ಎಎಪಿಯ ನಕಲಾದ 5 ಗ್ಯಾರಂಟಿಗಳ ಈಡೇರಿಕೆಗಾಗಿ ಕಾಂಗ್ರೆಸ್‌ಗೆ ನಮ್ಮ ಬೆಂಬಲ?: ಬ್ರಿಜೇಶ್ ಕಾಳಪ್ಪ
ಬೆಂಗಳೂರು, ಮೇ 26: ಕರ್ನಾಟಕದ ಅಧಿಕಾರ ಚುಕ್ಕಾಣೆ ಹಿಡಿದಿರುವ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಚರ್ಚೆ, ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತಿವೆ. ಈ ಮಧ್ಯೆ ಆಮ್ ಆದ್ಮಿ ಪಕ್ಷ ಮಹತ್ವ ನಿರ್ಧಾರ ಮಾಡಿದೆ.
ಕಾಂಗ್ರೆಸ್ ಪಕ್ಷದ ಆಶ್ವಾಸನೆಗಳು ಮತ್ತು ಗ್ಯಾರಂಟಿಗಳು ಆಮ್ ಆದ್ಮಿ ಪಕ್ಷದ 90% ನಕಲು ಆಗಿವೆ. ಇವುಗಳನ್ನು ರಾಜ್ಯದ ಜನತೆಗೆ ಸಂಪೂರ್ಣವಾಗಿ ತಲುಪಿಸಲು ನಾವು ಸದಾ ಸಿದ್ಧರಿದ್ದೇವೆ. ಗ್ಯಾರಂಟಿ ಬೇಡಿಕೆ ಈಡೇರಿಸುವಲ್ಲಿ ನಮ್ಮ ಬೆಂಬಲ ಕಾಂಗ್ರೆಸ್‌ಗೆ ನೀಡಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂವಹನ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಈಗಾಗಲೇ ಇಂತಹ ಗ್ಯಾರಂಟಿ ಬೇಡಿಕೆಗಳ ಈಡೇರಿಸಲಾಗಿದಗೆ. ಆ ರಾಜ್ಯಗಳಿಗೆ ಅನಧಿಕೃತವಾಗಿ ಉನ್ನತ ಅಧಿಕಾರಿಗಳನ್ನು ಕಳಿಸುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರಿಗೆ ಪತ್ರ ಬರೆದರೆ ನಮ್ಮ ಸಂಪೂರ್ಣ ತಾಂತ್ರಿಕ ಸಹಾಯ ಹಸ್ತ ಕಾಂಗ್ರೆಸ್‌ಗೆ ನೀಡುತ್ತೇವೆ ಎಂದು ಅವರು ತಿಳಿಸಿದರು.
ಜನತೆಯಿಂದ ಸಂಪೂರ್ಣ ತಿರಸ್ಕರಿಸಲ್ಪಟ್ಟಿರುವ ಬಿಜೆಪಿ ಇಂದು ಕರ್ನಾಟಕದ ಜನತೆಗೆ ಪ್ರಚೋದಿಸಿ ಗಲಾಟೆ ಮಾಡಿ ಎನ್ನುವ ಮೂಲಕ ಅಶಾಂತಿಯನ್ನು ಮೂಡಿಸಲು ಯತ್ನಿಸುತ್ತಿದೆ. ಈ ರೀತಿಯ ಬಿಜೆಪಿಯ ನಡೆ ಹೇಯಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ನೇರ ವಾಗ್ದಾಳಿ
ಬಿಜೆಪಿ ನಾಯಕರು ಈ ಹಿಂದೆ ರೈತರ ಆದಾಯ ದ್ವಿಗುಣ, ಸರ್ವರಿಗೂ ವಸತಿ, ವಿದೇಶಗಳಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ 15ಲಕ್ಷ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡಿಕೆ, ಐದು ಟ್ರಿಲಿಯನ್ ಆರ್ಥಿಕತೆ ಬುಲೆಟ್ ಟ್ರೈನ್, ಪೆಟ್ರೋಲ್ ಡೀಸೆಲ್ ಬೆಲೆ ಇಳಿಸುತ್ತೇವೆ ಎಂದು ಹೇಳಿ ಕೈ ಚೆಲ್ಲಿದ್ದಾರೆ. ಬೆಲೆ ಇಳಿಕೆಯಂತೆ ಯಾವುದೇ ಆಶ್ವಾಸನೆಗಳನ್ನು ಇದುವರೆಗೂ ಈಡೇರಿಸದೆ ನೈತಿಕತೆ ಕಳೆದುಕೊಂಡ ಬಿಜೆಪಿಯವರು ಏಕಾಏಕಿ ರಾಜ್ಯದ ಶಾಂತಿಗೆ ಭಂಗ ತರುವ ರೀತಿಯಲ್ಲಿ ಅಶಾಂತಿಯನ್ನು ಮೂಡಿಸಲು ಯತ್ನಿಸುತ್ತಿದ್ದಾರೆ. ಇದು ಖಂಡನೀಯ ಎಂದು ಬ್ರಿಜೇಶ್ ಕಾಳಪ್ಪ ವಾಗ್ದಾಳಿ ನಡೆಸಿದರು.
ಜನರಿಗೆ ನೆರವಾಗುವ, ಅಭಿವೃದ್ಧಿಯ ಭರವಸೆಗಳನ್ನು ಈಡೇರಿಸಲು ಆಮ್ ಆದ್ಮಿ ಪಕ್ಷದ ಪ್ರಾಮಾಣಿಕ ಪಾರದರ್ಶಕ ಆಡಳಿತ ಶೈಲಿಯಿಂದ ಮಾತ್ರ ಸಾಧ್ಯ. ಇವುಗಳನ್ನು ರೂಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಕಾರ್ಯೋನ್ಮುಖವಾಗಬೇಕೆಂದು ಅವರು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷವು ಇನ್ನು ಒಂದು ತಿಂಗಳಲ್ಲಿ ತಾನು ನೀಡಿರುವ ಗ್ಯಾರಂಟಿಗಳನ್ನು ಈಡೇರಿಸದಿದ್ದಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಉಸ್ತುವಾರಿ ಜಗದೀಶ್ ವಿ. ಸದಂ ಕಾರ್ಯಾಧ್ಯಕ್ಷ ಶಿವರಾಯಪ್ಪ ಜೋಗಿನ್ ಉಪಸ್ಥಿತರಿದ್ದರು.












Click it and Unblock the Notifications