ಮಂಗಳೂರು, ಹಾಸನ ಸೇರಿ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ದಾಳಿ
ಬೆಂಗಳೂರು, ಮಾರ್ಚ್ 16: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬುಧವಾರ ಎಸಿಬಿ ಅಧಿಕಾರಿಗಳು 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 78 ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಸುಮಾರು 300 ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಚಿನ್ನ, ಬೆಳ್ಳಿ, ಆಸ್ತಿಯ ಕಾಗದ ಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಎಸಿಬಿ ಅಧಿಕಾರಿಗಳು ರಾಮನಗರದ ಎಸಿ ಮಂಜುನಾಥ ಮನೆ ಮೇಲೆ ದಾಳಿ ಮಾಡಿದ್ದಾರೆ. ಮಂಜುನಾಥ್‌ಗೆ ಸಂಬಂಧಪಟ್ಟ 6 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿಯಾಗಿದೆ. #Ramangara #ACB #ACBRaid pic.twitter.com/tNxWEZUesx
— oneindiakannada (@OneindiaKannada) March 16, 2022
ಮಂಗಳೂರು, ಚಿಕ್ಕಮಗಳೂರು, ರಾಮನಗರ, ಹಾಸನ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆದಿದೆ. ಬಾದಾಮಿ ವಲಯ ಅರಣ್ಯಾಧಿಕಾರಿ ಶಿವಾನಂದ್ ಪಿ. ಶರಣಪ್ಪ ಖೇಡಗಿ ಮನೆಯಲ್ಲಿ ಶೋಧ ನಡೆಸಿದಾಗ 3 ಕೆಜಿಗೂ ಅಧಿಕ ಶ್ರೀಗಂಧದ ಕಟ್ಟಿಗೆ ಪತ್ತೆಯಾಗಿದೆ.

* ರಾಮನಗರ; ರಾಮನಗರದಲ್ಲಿ ಉಪ ವಿಭಾಗಾಧಿಕಾರಿ ಮಂಜುನಾಥ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಂಜುನಾಥ್‌ಗೆ ಸಂಬಂಧಪಟ್ಟ 6 ಕಡೆ ಏಕಕಾಲಕ್ಕೆ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಯಲಹಂಕ ಹಾಗೂ ತುಮಕೂರಿನ ತೋಟದ ಮನೆ, ರಾಮನಗರ ಎಸಿ ಕಚೇರಿ ಸೇರಿದಂತೆ ಹಲವು ಕಡೆ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಜುನಾಥ್ ಆಪ್ತರು, ಸೇಹಿತರ ಮನೆಯಲ್ಲೂ ಸಹ ಸುಮಾರು 50 ಅಧಿಕಾರಿಗಳ ತಂಡ ಶೋಧ ಕಾರ್ಯ ಕೈಗೊಂಡಿದೆ. ದಾಖಲೆಗಳ ಪರಿಶೀಲನೆ ಬಳಿಕ ಎಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ? ಎಂಬ ಮಾಹಿತಿ ತಿಳಿಯಲಿದೆ.
* ಮಂಗಳೂರು; ಮಂಗಳೂರಿನಲ್ಲಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದಯಾಸುಂದರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ಮಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿರುವ ದಯಾ ಸುಂದರ್ ಕದ್ರಿ ಕಂಬಳದಲ್ಲಿ ಸ್ವಂತ ಫ್ಲಾಟ್ ಹೊಂದಿದ್ದಾರೆ. ಸ್ವಂತ ಮನೆಯನ್ನು ಬಾಡಿಗೆಗೆ ನೀಡಿ ಬೇರೊಂದು ಮನೆಯಲ್ಲಿ ಬಾಡಿಗೆ ಇದ್ದಾರೆ. ಮಲ್ಲಿಕಟ್ಟೆಯ ವಿಜಯಾ ಅಪಾರ್ಟ್‌ಮೆಂಟ್ ಬಳಿಯ ಬಾಡಿಗೆ ಮನೆಯಲ್ಲಿ ದಯಾಸುಂದರ್ ಕುಟುಂಬ ವಾಸವಾಗಿದೆ. ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
* ಚಿಕ್ಕಮಗಳೂರು; ಚಿಕ್ಕಮಗಳೂರಿನಲ್ಲಿಯೂ ಎಸಿಬಿ ದಾಳಿ ನಡೆಸಿದೆ. ಚಿಕ್ಕಮಗಳೂರಿನ ಗಾಂಧಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಎಇಇ ಗವಿರಂಗಪ್ಪ ಮನೆ ಇದ್ದು, ಅಧಿಕಾರಿಗಳು ಮುಂಜಾನೆ ದಾಳಿ ಮಾಡಿದ್ದಾರೆ. ಚಿಕ್ಕಮಗಳೂರು, ಉಡುಪಿ ವಿಭಾಗದ ಎಸಿಬಿ ಅಧಿಕಾರಿಗಳು ದಾಖಲೆ ಪರೀಶೀಲನೆ ನಡೆಸುತ್ತಿದ್ದಾರೆ.
* ಹಾಸನ; ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿಯೂ ಎರಡು ಕಡೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಸಂಬಂಧಿಕರ ಮನೆಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಬಾಲಕೃಷ್ಣ ಮಾವ ಚಂದ್ರೇಗೌಡರ ಮನೆ ಹಾಗೂ ಬಾಲಕೃಷ್ಣ ಅವರ ಮತ್ತೊಂದು ನಿವಾಸದ ಮೇಲೆಯೂ ದಾಳಿ ಮಾಡಲಾಗಿದೆ.
ಹಾಸನ ಮತ್ತು ಮಂಡ್ಯ ಎಸಿಬಿ ವಿಭಾಗದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೈಸೂರಿನ ವಿಜಯನಗರದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಬಾಲಕೃಷ್ಣ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಬಾಲಕೃಷ್ಣ ಮಾವ ಚಂದ್ರೇಗೌಡ ಕಾಂಗ್ರೆಸ್ ಮುಖಂಡ ಹಾಗೂ ನಿವೃತ ಆರ್‌ಟಿಓ ಅಧಿಕಾರಿ ಬಾಗೂರು ಮಂಜೇಗೌಡರ ಬೀಗರಾಗಿದ್ದಾರೆ.











Click it and Unblock the Notifications