ಎಸಿಬಿ ವಿರುದ್ಧದ ಟೀಕೆ ನಿರ್ಬಂಧಿಸಲು ವಿಭಾಗೀಯಪೀಠದ ಮೊರೆ ಹೋದ ಎಸಿಬಿ ಎಡಿಜಿಪಿ
ಬೆಂಗಳೂರು,ಜು.7. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಲಂಚ ಪ್ರಕರಣದಲ್ಲಿ ನ್ಯಾ.ಎಚ್.ಪಿ. ಸಂದೇಶ್ ಅವರು ಭ್ರಷ್ಟಾಚಾರ ನಿಗ್ರಹ ದಳದ ವಿರುದ್ಧ ಭಾರಿ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹೈಕೋರ್ಟ್ ವಿಭಾಗೀಯಪೀಠದ ಮೊರೆ ಹೋಗಿದ್ದಾರೆ. ಅಲ್ಲದೆ, ಸಂದೇಶ್ ಅವರು ಎಸಿಬಿ ಬಗ್ಗೆ ಟೀಕೆ ಮಾಡದಂತೆ ನಿರ್ಬಂಧಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಕರಣದಲ್ಲಿ ಜಾಮೀನು ಕೋರಿದ ಉಪ ತಹಶೀಲ್ದಾರ್ ಮಹೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿತ್ತು, ಅವರೇ ಕಳಂಕಿತರು ಅವರು ಹೇಗೆ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ್ದರು.
ಅಲ್ಲದೆ ಸಿಂಗ್ ಅವರ ಸೇವಾ ದಾಖಲೆಯನ್ನು ಒದಗಿಸುವಂತೆ ಡಿಪಿಆರ್ ಕಾರ್ಯದರ್ಶಿಗೆ ಜು.4 ರಂದು ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠಕ್ಕೆ ಮೆಟ್ಟಿಲೆರಿದ ಸೀಮಂತ್ ಕುಮಾರ್ ಸಿಂಗ್ ತಮ್ಮ ಸೇವಾ ದಾಖಲೆಗಳನ್ನು ನ್ಯಾ.ಎಚ್ ಪಿ. ಸಂದೇಶ್ ಅವರು ಪರಿಗಣಿಸದಂತೆ ಆದೇಶ ನೀಡಬೇಕು ಮತ್ತು ತಮ್ಮ ವಿರುದ್ಧ ಯಾವುದೇ ಟೀಕೆ ಮಾಡದಂತೆ ನ್ಯಾ.ಎಚ್.ಪಿ. ಸಂದೇಶ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಆ ಅರ್ಜಿ ಶುಕ್ರವಾರ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಹೈಕೋರ್ಟ್ ಏನು ಹೇಳಿತ್ತು?
ನ್ಯಾಯಮೂರ್ತಿ ಕಳದ ವಿಚಾರಣೆ ವೇಳೆ,ಎಸಿಬಿಯಲ್ಲಿನ ಅಕ್ರಮಗಳ ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆಯ ಬೆದರಿಕೆ ಬಂದಿದೆ. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳುವ ಮೂಲಕ ನನಗೇ ವರ್ಗಾವಣೆಯ ಬೆದರಿಕೆ ಹಾಕಲಾಗಿದೆ. ಎಸಿಬಿಯ ಎಡಿಜಿಪಿ ಪವರ್ ಫುಲ್ ಅಂತೆ. ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಹೈಕೋರ್ಟ್‌ನ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆಯಿದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ಜನರ ಒಳಿತಾಗಿ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ ಎಂದರು.
ಅಲ್ಲದೆ, ನನಗೆ ಯಾರ ಹೆದರಿಕೆಯೂ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ನ್ಯಾಯಮೂರ್ತಿಯಾದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನ್ಯಾಯಮೂರ್ತಿ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ಉಳುಮೆ ಮಾಡಿ ಜೀವನ ಸಾಗಿಸಲೂ ಸಿದ್ಧನಿದ್ದೇನೆ.
50 ರುಪಾಯಿಯಲ್ಲಿ ಜೀವನ ನಡೆಸುವುದು ಗೊತ್ತು; 50 ಸಾವಿರ ಹಣದಲ್ಲೂ ಜೀವನ ನಡೆಸುವುದು ಗೊತ್ತಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಸಂವಿಧಾನ ಮಾತ್ರ ಬದ್ಧನೇ ಹೊರತು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ಧನಲ್ಲ ಎಂದು ನುಡಿದರು.
ಯಾರನ್ನುರಕ್ಷಿಸುತ್ತಿದೆ?
ಎಸಿಬಿಯು ಯಾರನ್ನು ರಕ್ಷಣೆ ಮಾಡುತ್ತಿದೆ. ಸಾರ್ವಜನಿಕರನ್ನು ರಕ್ಷಿಸುತ್ತಿದೆಯೇ ಅಥವಾ ಕಳಂಕಿತರನ್ನು ರಕ್ಷಿಸುತ್ತಿದೆಯೇ? ಭ್ರಷ್ಟಾಚಾರದಲ್ಲಿ ಇಡೀ ರಾಜ್ಯವೇ ಹತ್ತಿ ಉರಿಯುತ್ತಿರುವಾಗ ಎಸಿಬಿ ಏನು ಮಾಡುತ್ತಿದೆ. ಬಿ ರಿಪೋರ್ಟ್ ಮಾಹಿತಿ ಬಹಿರಂಗಪಡಿಸಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿತಲ್ಲದೆ, ಎಸಿಬಿ ಎಡಿಜಿಪಿ ವಿವರ ಸರ್ವಿಸ್ ರೆಕಾರ್ಡ್ ನೀಡಲು ಆದೇಶಿಸಿತ್ತು
ಐಐಎಸ್ ಅಧಿಕಾರಿಗಳ ಲಾಭಿ:
ಐಎಎಸ್ ಅಧಿಕಾರಿಯ ಲಾಬಿ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿ, "ಐಎಎಸ್ ಅಧಿಕಾರಿಯೊಬ್ಬರ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಮತ್ತು 5 ಕೆ.ಜಿ. ಚಿನ್ನ ಸಿಕ್ಕಿತ್ತು. ಆದರೆ, ಎಸಿಬಿ ಮಾತ್ರ ಆ ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದೆ. ಬಿ ರಿಪೋರ್ಟ್ ಹಾಕಿದ್ದೇಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು ವರ್ಗಾಯಿಸಲಾಗಿದೆ. ಇದನ್ನೆಲ್ಲಾ ನೋಡಿ ಕಣ್ಮುಚ್ಚಿ ಕೂರುವುದು ಹೇಗೆ? ಐಎಎಸ್ ಐಪಿಎಸ್ ಲಾಬಿ ಗೆ ಒಳಗಾಗುತ್ತಿದೆ. ರಾಜ್ಯಕ್ಕೆ ಅವಮಾನ ಆಗುತ್ತಿದ್ದರೂ ಕಳಂಕಿತ ಡಿಸಿಯನ್ನು ರಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ ಅಧಿಕಾರಿಗಳೇ ದರ್ಬಾರ್ ಮಾಡಲು ಬಿಡಲಾಗಿದ್ದು, ಆ ಮೂಲಕ ಸರ್ಕಾರವೂ ಅಪರಾಧದ ಭಾಗವಾಗಿದೆ'' ಎಂದು ಹೇಳಿದರು.












Click it and Unblock the Notifications