಲದೆ ಪತಿ ಮಕ್ಕಳನ್ನು ಹೊಂದಲು ಅಸಮರ್ಥ ಎಂದು ಆರೋಪಿಸುವುದು ಮಾನಸಿಕ ಕ್ರೌರ್ಯವಾಗುತ್ತದೆ'' ಎಂದು ಅಭಿಪ್ರಾಯಪಟ್ಟಿದೆ.
''ಅಲ್ಲದೆ, ತಾನು ವೈದ್ಯಕೀಯ ತಪಾಸಣೆಗೆ ಒಳಗಾಗಲು ಸಿದ್ಧವಾಗಿರುವುದಾಗಿ ಪತಿ ತಿಳಿಸಿದ್ದರು. ಆದರೆ, ಪತ್ನಿ ಮಾತ್ರ ಪತಿಯ ನಪುಂಸಕತ್ವವನ್ನು ವೈದ್ಯಕೀಯ ದಾಖಲೆಗಳೊಂದಿಗೆ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. ಹಿಂದೂ ವಿವಾಹ ಕಾಯಿದೆ-1955ರ ಸೆಕ್ಷನ್ 13 ಅಡಿಯಲ್ಲಿ ನಪುಂಸಕತ್ವವು ವಿಚ್ಚೇದನ ಪಡೆಯಲು ಕಾರಣವಲ್ಲವೆಂದು ಹೇಳಲಾಗಿದೆ. ಆದರೆ, ಕಾಯ್ದೆಯ ಸೆಕ್ಷನ್ 13(1)(ಐಎ) ಅಡಿಯಲ್ಲಿ ನಪುಸಂಕತ್ವದ ಕುರಿತು ಸುಳ್ಳು ಆರೋಪ ಮಾಡಿದರೆ ಮಾನಸಿಕ ಕ್ರೌರ್ಯವಾಗುತ್ತದೆ. ಈ ಅಂಶದ ಮೇಲೆ ಪತಿಯು ವಿಚ್ಛೇದನ ಕೋರಬರಹುದು'' ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣ ಹಿನ್ನೆಲೆ ಏನು? ಧಾರವಾಡದ ರಾಜು ಮತ್ತು ಹಾವೇರಿಯ ರಮ್ಯಾ (ಹೆಸರು ಬದಲಿಸಲಾಗಿದೆ) ಅವರು 2013ರ ಮೇ 13ರಂದು ವಿವಾಹವಾಗಿದ್ದರು. ಕೆಲ ತಿಂಗಳ ನಂತರ ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ರಾಜು, ಮದುವೆಯಾದ ಒಂದು ತಿಂಗಳವರೆಗೂ ಪತ್ನಿ ವೈವಾಹಿಕ ಜೀವನಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದರು. ತದನಂತರ ಆಕೆಯ ನಡೆವಳಿಕೆಯಲ್ಲಿ ಬದಲಾವಣೆಯಾಗಿತ್ತು. ಮನೆ ಕೆಲಸ ನಿರ್ವಹಿಸಲು ನಿರಾಕರಿಸುತ್ತಿದ್ದಳು. ವೈವಾಹಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರಲಿಲ್ಲ.
ನಾನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾಗಿದ್ದೇನೆ ಎಂದು ಪದೇ ಪದೇ ಸಂಬಂಧಿಕರ ಮುಂದೆ ಹೇಳುತ್ತಿದ್ದಳು. ಇದರಿಂದ ನನಗೆ ತುಂಬಾ ಮುಜುಗರ ಉಂಟಾಗುತ್ತಿತ್ತು. ಪತ್ನಿ ಈ ನಡೆಯಿಂದ ಮಾನಸಿಕ ಹಿಂಸೆ ಉಂಟಾಗುತ್ತಿದ್ದು, ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿದ್ದರು. ಆದರೆ, ರಾಜು ಅವರ ಮನವಿಯನ್ನು 2015ರ ಜು.17ರಂದು ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications