Lok Sabha Election Survey: ಬಿಜೆಪಿಗೆ ಬಂಪರ್ ನಂಬರ್ ಕೊಟ್ಟ ಸಮೀಕ್ಷೆ, ಕಾಂಗ್ರೆಸ್ ಕಥೆಯೇನು?
ಬೆಂಗಳೂರು, ಏಪ್ರಿಲ್. 15: ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಎಲ್ಲಾ ಸ್ಥಾನಗಳನ್ನು ಗೆದ್ದು ಬೀಗಿರುವ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಮುಗ್ಗರಿಸಿತ್ತು. ಆದರೂ, ಈ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಪಣ ತೊಟ್ಟಿದ್ದು, ರಾಷ್ಟ್ರ ನಾಯಕರನ್ನು ಕಣಕ್ಕೆ ಇಳಿಸಿದೆ. ಇದೇ ವೇಳೆ ಹಲವು ಸಮೀಕ್ಷೆಗಳು ಬಿಜೆಪಿ ಪರವಾಗಿ ಬರುತ್ತಿವೆ.
ಇತ್ತೀಚಿನ ಎಬಿಪಿ ನ್ಯೂಸ್ ಮತ್ತು ಸಿವೋಟರ್ ಚುನಾವಣಾ ಪೂರ್ವ ಸಮೀಕ್ಷೆಯು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ವಿಶೇಷವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮಹತ್ವದ ಸ್ಥಾನವನ್ನು ಗಳಿಸಲಿದೆ ಎಂದು ಹೇಳಿದೆ. ಬಿಜೆಪಿ- ಜೆಡಿಎಸ್ ಸ್ಪರ್ಧಿಸಿರುವ 28 ಕ್ಷೇತ್ರಗಳಲ್ಲಿ 23 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದಿದೆ.

ಎಬಿಪಿ ನ್ಯೂಸ್ ಮತ್ತು ಸಿವೋಟರ್ ಅಭಿಪ್ರಾಯ ಸಂಗ್ರಹದ ಪ್ರಕಾರ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟವು ಬರೋಬ್ಬರಿ 23 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ. ಇದರ ಜೊತೆಗೆ ಉಳಿದ ಐದು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಅಂದಾಜಿಸಿದೆ. ಬಿಜೆಪಿ 25 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಅದರ ಮೈತ್ರಿ ಪಕ್ಷ ಜೆಡಿಎಸ್‌ಗೆ ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.
ಕರ್ನಾಟಕದಲ್ಲಿ ಕಮಲ ಅರಳುವುದೇ?
ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಸ್ಥಾನ ಹಂಚಿಕೆನ್ನು ಬಿಟ್ಟರೇ, ಬಿಜೆಪಿ ಒಂಟಿಯಾಗಿ 21 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಜಾತ್ಯತೀತ ಜನತಾ ದಳ ಎರಡು ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆಯಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿರುವ ಕಾಂಗ್ರೆಸ್ 5 ಸ್ಥಾನಗಳಿಗೆ ತೃಪ್ತಿ ಪಡಬೇಕಿದೆ ಎಂದು ಸಮೀಕ್ಷೆ ಹೇಳಿದೆ.
ABP News - C Voters Opinion Poll
— Desh Ka Verdict (@DeshKaVerdict) April 14, 2024
Karnataka - 28 seats
NDA - 23(52%)
INC - 05(42%)#LokSabhaElection2024
ಚುನಾವಣಾ ಆಯೋಗವು ಮಾರ್ಚ್ 16 ರಂದು ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದೆ. ಇದರ ಪ್ರಕಾರ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಕರ್ನಾಟಕದಲ್ಲಿ ಮತದಾನ ನಡೆಯಲಿದೆ.

ಬಿಜೆಪಿ- ಜೆಡಿಎಸ್ ಮೈತ್ರಿ ಪಾಳಯದಿಂದ ಮೂವರು ಮಾಜಿ ಮುಖ್ಯಮಂತ್ರಿಗಳು ಚುನಾವಣಾ ಕಣಕ್ಕೆ ಇಳಿದಿದ್ದು, ಕರ್ನಾಟಕದಲ್ಲಿ ಚುನಾವಣಾ ರಂಗವು ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಬಸವರಾಜ ಬೊಮ್ಮಾಯಿ (ಹಾವೇರಿ), ಜಗದೀಶ್ ಶೆಟ್ಟರ್ (ಬೆಳಗಾವಿ), ಎಚ್ ಡಿ ಕುಮಾರಸ್ವಾಮಿ (ಮಂಡ್ಯ) ಲೋಕಸಭೆ ಕಣಕ್ಕೆ ಇಳಿದಿದ್ದು, ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಿಸಿದೆ.
ಬೊಮ್ಮಾಯಿ ಮತ್ತು ಶೆಟ್ಟರ್ ಅವರು ಬಿಜೆಪಿಯಿಂದ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಒಕ್ಕಲಿಗರಾದ ಕುಮಾರಸ್ವಾಮಿ ಅವರು ಜೆಡಿಎಸ್ ಅನ್ನು ಮುನ್ನಡೆಸುತ್ತಿದ್ದಾರೆ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪುತ್ರರಾಗಿದ್ದಾರೆ. ಕರ್ನಾಟಕದ ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 25ರಲ್ಲಿ ಸ್ಪರ್ಧಿಸಿದ್ದರೆ, ಕಳೆದ ಸೆಪ್ಟೆಂಬರ್‌ನಲ್ಲಿ ಎನ್‌ಡಿಎಗೆ ಸೇರ್ಪಡೆಗೊಂಡಿದ್ದ ಜೆಡಿ(ಎಸ್) ಮೂರರಲ್ಲಿ ಸ್ಪರ್ಧಿಸುತ್ತಿದೆ.
ಮತ್ತೊಂದೆಡೆ, ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವನೆಯಲ್ಲಿಯೂ ವಿಧಾನಸಭಾ ಚುನಾವಣೆಯ ಗೆಲುವನ್ನು ಮುಂದಿವರೆಸುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 22 ರಲ್ಲಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಕಾಂಗ್ರೆಸ್ ವಿಶ್ವಾಸಕ್ಕೆ ತಕ್ಕಂತೆ ಲೋಕ್ ಪೋಲ್, ಈದಿನ, ಪೋಲ್ ಟ್ರ್ಯಾಕರ್ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿಯೇ ಫಲಿತಾಂಶ ನೀಡಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶಕ್ಕೆ ಅತೀ ಹತ್ತಿರವಾಗಿದ್ದ ಸಮೀಕ್ಷೆಯನ್ನು ಹೊರಹಾಕಿದ್ದ ಲೋಕ್ ಪೋಲ್ ಈ ಬಾರಿಯೂ ಕಾಂಗ್ರೆಸ್‌ಗೆ ಅಧಿಕ ಸ್ಥಾನ ನೀಡಿದೆ. ಲೋಕ್ ಪೋಲ್ ಅಂತಿಮ ಅಂಕಿಅಂಶಗ ಪ್ರಕಾರ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 11 ರಿಂದ 13 ಸ್ಥಾನಗಳನ್ನು ಮಾತ್ರ ಗಳಿಸಲಿದೆ. ಕಾಂಗ್ರೆಸ್ 15 ರಿಂದ 17 ಸ್ಥಾನಗಳನ್ನು ಗಳಿಸಲಿದೆ. ಈ ಸಮೀಕ್ಷೆಗೆ ಒಂದು ಲೋಕಸಭಾ ಕ್ಷೇತ್ರದಿಂದ 1,350 ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.












Click it and Unblock the Notifications